ನಂಜನಗೂಡು: ರಸ್ತೆ ಬದಿಯ ಒತ್ತುವರಿ ಅಂಗಡಿಗಳು ತಹಶೀಲ್ದಾರ್ ನೇತೃತ್ವದಲ್ಲಿ ತೆರವು

Update: 2020-09-23 17:31 GMT

ಮೈಸೂರು,ಸೆ.23: ಮೈಸೂರು ಜಿಲ್ಲೆ ನಂಜನಗೂಡು ನಗರದ ಫುಟ್‍ಪಾತ್‍ಗಳಲ್ಲಿ ಮತ್ತು ರಸ್ತೆ ಒತ್ತುವರಿ ಮಾಡಿಕೊಂಡು ಅಕ್ರಮವಾಗಿ ತಲೆ ಎದ್ದಿದ್ದ ಅಂಗಡಿಗಳನ್ನು ನಂಜನಗೂಡು ತಹಶೀಲ್ದಾರ್ ಮಹೇಶ್ ಕುಮಾರ್ ನೇತೃತ್ವದಲ್ಲಿ ತೆರವು ಕಾರ್ಯಗೊಳಿಸಲಾಯಿತು.

ನಂಜನಗೂಡು ನಗರದ ಕೆ.ಎಚ್.ಬಿ.ಕಾಲನಿಯ ದೊಡ್ಡ ಉದ್ಯಾನವನದ ಮುಂಭಾಗ ಅಲ್ಲಿನ ಇಂಡೇನ್ ಗ್ಯಾಸ್ ಅಂಗಡಿ ಮಾಲಕ 15 ಅಡಿ ರಸ್ತೆ ಒತ್ತುವರಿ ಮಾಡಿಕೊಂಡು ಮೇಲ್ಚಾವಣಿ ನಿರ್ಮಾಣ ಮಾಡಿಕೊಂಡಿದ್ದರು. ಅವರ ಪಕ್ಕದ ಇಬ್ಬರು ಸಹ ತಾತ್ಕಾಲಿಕ ಅಂಗಡಿ ಶೆಡ್‍ಗಳನ್ನು ನಿರ್ಮಾಣ ಮಾಡಿಕೊಂಡು ಜನರ ಓಡಾಟಕ್ಕೆ ಅನಾನೂಕೂಲ ಉಂಟು ಮಾಡಿದ್ದರು. ಈ ಸಂಬಂಧ ಸ್ಥಳೀಯ ನಗರಸಭಾ ಸದಸ್ಯರುಗಳಾದ ಎಸ್.ಪಿ.ಮಹೇಶ್ ಮತ್ತು ಎನ್.ಎಸ್.ಯೋಗೀಶ್ ಜಿಲ್ಲಾಧಿಕಾರಿ ಮತ್ತು ಉಪವಿಭಾಗಾಧಿಕಾರಿಗಳಿಗೆ ದೂರು ನೀಡಿ ಈ ಹಿಂದೆ ನಗರಸಭಾ ಕಚೇರಿ ಎದುರು ಪ್ರತಿಭಟನೆಯನ್ನು ನಡೆಸಿದ್ದರು.

ಇವರ ಹೋರಾಟಕ್ಕೆ ಸ್ಪಂದಿಸಿದ ಉಪವಿಭಾಗಾಧಿಕಾರಿ ವೆಂಕಟರಾಜು ನಂಜನಗೂಡು ನಗರದಲ್ಲಿ ಒತ್ತುವರಿ ಜಾಗಗಳನ್ನು ತೆರವುಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ಹೀಗಾಗಿ ನಂಜನಗೂಡು ನಗರದಲ್ಲಿ ಒತ್ತುವರಿಯಾಗಿರುವ ಎಲ್ಲಾ ಜಾಗಗಳನ್ನು ಜೆಸಿಬಿ ಯಂತ್ರ, ಟ್ರ್ಯಾಕ್ಟರ್ ಮತ್ತು ಆಟೋಗಳನ್ನು ಬಳಸಿ ನಗರಸಭಾ ಅಧಿಕಾರಿಗಳೊಡಗೂಡಿ ತಹಶೀಲ್ದಾರ್ ನೇತೃತ್ವದಲ್ಲಿ ಒತ್ತುವರಿ ತೆರವುಗೊಳಿಸಲಾಯಿತು.

ಕಾರ್ಯಾಚರಣೆಯಲ್ಲಿ ನಗರಸಭಾ ಅಧಿಕಾರಿಗಳಾದ ಕರಿಬಸವಯ್ಯ, ಎಇಇ ಶ್ರೀನಿವಾಸ್, ಎಇ ಕುಮಾರ್, ಪರಿಸರ ಅಧಿಕಾರಿ, ಅರ್ಚನಾ, ಆರೋಗ್ಯಾಧಿಕಾರಿ ವಸಂತ್, ಕಂದಾಯ ಅಧಿಕಾರಿ ಲಕ್ಷ್ಮಣ್, ಮಹೇಶ್ ಸೇರಿದಂತೆ ಹಲವರು ಭಾಗವಹಿಸಿದ್ದರು.

ಸರ್ಕಲ್ ಇನ್ಸ್‍ಪೆಕ್ಟರ್ ಲಕ್ಷ್ಮಿಕಾಂತ್ ತಳವಾರ್ ನೇತೃತ್ವದಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News