ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯ: ಸಿಐಟಿಯು ಕಾರ್ಯಕರ್ತರಿಂದ ಮಂಡ್ಯ ಜಿಲ್ಲಾಧಿಕಾರಿ ಕಚೇರಿ ಚಲೋ

Update: 2020-09-24 13:24 GMT

ಮಂಡ್ಯ, ಸೆ.24: ಕಾರ್ಮಿಕರು, ಶ್ರಮಜೀವಿಗಳ ಹಕ್ಕುಗಳ ರಕ್ಷಣೆ, ಕೋವಿಡ್ ಸಂಕಷ್ಟ ಪರಿಹಾರ ಮತ್ತು ಇತರೆ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಸಿಐಟಿಯು ಕಾರ್ಯಕರ್ತರು ಗುರುವಾರ ನಗರದಲ್ಲಿ ಜಿಲ್ಲಾಧಿಕಾರಿ ಕಚೇರಿ ಚಲೋ ಚಳವಳಿ ನಡೆಸಿದರು.

ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆಯಲ್ಲಿ ತೆರಳಿದ ನೂರಾರು ಮಂದಿ ಕೇಂದ್ರ ಮತ್ತು ರಾಜ್ಯ ಸರಕಾರಗಳ ವಿರುದ್ಧ ಘೋಷಣೆ ಕೂಗಿದರು. ಜಿಲ್ಲಾಧಿಕಾರಿಗಳ ಮೂಲಕ ಕೇಂದ್ರ ಮತ್ತು ರಾಜ್ಯ ಸರಕಾರಕ್ಕೆ ಬೇಡಿಕೆಗಳ ಪಟ್ಟಿಯನ್ನು ಸಲ್ಲಿಸಿದರು.

ಮೋದಿ ನಾಯಕತ್ವದ ಕೇಂದ್ರ ಸರಕಾರ ಆರ್ಥಿಕ, ಸಾಮಾಜಿಕ, ಸಾಂಸ್ಕೃತಿಕ ಮತ್ತು ರಾಜಕೀಯ ಎಲ್ಲಾ ವಲಯಗಳನ್ನು ದೇಶೀ ಮತ್ತು ವಿದೇಶೀ ಖಾಸಗಿ ಬಂಡವಾಳದಾರರ ಲೂಟಿಗೆ ವೇಗವಾಗಿ ಖಾಸಗೀಕರಿಸಲಾಗುತ್ತಿದೆ ಎಂದು ಅವರು ಕಿಡಿಕಾರಿದರು.

ಭೂ ಬಳಕೆ ಮತ್ತು ಪರಿಸರದ ಮನಸೋ ಇಚ್ಚೆ ಲೂಟಿಯನ್ನು ಸರಾಗಗೊಳಿಸಲು ಇಐಎ(ಪರಿಸರ ಪರಿಣಾಮ ಅಂದಾಜು)ಗೆ ಕೇಂದ್ರ ಸರಕಾರ ಸಮಗ್ರ ಬದಲಾವಣೆಗೆ ಸೂಚಿಸಿದೆ. ಶಿಕ್ಷಣದ ಸಂಪೂರ್ಣ ಖಾಸಗೀಕರಣಕ್ಕೆ ಬೇಕಾದ ರೀತಿಯಲ್ಲಿ ನೂತನ ಶಿಕ್ಷಣ ನೀತಿಯನ್ನು ತರಲಾಗಿದೆ. ರಾಜ್ಯ ಸರಕಾರಗಳ ಹಕ್ಕುಗಳನ್ನು ನಾಶ ಮಾಡುವ ಮೂಲಕ ಒಕ್ಕೂಟ ವ್ಯವಸ್ಥೆಗೆ ಧಕ್ಕೆ ತರಲಾಗುತ್ತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಕೇಂದ್ರದ ಜನವಿರೋಧಿ ನೀತಿಗಳನ್ನು ರಾಜ್ಯದ ಬಿಜೆಪಿ ಸರಕಾರ ಮತ್ತಷ್ಟು ವೇಗವಾಗಿ ಜಾರಿಗೊಳಿಸುತ್ತಿದೆ. ಕೆಲಸದ ಅವಧಿ 8 ರಿಂದ 12 ಗಂಟೆಗೆ ಹೆಚ್ಚಳ, ವಾರದ ಕೆಲಸದ ಮಿತಿಯ ಹೆಚ್ಚಳ, ಕೈಗಾರಿಕಾ ವಿವಾದಗಳ ಕಾಯ್ದೆಗೆ ತಿದ್ದುಪಡಿ ತಂದು ಲೇಅಪ್, ಕ್ಲೋಸರ್ಸ್ ಗಳಿಗೆ ಸರಕಾರದ ಪೂರ್ವಾನುಮತಿ ವಿನಾಯಿತಿ ನೀಡಲು ಕಾರ್ಮಿಕರ ಮಿತಿನ್ನು ಹಾಲಿ 100ರಿಂದ 300ಕ್ಕೆ ಹೆಚ್ಚಳ ಮಾಡಿ ಕಾರ್ಮಿಕರ ಹಕ್ಕುಗಳನ್ನು ದಮನ ಮಾಡಲು ರಾಜ್ಯ ಸರಕಾರ ತೀರ್ಮಾನಿಸಿದೆ ಎಂದು ಹೇಳಿದರು.

ಕೆಲಸದ ಅವಧಿ ಹೆಚ್ಚಳ, ಕಾರ್ಮಿಕರ ಕನಿಷ್ಠ ಮಿತಿ 50ಕ್ಕೆ ಹೆಚ್ಚಳ, ಕೈಗಾರಿಕಾ ವಿವಾದಗಳ ಕಾಯ್ದೆಗೆ ತಿದ್ದುಪಡಿ, ಇವೆಲ್ಲವನ್ನೂ ಕೈಬಿಡಬೇಕು. ಅಸಂಘಟಿತ ಹಾಗೂ ಸ್ವಯಂ ಉದ್ಯೋಗಿ ಕಾರ್ಮಿಕರಿಗೆ ಲಾಕ್‍ಡೌನ್ ಅವಧಿಯ ಸಂಕಷ್ಟ ಪರಿಹಾರ ಪ್ಯಾಕೇಜ್ ಘೋಷಿಸಬೇಕು. ಎಪಿಎಂಸಿ, ಭೂ ಸುಧಾರಣಾ, ಅಗತ್ಯ ಸರಕುಗಳ, ವಿದ್ಯುತ್ ಕಾಯ್ದೆಗಳಿಗೆ ತಂದಿರುವ ಸುಗ್ರೀವಾಜ್ಞೆ ಕೈಬಿಡಬೇಕು. ಆರೋಗ್ಯ, ರೈಲ್ವೆ, ವಿದ್ಯುತ್, ರಸ್ತೆ, ದೂರಸಂಪರ್ಕ ಸೇರಿದಂತೆ ಸಾರ್ವಜನಿಕ ಉದ್ದಿಮೆಗಳ ಖಾಸಗೀಕರಣ ನಿಲ್ಲಬೇಕು. ಮೈಶುಗರ್ ಕಾರ್ಖಾನೆಯನ್ನು ಸರಕಾರಿ ಸ್ವಾಮ್ಯದಲ್ಲೇ ಆರಂಭಿಸಬೇಕು, ಮೊದಲಾದ ಬೇಡಿಕೆಗಳನ್ನು ಈಡೇರಿಸುವಂತೆ ಪ್ರತಿಭಟನಾಕಾರರು ಆಗ್ರಹಿಸಿದರು.

ಸಿಐಟಿಯು ಜಿಲ್ಲಾಧ್ಯಕ್ಷ ಎಂ.ಎಂ.ಶಿವಕುಮಾರ್, ಪ್ರಧಾನ ಕಾರ್ಯದರ್ಶಿ ಸಿ.ಕುಮಾರಿ, ಮಹದೇವಮ್ಮ, ಮೋದೂರು ನಾಗರಾಜು, ಮಂಜುಳರಾಜ್, ಜಯಲಕ್ಷಮಮ್ಮ, ಎಸ್.ಬಿ.ರಾಮು, ಜಿ.ಆರ್.ರಾಮು, ಎಂ.ರಾಜು, ಚಂದ್ರಶೇಖರ್, ಪುಟ್ಟಮ್ಮ, ಇತರರು 'ಚಲೋ' ನೇತೃತ್ವ ವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News