ನಿಗದಿತ ಅವಧಿಯೊಳಗೆ ಪ್ರಕರಣ ಇತ್ಯರ್ಥವಾಗದಿದ್ದಲ್ಲಿ ಕೋರ್ಟ್ ಮೆಟ್ಟಿಲೇರಲು ಅವಕಾಶ: ಸಚಿವ ಮಾಧುಸ್ವಾಮಿ

Update: 2020-09-24 12:18 GMT

ಬೆಂಗಳೂರು, ಸೆ.24: ಲೋಕಾಯುಕ್ತದಲ್ಲಿ ನಿಗದಿತ ಅವಧಿಯೊಳಗೆ ಪ್ರಕರಣ ಇತ್ಯರ್ಥಗೊಳ್ಳದಿದ್ದಲ್ಲಿ, ಪ್ರಕರಣ ದಾಖಲಿಸಿದ ವ್ಯಕ್ತಿಯು ಕೋರ್ಟ್ ಮೊರೆ ಹೋಗಲು ಅವಕಾಶ ಕಲ್ಪಿಸಲಾಗಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದ್ದಾರೆ.

ಗುರುವಾರ ವಿಧಾನಪರಿಷತ್‍ನಲ್ಲಿ ಕರ್ನಾಟಕ ಲೋಕಾಯುಕ್ತ(ಎರಡನೇ ತಿದ್ದುಪಡಿ) ವಿಧೇಯಕ-2020 ಕುರಿತ ಚರ್ಚೆಯಲ್ಲಿ ವಿಷಯ ಪ್ರಸ್ತಾಪಿಸಿದ ಬಳಿಕ ಸದಸ್ಯರ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ಲೋಕಾಯುಕ್ತ ದೂರು ದಾಖಲಾದ ಬಳಿಕ ಮೂರು ತಿಂಗಳಿನಲ್ಲಿ ಪ್ರಾಥಮಿಕ ತನಿಖೆ ಹಾಗೂ ಆರು ತಿಂಗಳಿನಲ್ಲಿ ತನಿಖೆ ಪೂರ್ಣಗೊಳ್ಳಬೇಕು. ಅದೆರಡೂ ಸಾಧ್ಯವಾಗದಿದ್ದಲ್ಲಿ ದೂರುದಾರರು ನೇರವಾಗಿ ಹೈಕೋರ್ಟ್ ಗೆ ಹೋಗಬಹುದಾಗಿದೆ. ಈ ಕುರಿತು ವಿಧೇಯಕಕ್ಕೆ ತಿದ್ದುಪಡಿ ಮಾಡಲಾಗಿದೆ ಎಂದು ವಿವರಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಪರಿಷತ್ ಸದಸ್ಯ ಮರಿತಿಬ್ಬೇಗೌಡ, ಲೋಕಾಯುಕ್ತದಲ್ಲಿ ಕೆಲಸ ಮಾಡುವವರೇ ಲಂಚವನ್ನು ಪಡೆಯುತ್ತಿರುವುದು ವರದಿಯಾಗುತ್ತಿವೆ. ಇಂತಹ ಸಂದರ್ಭದಲ್ಲಿ ನೀವು ಏನು ಮಾಡಲು ಹೊರಟಿದ್ದೀರಿ. ಮತ್ತೊಂದು ಕಡೆ ಲೋಕಾಯುಕ್ತದಲ್ಲಿ ಅಗತ್ಯವಿರುವಷ್ಟು ಸಿಬ್ಬಂದಿಯ ಕೊರತೆಯಿದೆ. ಹೀಗಾಗಿ, ಮೊದಲು ಪೂರ್ಣ ಪ್ರಮಾಣದ ಸಿಬ್ಬಂದಿಯನ್ನು ನೇಮಕ ಮಾಡಿ ಎಂದು ಆಗ್ರಹಿಸಿದರು.

ಬಿಜೆಪಿಯು ಚುನಾವಣಾ ಪೂರ್ವದಲ್ಲಿ ನಾವು ಅಧಿಕಾರಕ್ಕೆ ಬಂದರೆ ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ)ವನ್ನು ನಿಷ್ಕ್ರಿಯಗೊಳಿಸಿ, ಲೋಕಾಯುಕ್ತಕ್ಕೆ ಪೂರ್ಣ ಪ್ರಮಾಣದ ಅಧಿಕಾರ ನೀಡಲಾಗುತ್ತದೆ ಎಂದು ಭರವಸೆ ನೀಡಿದ್ದರು. ಈಗ ಅಧಿಕಾರದಲ್ಲಿದ್ದರೂ ಯಾಕೆ ಮಾಡಲು ಮುಂದಾಗುತ್ತಿಲ್ಲ. ಲೋಕಾಯುಕ್ತವನ್ನು ಬಲಪಡಿಸುವ ಬದಲಿಗೆ, ಕೇವಲ ಎರಡು ಪುಟದ ತಿದ್ದುಪಡಿಯನ್ನು ತಂದಿದ್ದಾರೆ ಎಂದು ಆಕ್ಷೇಪಿಸಿದರು.

ಅ.ದೇವೇಗೌಡ, ಬಸವರಾಜ ಹೊರಟ್ಟಿ, ವಸಂತಕುಮಾರ್ ಸೇರಿ ಹಲವರು ಲೋಕಾಯುಕ್ತದಲ್ಲಿ ನಿಧಾನಗತಿಯಲ್ಲಿ ನಡೆಯುವ ಪ್ರಕರಣಗಳ ವಿಚಾರಣೆ, ಭ್ರಷ್ಟಾಚಾರ, ಅಕ್ರಮ ಸೇರಿದಂತೆ ಅನೇಕ ವಿಚಾರಗಳ ಕುರಿತು ಧ್ವನಿ ಎತ್ತಿದರು. ಇದಕ್ಕೆಲ್ಲಾ ಪರಿಹಾರ ಮಾರ್ಗಗಳನ್ನು ಕಂಡುಕೊಳ್ಳಲಾಗುವುದು ಎಂದು ಸಚಿವ ಮಾಧುಸ್ವಾಮಿ ಭರವಸೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News