ಕೃಷಿ ಕೋಟಾದಡಿ ಅರ್ಹತೆ ಪಡೆಯಲು ಅಭ್ಯರ್ಥಿಗಳಿಗೆ ಮತ್ತೊಂದು ಅವಕಾಶ

Update: 2020-09-24 12:34 GMT

ಬೆಂಗಳೂರು, ಸೆ.24: ರಾಜ್ಯ ಕೃಷಿ, ತೋಟಗಾರಿಕೆ, ಪಶುಸಂಗೋಪನೆ ವಿಶ್ವವಿದ್ಯಾಲಯಗಳಿಗೆ 2020-21ನೆ ಶೈಕ್ಷಣಿಕ ಸಾಲಿನ ಸ್ನಾತಕ ಪದವಿಗಳಿಗೆ ಆನ್‍ಲೈನ್ ಮೂಲಕ ಕೃಷಿಕರ ಕೋಟಾದಡಿಯಲ್ಲಿ ಪ್ರವೇಶಾತಿ ಮೂಲ ದಾಖಲಾತಿಗಳನ್ನು ಅಪ್‍ಲೋಡ್ ಮಾಡಲು ಸರಕಾರ ಮತ್ತೊಂದು ಅವಕಾಶ ಕಲ್ಪಿಸಿದೆ.

ಸಿಇಟಿ 2020ರಲ್ಲಿ ರ‍್ಯಾಂಕ್ ಪಡೆದು ಈಗಾಗಲೇ ಪ್ರಕಟಿಸಿರುವ ವೇಳಾಪಟ್ಟಿಯಂತೆ ಆ.29ರೊಳಗೆ ಮೂಲ ದಾಖಲೆಗಳನ್ನು ಅಪ್‍ಲೋಡ್ ಮಾಡಲು ಕೊನೆಯ ದಿನ ನಿಗದಿಪಡಿಸಲಾಗಿತ್ತು. ಇದೀಗ ಕೃಷಿ ಕೋಟಾದಡಿ ಅರ್ಹತೆ ಪಡೆಯಲು ಮೂಲ ದಾಖಲೆಗಳನ್ನು ಅಪ್‍ಲೋಡ್ ಮಾಡದೇ ಇರುವ ಅಭ್ಯರ್ಥಿಗಳಿಗೆ ಮತ್ತೊಂದು ಅವಕಾಶ ನೀಡಿದ್ದು ದಿನಾಂಕ ವಿಸ್ತರಿಸಿ ಮತ್ತೊಂದು ಅವಕಾಶ ಕಲ್ಪಿಸಲಾಗಿದೆ.

ಮೂಲ ದಾಖಲೆಗಳನ್ನು ಇಲ್ಲಿಯವರೆಗೆ ಅಪ್‍ಲೋಡ್ ಮಾಡದೇ ಇರುವ ಅಭ್ಯರ್ಥಿಗಳು ಸೆ.25ರಿಂದ 29ರೊಳಗೆ ಸಂಬಂಧಪಟ್ಟ ಕೃಷಿ, ತೋಟಗಾರಿಕೆ, ಪಶುಸಂಗೋಪನೆ ವಿಶ್ವವಿದ್ಯಾಲಯಗಳಲ್ಲಿ ದಾಖಲಾತಿಗಳನ್ನು ಆನ್‍ಲೈನ್ ಮೂಲಕ ಅಪ್‍ಲೋಡ್ ಮಾಡಬಹುದಾಗಿದ್ದು, ಕೃಷಿ ಕೋಟಾದಡಿ ಪ್ರವೇಶಾತಿಗೆ ಸಂಬಂಧಿಸಿದ ದಾಖಲೆಗಳನ್ನು ಅಪ್‍ಲೋಡ್ ಮಾಡಲು ಈಗ ಸೆ.29 ಕೊನೆಯ ದಿನವಾಗಿರುತ್ತದೆ. ವಿದ್ಯಾರ್ಥಿಗಳು ಆದಷ್ಟು ಬೇಗ ಅಂತಿಮ ದಿನದೊಳಗೆ ದಾಖಲೆಗಳನ್ನು ಅಪ್‍ಲೋಡ್ ಮಾಡುವಂತೆ ಕೃಷಿ ಸಚಿವ ಬಿ.ಸಿ.ಪಾಟೀಲ್ ಮನವಿ ಮಾಡಿದ್ದಾರೆ.

ಅಲ್ಲದೆ, ಈ ಮೊದಲು ಶುಲ್ಕ ಪಾವತಿಸಿ ಕೃಷಿ ಕೋಟಾದಡಿ ಪ್ರವೇಶಾತಿಗೆ ಸಂಬಂಧಿಸಿದ ದಾಖಲೆಗಳನ್ನು ಅಪ್‍ಲೋಡ್ ಮಾಡಿ ಅನರ್ಹರಾದ ಅಭ್ಯರ್ಥಿಗಳಿಗೂ ಮತ್ತೊಂದು ಅವಕಾಶ ಕಲ್ಪಿಸಿಕೊಡಲಾಗಿದ್ದು, ಸಂಬಂಧಪಟ್ಟ ಕೃಷಿ ವಿದ್ಯಾವಿದ್ಯಾಲಯ ಪರಿಶೀಲನಾ ಕೇಂದ್ರಗಳಿಗೆ ಅಭ್ಯರ್ಥಿಗಳು ಖುದ್ದು ಭೇಟಿ ನೀಡಿ ಸರಿಯಾದ ದಾಖಲೆಗಳನ್ನು ಸಲ್ಲಿಸಿ ಪರಿಶೀಲಿಸಿಕೊಳ್ಳಬಹುದಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News