ಅಂಗನವಾಡಿಯಲ್ಲಿಯೇ ಎಲ್‍ಕೆಜಿ, ಯುಕೆಜಿ ಆರಂಭಕ್ಕೆ ಆಗ್ರಹ

Update: 2020-09-23 17:44 GMT

ಬೆಂಗಳೂರು, ಸೆ.23: ಎಲ್‍ಕೆಜಿ ಹಾಗೂ ಯುಕೆಜಿಯನ್ನು ಅಂಗನವಾಡಿ ಕೇಂದ್ರಗಳಲ್ಲಿಯೇ ಆರಂಭಿಸಬೇಕುಹಾಗೂ ಪ್ರತ್ಯೇಕವಾಗಿ ಐಸಿಡಿಎಸ್ ನಿರ್ದೇಶನಾಲಯವನ್ನು ರಚಿಸಬೇಕು ಎಂದು ಆಗ್ರಹಿಸಿ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಸಂಯುಕ್ತ ಸಂಘರ್ಷ ಸಮಿತಿ ಆಗ್ರಹಿಸಿದೆ.

ಬುಧವಾರ ನಗರದಲ್ಲಿ ಜಂಟಿ ಸುದ್ದಿಗೋಷ್ಠಿ ನಡೆಸಿದ ಸಮಿತಿ ಸದಸ್ಯರಾದ ಸಿಐಟಿಯು ರಾಜ್ಯಾಧ್ಯಕ್ಷೆ ಎಸ್. ವರಲಕ್ಷಿ ಹಾಗೂ ಇನ್ನಿತರರು, ನೂತನ ಶಿಕ್ಷಣ ನೀತಿ 2020 ಅನ್ನು ಜನಾಭಿಪ್ರಾಯಕ್ಕೆ ಒಳಪಡಿಸಬೇಕು. ಪೂರ್ವ ಪ್ರಾಥಮಿಕ ಶಿಕ್ಷಣ ನೀಡುವ ಜತೆಗೆ ಕಾರ್ಯಕರ್ತೆಯರಿಗೆ ಐಸಿಡಿಎಸ್‍ಯೇತರ ಕೆಲಸಗಳನ್ನು ನಿಷೇಧಿಸಬೇಕು ಎಂದು ಒತ್ತಾಯಿಸಿದರು.

ಯಾವುದೇ ಶಿಕ್ಷಣ ನೀತಿ ಸಮಾಜದ ಬುನಾದಿ. ಆದರೆ, ಕೇಂದ್ರ ಸರಕಾರ ಏಕಮುಖವಾಗಿ ರಾಷ್ಟ್ರೀಯ ಶಿಕ್ಷಣ ನೀತಿ (ಎನ್‍ಇಪಿ) 2020 ಜಾರಿಗೊಳಿಸಿದೆ. ಇದನ್ನು ಲೋಕಸಭೆ, ರಾಜ್ಯಸಭೆಯಲ್ಲೂ ಚರ್ಚೆಗೆ ಒಳಪಡಿಸಿಲ್ಲ. ಈ ನೀತಿಯನ್ನು ಕನ್ನಡ ಸೇರಿದಂತೆ ಎಲ್ಲಾ ಭಾಷೆಗಳಿಗೆ ಭಾಷಾಂತರಿಸಿ ತಜ್ಞರು, ಶಿಕ್ಷಕರು ಸೇರಿದಂತೆ ಜನಾಭಿಪ್ರಾಯ ಸಂಗ್ರಹಿಸಿ ಜಾರಿಗೊಳಿಸಬೇಕು ಎಂದರು.

ದೂರದಲ್ಲಿರುವ ಶಾಲೆಗಳಿಗೆ ಮತ್ತು ಆರ್ಥಿಕವಾಗಿ ಹಿಂದುಳಿದವರ ಅನುಕೂಲಕ್ಕಾಗಿ ಜನವಸತಿ ಇರುವ ಕಡೆ ಅಂಗನವಾಡಿ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಆದರೆ, ಎನ್‍ಇಪಿಯಲ್ಲಿ 3 ವರ್ಷದ ಮೇಲ್ಪಟ್ಟು ಮಕ್ಕಳನ್ನು ಶಾಲಾ ಸಂಕೀರ್ಣಗಳ ಮತ್ತು ಕ್ಲಸ್ಟರ್ ಗಳಡಿಯಲ್ಲಿ ಸಂಯೋಜಿಸಲಾಗುತ್ತಿದೆ. ಇದರಿಂದ 3ರಿಂದ 6 ವರ್ಷದ ಮಕ್ಕಳು ಬೌದ್ಧಿಕ, ಮಾನಸಿಕ ಮತ್ತು ಆರೋಗ್ಯದಾಯಕ ಶಿಕ್ಷಣದಿಂದ ವಂಚಿತರಾಗಲಿದ್ದಾರೆ. ಜತೆಗೆ ಅಂಗನವಾಡಿ ಕೇಂದ್ರಗಳು ಮೂಲೆಗುಂಪಾಗಲಿವೆ ಎಂದರು.

6 ವರ್ಷದೊಳಗಿನ ಮಕ್ಕಳ ಸಮಗ್ರ ಅಭಿವೃದ್ಧಿಗಾಗಿ 45 ವರ್ಷಗಳಿಂದ ಸಮಗ್ರ ಶಿಶು ಅಭಿವೃದ್ಧಿ ಯೋಜನೆ (ಐಸಿಡಿಎಸ್) ಇದೆ. ಆದರೆ, ನೂತನ ಶಿಕ್ಷಣ ನೀತಿಯಲ್ಲಿ ಈ ಯೋಜನೆ ಕಡೆಗಣಿಸಲಾಗಿದೆ. ಈ ನೀತಿ ಅಂಗನವಾಡಿ ಕೇಂದ್ರಗಳಿಗೆ ಮಾರಕವಾಗಿದೆ. ನೀತಿ ಆಯೋಗವು ಆಹಾರ ಪದಾರ್ಥಗಳ ರೂಪದಲ್ಲಿ ನೀಡುತ್ತಿರುವುದನ್ನು ನಗದು ರೂಪದಲ್ಲಿ ನೀಡಬೇಕು ಎಂದಿದೆ. ಇದರೊಂದಿಗೆ 3 ವರ್ಷ ಮೇಲ್ಪಟ್ಟವರು ಎನ್‍ಇಪಿಗೆ ಒಳಪಟ್ಟರೆ ಅಂಗನವಾಡಿಯ ಅಗತ್ಯವಾದರೂ ಏನು? ಎಂದು ಪ್ರಶ್ನಿಸಿದರು.

ಎಐಟಿಯುಸಿ ಪ್ರಧಾನ ಕಾರ್ಯದರ್ಶಿ ಎಂ. ಜಯಮ್ಮ ಮಾತನಾಡಿ, ಅಂಗನವಾಡಿ ಕೇಂದ್ರಗಳಲ್ಲೇ ಎಲ್‍ಕೆಜಿ, ಯುಕೆಜಿ ಪ್ರಾರಂಭಿಸಬೇಕು. 3ರಿಂದ 6 ವರ್ಷದ ಮಕ್ಕಳ ಸಾರ್ವತ್ರಿಕ ಉಚಿತ ಮತ್ತು ಕಡ್ಡಾಯ ಶಿಕ್ಷಣದ ಹಕ್ಕನ್ನು ಖಾತ್ರಿಪಡಿಸಬೇಕು. ಅಗತ್ಯವಿರುವ ಮೂಲಭೂತ ಸವಲತ್ತುಗಳನ್ನು ಕಲ್ಪಿಸಿ ಕೇಂದ್ರಗಳನ್ನು ಬಲಪಡಿಸಬೇಕು. ಪೂರ್ವ ಪ್ರಾಥಮಿಕ ಶಿಕ್ಷಣ ನೀಡಲು ಅಂಗನವಾಡಿ ನೌಕರರಿಗೆ ತರಬೇತಿ ನೀಡಬೇಕು. ನಮ್ಮಲ್ಲೂ ಉತ್ತಮ ವ್ಯಾಸಂಗ ಮಾಡಿದವರಿದ್ದು ಪೂರ್ವ ಪ್ರಾಥಮಿಕ ಶಿಕ್ಷಣ ನೀಡಲು ಸಿದ್ಧರಿದ್ದೇವೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಟಿಯುಸಿಸಿ ಜಿ.ಆರ್.ಶಿವಶಂಕರ್, ಎಐಯುಟಿಯುಸಿ ಗೌರವಾಧ್ಯಕ್ಷ ಕೆ.ವಿ.ಭಟ್ಟ, ಅಂಗನವಾಡಿ ಕಾರ್ಯಕರ್ತೆಯರ ಸ್ವತಂತ್ರ ಸಂಘಟನೆ ಪ್ರಧಾನ ಕಾರ್ಯದರ್ಶಿ ಬಿ.ಆರ್. ಜಯಲಕ್ಷಿ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News