ರಾಜ್ಯ ಸರಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿದ ವಿಪಕ್ಷ ಕಾಂಗ್ರೆಸ್

Update: 2020-09-24 13:46 GMT

ಬೆಂಗಳೂರು, ಸೆ. 24: `ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರದ ವಿರುದ್ಧ ವಿಪಕ್ಷ ಕಾಂಗ್ರೆಸ್ ವಿಧಾನಸಭೆಯಲ್ಲಿ ಅವಿಶ್ವಾಸ ನಿರ್ಣಯ'ವನ್ನು ಮಂಡಿಸಿರುವುದು ತೀವ್ರ ರಾಜಕೀಯ ಕುತೂಹಲಕ್ಕೆ ಕಾರಣವಾಗಿದೆ.

ಗುರುವಾರ ವಿಧಾನಸಭೆಯಲ್ಲಿ ಕೇಂದ್ರ ಸಚಿವ ಸುರೇಶ್ ಅಂಗಡಿ ಸಂತಾಪ ಸೂಚನೆ ಬಳಿಕ ಅರ್ಧಗಂಟೆ ಸದನ ಮುಂದೂಡಿದ ನಂತರ ಮಧ್ಯಾಹ್ನ ಪುನಃ ಸದನ ಸಮಾವೇಶಗೊಂಡಾಗ ವಿಪಕ್ಷ ನಾಯಕ ಸಿದ್ದರಾಮಯ್ಯ, ''ಬಹುಮತ ಇದ್ದರೂ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಸರಕಾರವು ಸದನದ ವಿಶ್ವಾಸ ಕಳೆದುಕೊಂಡಿದೆ'' ಎಂದು ಅವಿಶ್ವಾಸ ನಿರ್ಣಯವನ್ನು ಮಂಡಿಸಿದರು. ಅಲ್ಲದೆ, ವಿಧಾನಸಭೆಯ ನಿಯಮ 167ರಡಿ ತಮಗೆ ನೋಟಿಸ್ ನೀಡಿದ್ದೇನೆ. ಹೀಗಾಗಿ ಚರ್ಚೆಗೆ ಅವಕಾಶ ಮಾಡಿಕೊಡಬೇಕು' ಎಂದು ಕೋರಿದರು.

'ತಮ್ಮ ನೋಟಿಸ್ ನನಗೆ ತಲುಪಿದೆ' ಎಂದು ಸ್ಪೀಕರ್ ಕಾಗೇರಿ ದೃಢಪಡಿಸಿದರು. 'ಅವಿಶ್ವಾಸ ನಿರ್ಣಯ ಮಂಡಿಸಲು ಕನಿಷ್ಠ 23 ಮಂದಿ ಸದಸ್ಯರ ಬೆಂಬಲ ಇರಬೇಕಿರುತ್ತದೆ, ಅದಕ್ಕೂ ಹೆಚ್ಚು ಮಂದಿ ಸದಸ್ಯರು ಇದ್ದಾರೆ' ಎಂದು ಸಿದ್ದರಾಮಯ್ಯ ತಿಳಿಸಿದರು. ವಿಪಕ್ಷ ನಾಯಕರು ನೀಡಿರುವ ಪ್ರಸ್ತಾವದ ಪರವಾಗಿರುವವರು ಎದ್ದು ನಿಲ್ಲಬೇಕು ಎಂದು ಸ್ಪೀಕರ್ ತಿಳಿಸಿದಾಗ ಸಿದ್ದರಾಮಯ್ಯ ಅವರು ಪ್ರಸ್ತಾವದ ಪರವಾಗಿ ಕನಿಷ್ಠ 23 ಸದಸ್ಯರು ಇದ್ದರೆ ಸಾಕು. ನಾವು ಅದಕ್ಕಿಂತ ಹೆಚ್ಚಿದ್ದೇವೆ ಎಂದರು. ಕೂಡಲೇ ಕಾಂಗ್ರೆಸ್ ಪಕ್ಷದ ಸದಸ್ಯರು ಎದ್ದು ನಿಂತು, ಸಿದ್ದರಾಮಯ್ಯರ ಪ್ರಸ್ತಾವಕ್ಕೆ ಬೆಂಬಲ ಸೂಚಿಸಿದರು.

ಈ ಹಂತದಲ್ಲಿ ಮಧ್ಯಪ್ರವೇಶಿಸಿದ ಕಂದಾಯ ಸಚಿವ ಆರ್.ಅಶೋಕ್, `ಹೆಚ್ಚಾದರೆ ಅಮೃತವೂ ವಿಷವಾಗುತ್ತದೆ' ಎಂದು ಛೇಡಿಸಿದರು. `ಸರಕಾರದ ವಿರುದ್ಧ ಅವಿಶ್ವಾಸ ಮಂಡನೆ ಮಾಡಿರುವ ಅತ್ಯಂತ ಗಂಭೀರ ವಿಷಯ ಇಲ್ಲಿ ಪ್ರಸ್ತಾವವಾಗಿದ್ದು, ಚರ್ಚೆಯ ದಿನಾಂಕ ಮತ್ತು ಸಮಯವನ್ನು ಶುಕ್ರವಾರ ಅಥವಾ ಶನಿವಾರ ನಿಗದಿ ಮಾಡಲಾಗುವುದು' ಎಂದು ಸ್ಪೀಕರ್ ವಿವರಣೆ ನೀಡಿದರು.

ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಆಡಳಿತ ಪಕ್ಷದ ಸದಸ್ಯರು, ಏರಿದ ಧ್ವನಿಯಲ್ಲಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು. 'ಅಗತ್ಯದಷ್ಟು ಸಂಖ್ಯೆ ಇಲ್ಲದಿದ್ದರೂ ಕಾಂಗ್ರೆಸ್ ಪಕ್ಷವು ಅವಿಶ್ವಾಸ ನಿರ್ಣಯ ಮಂಡಿಸಿದೆ. ಅವರಿಗೆ ಈಗಲೇ ಚರ್ಚೆಗೆ ಅವಕಾಶ ನೀಡಬೇಕೆಂದು ಯಾವುದೇ ಕಾನೂನು ಇಲ್ಲ. ಹೀಗಾಗಿ ಈ ಬಗ್ಗೆ ಚರ್ಚೆಗೆ ಅವಕಾಶ ನೀಡಬೇಡಿ' ಎಂದು ಸ್ಪೀಕರ್ ಅವರನ್ನು ಕೋರಿದರು.

ಇದಕ್ಕೆ ಧ್ವನಿಗೂಡಿಸಿದ ಸಚಿವ ಅಶೋಕ್, ಕಾಂಗ್ರೆಸ್ ಪಕ್ಷಕ್ಕೆ ರಾಜ್ಯ ಮತ್ತು ದೇಶದಲ್ಲಿಯೂ ಬಹುಮತ ಇಲ್ಲ. ರಾಜಕೀಯ ಗಿಮಿಕ್‍ಗಾಗಿ ನಮ್ಮ ಸರಕಾರದ ವಿರುದ್ಧ ಅವಿಶ್ವಾಸ ನಿರ್ಣಯದ ಪ್ರಸ್ತಾವ ಮಂಡಿಸಿದೆ. ಮತಕ್ಕೆ ಹಾಕಿದರೆ ಸೋಲುವುದು ಖಚಿತ ಎಂದು ಲೇವಡಿ ಮಾಡಿದರು. ಈ ವೇಳೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, `ಸರಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆ ಪ್ರಸ್ತಾವವಾಗಿದೆ. ಇದಕ್ಕೆ ಸದನದ ಒಪ್ಪಿಗೆ ಸಿಕ್ಕಿದೆ. ಹೀಗಿರುವ ಆಡಳಿತ ಪಕ್ಷದವರಿಗೆ ಕುರ್ಚಿಯಲ್ಲಿರಲು ಅರ್ಹತೆ ಇಲ್ಲ. ರಾಜೀನಾಮೆ ನೀಡಿ ಮನೆಗೆ ಹೋಗಬೇಕು' ಎಂದು ವಾಗ್ಬಾಣ ಬಿಟ್ಟರು.

ಇದಕ್ಕೆ ಧ್ವನಿಗೂಡಿಸಿದ ಕಾಂಗ್ರೆಸ್ ಸದಸ್ಯ ಎಚ್.ಕೆ.ಪಾಟೀಲ್, ಪೂರಕ ಅಂದಾಜು ಸೇರಿದಂತೆ ಇನ್ನಿತರ ಮಹತ್ವದ ವಿಚಾರಗಳ ಮಂಡನೆ ನಡೆಯುತ್ತಿದೆ. ಈ ಸಂದರ್ಭದಲ್ಲಿ ಸರಕಾರದ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡನೆ ಪ್ರಸ್ತಾವಕ್ಕೆ ಸದನದ ಅನುಮತಿ ಸಿಕ್ಕಿದೆ. ಹೀಗಾಗಿ ಬೇರೆ ಕಾರ್ಯಕಲಾಪವನ್ನು ಬದಿಗಿಟ್ಟು ಈ ವಿಚಾರ ಚರ್ಚೆಗೆ ಅವಕಾಶ ನೀಡಬೇಕು ಎಂದು ಪಟ್ಟುಹಿಡಿದರು.

'ನೀವು ಸರಕಾರಕ್ಕೆ ವಿಶ್ವಾಸವಿಲ್ಲ ಎಂದು ಅವಿಶ್ವಾಸ ನಿರ್ಣಯ ಮಂಡಿಸಿದ್ದೀರಿ. ಈ ಬಗ್ಗೆ ಸಮಯಾವಕಾಶ ನೋಡಿಕೊಂಡು ನಾಳೆ ಅಥವಾ ನಾಡಿದ್ದು ಚರ್ಚೆಗೆ ಅವಕಾಶ ನೀಡಲಾಗುವುದು’ ಎಂದು ಪ್ರಕಟಿಸಿದ ಸ್ಪೀಕರ್ ವಿಶೇಶ್ವರ ಹೆಗಡೆ ಕಾಗೇರಿ ಅವರು, ಶಾಸನ ರಚನಾ ಕಲಾಪವನ್ನು ಕೈಗೆತ್ತಿಕೊಂಡರು. ಆ ಬಳಿಕ ಕಲಾಪವನ್ನು ಮಧ್ಯಾಹ್ನದ ಭೋಜನ ವಿರಾಮಕ್ಕೆ ಕಲಾಪವನ್ನು ಮುಂದೂಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News