ನನ್ನ ವಿರುದ್ಧದ ಆರೋಪ ಸಾಬೀತಾದರೆ ರಾಜಕೀಯ ನಿವೃತ್ತಿ: ಸಚಿವ ಪ್ರಭು ಚೌಹಾಣ್ ಸವಾಲು

Update: 2020-09-24 14:45 GMT

ಬೆಂಗಳೂರು, ಸೆ.24: ನನ್ನ ಜಾತಿ ಮತ್ತು ಜನ್ಮ ಸ್ಥಳದ ಕುರಿತು ಸಮಾಜಕಲ್ಯಾಣ ಇಲಾಖೆಯ ಮಾಜಿ ಸಚಿವ ಎಚ್.ಆಂಜನೇಯ ಚಿತ್ರದುರ್ಗದಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾಡಿರುವ ಆರೋಪಗಳು ನಿರಾಧಾರ ಹಾಗೂ ಸತ್ಯಕ್ಕೆ ದೂರವಾಗಿವೆ ಎಂದು ಪಶು ಸಂಗೋಪನೆ, ವಕ್ಫ್ ಮತ್ತು ಹಜ್ ಖಾತೆ ಸಚಿವ ಪ್ರಭು ಚೌಹಾಣ್ ಪತ್ರಿಕಾ ಹೇಳಿಕೆ ಮೂಲಕ ಸ್ಪಷ್ಟಪಡಿಸಿದ್ದಾರೆ.

ಆಂಜನೇಯ ಅವರಿಗೆ ನನ್ನ ಜಾತಿ, ಜನ್ಮದ ಮೂಲದ ಬಗ್ಗೆ ತಿಳಿಯಬೇಕಿದ್ದರೆ ಒಮ್ಮೆ ನನ್ನ ಕ್ಷೇತ್ರಕ್ಕೆ ಬಂದು ಸ್ವತಃ ವಾಸ್ತವ ಏನೆಂಬುದು ತಿಳಿದುಕೊಳ್ಳಲಿ. ನಾನು ಸುಳ್ಳು, ಮೋಸದಿಂದ ಜಾತಿ, ಜನ್ಮ ಪ್ರಮಾಣಪತ್ರ ಪಡೆದಿರುವುದು ಸಾಬೀತಾದರೆ ಅದೇ ಕ್ಷಣ ರಾಜಕೀಯದಿಂದ ನಿವೃತ್ತಿ ಪಡೆಯುವೆ. ಒಂದು ವೇಳೆ ಇದು ಸುಳ್ಳು ಎಂದಾದರೆ ಅವರು ಬಹಿರಂಗವಾಗಿ ಕ್ಷಮೆ ಕೋರಲಿ ಎಂದು ಅವರು ಸವಾಲು ಹಾಕಿದ್ದಾರೆ.

ನಾನು ಮೂಲತಃ ಕರ್ನಾಟಕದವನು. ನಾನು ಅಪ್ಪಟ ಕನ್ನಡಿಗ. ಬೀದರ್ ಜಿಲ್ಲೆಯ ಔರಾದ್ ತಾಲೂಕಿನ ಬೋಂತಿ ತಾಂಡಾ ನನ್ನ ಹುಟ್ಟೂರು. ನಾನು ಪರಿಶಿಷ್ಟ ಜಾತಿಯ(ಎಸ್.ಸಿ) ಲಂಬಾಣಿ ಜನಾಂಗಕ್ಕೆ ಸೇರಿದ್ದೇನೆ. ಆದರೆ ಆಂಜನೇಯ ವಾಸ್ತವ ಅರಿಯದೆ ಹಾಗೂ ಯಾರೋ ಕುತಂತ್ರಿಗಳು ನೀಡಿದ  ಸುಳ್ಳು ಮಾಹಿತಿಯನ್ನು ಆಧರಿಸಿ ನನ್ನ ವಿರುದ್ಧ ಆರೋಪ ಮಾಡಿದ್ದಾರೆ ಎಂದು ಅವರು ಹೇಳಿದ್ದಾರೆ.

2008ರಲ್ಲಿ ನಾನು ಮೊದಲ ಸಲ ಔರಾದ್ ವಿಧಾನಸಭೆ ಕ್ಷೇತ್ರದಿಂದ ಸ್ಪರ್ಧೆ ಮಾಡುವ ಸಂದರ್ಭದಲ್ಲಿ ಕೆಲವರು ನನ್ನ ಜಾತಿ, ಜನ್ಮ ಸ್ಥಳದ ಬಗ್ಗೆ ಆಕ್ಷೇಪ ಎತ್ತಿದ್ದರು. ಆಗಿನ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಆಗಿದ್ದ ಹರ್ಷ ಗುಪ್ತಾ ಅವರು ಅಧಿಕಾರಿಗಳಿಂದ ಈ ಬಗ್ಗೆ ತನಿಖೆ ನಡೆಸಿದ್ದರು. ಸ್ಥಳ ಪರಿಶೀಲನೆ, ಅಗತ್ಯ ದಾಖಲಾತಿ ಪರಿಶೀಲನೆ ಬಳಿಕ ಎಸ್‍ಸಿ ಪ್ರಮಾಣ ಪತ್ರ ವಿತರಿಸಿ, ಎಲ್ಲ ಆಕ್ಷೇಪಗಳನ್ನು ತಳ್ಳಿ ಹಾಕಿದ್ದರು. 2009, 2015ರಲ್ಲೂ ಈ ವಿಷಯವನ್ನು ಕೆದಕಲಾಗಿತ್ತು ಎಂದು ಅವರು ಹೇಳಿದರು.

ಔರಾದ್ ಕ್ಷೇತ್ರ ಮಹಾರಾಷ್ಟ್ರದ ಗಡಿಗೆ ಹೊಂದಿಕೊಂಡಿದೆ. ಇಲ್ಲಿನ 65ಕ್ಕೂ ಹೆಚ್ಚು ಗ್ರಾಮಗಳು ಮರಾಠಿ ಪ್ರಭಾವ ಹೊಂದಿವೆ. ನಾನು ಬಾಲ್ಯದಲ್ಲಿದ್ದಾಗ (80ರ ದಶಕದಲ್ಲಿ) ಈ ಭಾಗದಲ್ಲಿ ಕನ್ನಡದ ಶಾಲೆಗಳು ಇರಲಿಲ್ಲ. ಇಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿ ಸಕ್ರಿಯವಾಗಿತ್ತು ಎಂದು ಅವರು ತಿಳಿಸಿದ್ದಾರೆ.

ಇಲ್ಲಿ ಕನ್ನಡ ಶಾಲೆಗಳು ಇರದಿದ್ದ ಕಾರಣ ಅನಿವಾರ್ಯವಾಗಿ ಮರಾಠಿ ಕಲಿಯಬೇಕಾಯಿತು. ಈಗಲೂ ಔರಾದ್ ಕ್ಷೇತ್ರದ ನಾಲ್ಕು ಹೋಬಳಿಗಳ 50-60 ಹಳ್ಳಿಗಳ ಸುಮಾರು 1 ಲಕ್ಷದಷ್ಟು ಜನರು ಮರಾಠಿಯೇ ಮಾತನಾಡುತ್ತಾರೆ. ಹಾಗಾದರೆ ಇವರೆಲ್ಲ ಮಹಾರಾಷ್ಟ್ರದವರಾ? ಎಂಬುದಕ್ಕೆ ಆಂಜನೇಯ ಉತ್ತರಿಸಬೇಕು ಎಂದು ಅವರು ಸವಾಲು ಹಾಕಿದ್ದಾರೆ.

ನಾನು ಶಾಸಕನಾದ ಬಳಿಕ ಗಡಿಯಲ್ಲಿ ಕನ್ನಡ ಕಟ್ಟುವ, ಕನ್ನಡ ಬೆಳೆಸುವ ಕೆಲಸ ಮಾಡುತ್ತಿದ್ದೇನೆ. ಎಲ್ಲ ಕಡೆಗಳಲ್ಲಿ ಕನ್ನಡ ಶಾಲೆಗಳನ್ನು ತೆರೆದು ಕನ್ನಡ ಶಿಕ್ಷಕರನ್ನು ಆದ್ಯತೆ ಮೇಲೆ ನೇಮಕ ಮಾಡಲಾಗಿದೆ. ಈಗ ಬಹುತೇಕ ಮಕ್ಕಳಿಗೆ ಇಲ್ಲಿ ಕನ್ನಡ ಶಿಕ್ಷಣ ಸಿಗುತ್ತಿದೆ. ಗಡಿಯಲ್ಲಿ ನಿರಂತರ ಕನ್ನಡ ಚಟುವಟಿಕೆಗಳನ್ನು ನಡೆಸಲಾಗುತ್ತಿದೆ. ಭಾಷಾ ಸಾಮರಸ್ಯ ಎತ್ತಿ ಹಿಡಿಯಲಾಗಿದೆ ಪ್ರಭು ಚೌಹಾಣ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News