ಅಧಿವೇಶನದಲ್ಲಿ ಗಮನ ಸೆಳೆದ ಶಾಸಕ ಪ್ರಿಯಾಂಕ್ ಖರ್ಗೆ ಮಾಸ್ಕ್

Update: 2020-09-24 16:21 GMT

ಕಲಬುರಗಿ, ಸೆ.24: ಸೋಂಕಿತ ಸರಕಾರ ಎಂದು ಬರೆಯಲಾದ ಮಾಸ್ಕ್ ಧರಿಸಿ ಅಧಿವೇಶನದಲ್ಲಿ ಭಾಗಿಯಾಗುವ ಮೂಲಕ ಗಮನ ಸೆಳೆದ ಕೆಪಿಸಿಸಿ ವಕ್ತಾರ ಹಾಗೂ ಶಾಸಕ ಪ್ರಿಯಾಂಕ್ ಖರ್ಗೆ ಅವರು, ಅದೇ ಫೋಟೋ ಬಳಸಿ ಟ್ವಿಟ್ ಮಾಡುವ ಮೂಲಕ ಬಿಜೆಪಿ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿಧಾನಮಂಡಲ ಅಧಿವೇಶನದಲ್ಲಿ ವೈದ್ಯಕೀಯ ಉಪಕರಣ ಖರೀದಿ ಅವ್ಯವಹಾರ ಆರೋಪದ ಬಗ್ಗೆ ಬಿಸಿ ಬಿಸಿ ಚರ್ಚೆ ನಡೆಯುತ್ತಿದೆ. ಆಡಳಿತ ಪಕ್ಷ ಹಾಗೂ ವಿರೋಧ ಪಕ್ಷಗಳ ನಡುವೆ ಭಾರೀ ಗದ್ದಲ, ಜಟಾಪಟಿಯೂ ನಡೆಯುತ್ತಿದೆ. ಇದರ ಮಧ್ಯೆ ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆಯವರು ಧರಿಸಿದ ಮಾಸ್ಕ್ ಎಲ್ಲರ ಗಮನ ಸೆಳೆಯಿತು. ಅಲ್ಲದೇ, ಅಧಿವೇಶನದಲ್ಲಿ ಭಾಗಿಯಾಗಿದ್ದ ಫೋಟೋಗಳನ್ನು ಟ್ವೀಟ್ ಮಾಡಿದ್ದಾರೆ. 

"ಅಧಿವೇಶನದಲ್ಲಿ ಸಾಕಷ್ಟು ಮಾತನಾಡಲು ಅನುಮತಿ ನಿರಾಕರಿಸಿದ್ದರಿಂದ ವಿರೋಧ ಪಕ್ಷವಾದ ನಮಗೆ ಈ ರೀತಿ ಮಾಸ್ಕ್ ಧರಿಸಿ ಪ್ರತಿಭಟನೆ ಮಾಡುವ ಮೂಲಕ ನಿಮ್ಮ ಸಂದೇಶವನ್ನು ಆಡಳಿತ ಪಕ್ಷದವರಿಗೆ ತಲುಪಿಸುವುದೇ ಸರಿಯಾದ ಮಾರ್ಗವಾಗಿದೆ" ಎಂದು ಶಾಸಕ ಖರ್ಗೆ ಖಾರವಾಗಿ ಟ್ವೀಟ್ ಮಾಡಿದ್ದಾರೆ.

''ದುರಾದೃಷ್ಟವೆಂದರೆ, ಮಾಸ್ಕ್ ಧರಿಸಿ ಕೊರೋನದಿಂದ ನಮ್ಮನ್ನು ರಕ್ಷಿಸಿಕೊಳ್ಳಬಹುದು. ಆದರೆ, ಬಿಜೆಪಿ ಸರಕಾರದ ದುರಾಡಳಿತದಿಂದಲ್ಲ" ಎಂದು ಪ್ರಿಯಾಂಕ್ ಖರ್ಗೆ ಕುಟುಕಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News