ಮಂಡ್ಯ: ಮೂಲ ಸೌಕರ್ಯಕ್ಕೆ ಒತ್ತಾಯಿಸಿ ಶ್ರಮಿಕರ ಅಹೋರಾತ್ರಿ ಧರಣಿ

Update: 2020-09-23 17:37 GMT

ಮಂಡ್ಯ, ಸೆ.23: ಹಾಲಹಳ್ಳಿ ಬಡಾವಣೆಯಲ್ಲಿ ಕೊಳಚೆ ನಿರ್ಮೂಲನಾ ಮಂಡಳಿಯಿಂದ ತಮಗೆ ನಿರ್ಮಿಸಿರುರುವ ಆಸರೆ ಮನೆಗಳಿಗೆ ಮೂಲಭೂತ ಸೌಕರ್ಯ ಒದಗಿಸಿ ತಮ್ಮ ಕುಟುಂಬಗಳನ್ನು ಸ್ಥಳಾಂತರಿಸಬೇಕೆಂದು ಒತ್ತಾಯಿಸಿ ಶ್ರಮಿಕರು ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಅಹೋರಾತ್ರಿ ಧರಣಿ ನಡೆಸಿದರು.

ಹಾಲಹಳ್ಳಿ ಸ್ಲಂ ಬಡಾವಣೆಯಲ್ಲಿ 712 ಮನೆಗಳನ್ನು ಶ್ರಮಿಕರಿಗೆ ನಿರ್ಮಿಸುತ್ತಿರುವುದು ಸರಿ. ಆದರೆ ಬಹುತೇಕ ಕಾಮಗಾರಿ ಪೂರ್ಣಗೊಂಡು ಒಂದೂವರೆ ವರ್ಷವಾದರೂ, ನೀರು, ವಿದ್ಯುತ್ ಹಾಗೂ ಚರಂಡಿ ಸಂಪರ್ಕ ಸೇರಿ ಮೂಲ ಸೌಲಭ್ಯ ಒದಗಿಸಿಲ್ಲ ಎಂದು ಅವರು ಕಿಡಿಕಾರಿದರು.

ಮನೆಗಳು ಪಾಳು ಬಿದ್ದಿರುವ ಹಿನ್ನಲೆಯಲ್ಲಿ ಕಿಡಿಗೇಡಿಗಳು ಮನೆಗಳನ್ನು ಹೊಕ್ಕು ಅನೈತಿಕ ಚಟುವಟಿಕೆ ನಡೆಸುತ್ತಿದ್ದಾರೆ. ಕುಡುಕರು ರಾತ್ರಿಯಿಡೀ ಕುಡಿದು ಅಲ್ಲೇ ಮಲಗುತ್ತಿದ್ದಾರೆ. ರಾತ್ರಿಯ ವೇಳೆ ಮಾತ್ರವಲ್ಲ, ಹಗಲಿನಲ್ಲೇ ಮನೆಯೊಳಗೆ ತೆರಳಿ ಕುಡಿತದ ತಾಣ ಮಾಡಿಕೊಂಡಿದ್ದಾರೆ. ಮದ್ಯದ ಬಾಟಲಿಗಳು, ಪಾಕೀಟುಗಳು ಮನೆಯೊಳೆಗೆ ಬಿದ್ದು ಚೆಲ್ಲಾಡುತ್ತಿವೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ನೀರು, ವಿದ್ಯುತ್ ಹಾಗೂ ಚರಂಡಿ ಸಂಪರ್ಕ ಸೇರಿ ಮೂಲ ಸೌಲಭ್ಯ ಕರುಣಿಸಿದರೆ ತಕ್ಷಣವೇ ನಿವಾಸಿಗಳನ್ನು ಹೊಸ ಮನೆಗಳಿಗೆ ಸ್ಥಳಾಂತರ ಮಾಡಬಹುದು. ಆ ಮೂಲಕ ಸಂಕಷ್ಟದ ನಡುವೆ ಜೀವನ ನಡೆಸುತ್ತಿರುವ ಶ್ರಮಿಕರಿಗೆ ನೆಮ್ಮದಿಯ ಜೀವನ ಕರುಣಿಸಬಹುದು. ಆದರೆ, ಶಾಸಕರೂ ಸೇರಿದಂತೆ ಜಿಲ್ಲಾಧಿಕಾರಿ, ಕೊಳಚೆ ನಿರ್ಮೂಲನಾ ಮಂಡಳಿ ಅಧಿಕಾರಿಗಳು ಬಡಜನರಿಗೆ ಮನೆ ಹಂಚಿಕೊಡುವ ದೊಡ್ಡ ಮನಸ್ಸು ಮಾಡುತ್ತಿಲ್ಲ ಎಂದು ಅವರು ಆರೋಪಿಸಿದರು.

ಕೂಡಲೇ ಮನೆಗಳ ಕಾಮಗಾರಿ ಪೂರ್ಣಗೊಳಿಸಿ ಅಗತ್ಯ ಮೂಲ ಸೌಲಭ್ಯ ಕಲ್ಪಿಸಿ ಫಲಾನುಭವಿಗೆ ಹಸ್ತಾಂತರ ಮಾಡಬೇಕು ಎಂದು ಆಗ್ರಹಿಸಿದ ಅವರು, ಇಲ್ಲವಾದರೆ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.

ದಲಿತ ಸಂಘರ್ಷ ಸಮಿತಿ ಮುಖಂಡ ಎಂ.ಬಿ.ಶ್ರೀನಿವಾಸ್, ಸೋಮಣ್ಣ, ಮುರುಗನ್, ಮಂಜು, ಅರವಿಂದ್, ಪೊನ್ನುಸ್ವಾಮಿ, ಮಂಜು, ಅರವಿಂದ್, ಇತರ ಮುಖಂಡರು ಧರಣಿ ನೇತೃತ್ವ ವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News