ದಲಿತ ಯುವಕನಿಗೆ ಹಲ್ಲೆ ಪ್ರಕರಣ: ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸಲು ಎಸ್ಸಿ-ಎಸ್ಟಿ ಕಲ್ಯಾಣ ಸಮಿತಿ ಶಿಫಾರಸ್ಸು

Update: 2020-09-24 16:45 GMT

ಬೆಂಗಳೂರು, ಸೆ. 24: `ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆಯ ವೀರಾಪುರ ಗ್ರಾಮದ ದೇವಸ್ಥಾನದ ಆವರಣದಲ್ಲಿ 2019ರ ಜೂನ್ 15ರಂದು ನಡೆದಿದ್ದ ದಲಿತ ಯುವಕನ ಮೇಲೆ ಹಲ್ಲೆ, ಬೆತ್ತಲೆ ಮೆರವಣಿಗೆ ಪ್ರಕರಣ ಸಂಬಂಧ ನಿಷ್ಪಕ್ಷಪಾತವಾಗಿ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸಬೇಕು' ಎಂದು ವಿಧಾನ ಮಂಡಲ ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳ ಕಲ್ಯಾಣ ಸಮಿತಿ ಶಿಫಾರಸ್ಸು ಮಾಡಿದೆ.

ಗುರುವಾರ ವಿಧಾನಸಭೆಯಲ್ಲಿ ಸಮಿತಿ ಅಧ್ಯಕ್ಷ ಎಸ್.ಅಂಗಾರ ಈ ಸಂಬಂಧ ವರದಿಯನ್ನು ಮಂಡಿಸಿದ್ದು, ಪ್ರಕರಣ ಸಂಬಂಧಿಸಿದಂತೆ ಐಜಿಪಿ ಮತ್ತು ಜಿಲ್ಲಾಧಿಕಾರಿಯವರು ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸಲು ಕ್ರಮ ವಹಿಸಬೇಕು. ದಲಿತ ಯುವಕ ಪ್ರತಾಪನ ಚಿಕಿತ್ಸೆ ಪೂರ್ಣವಾಗುವವರೆಗೆ ವೈದ್ಯಕೀಯ ರಸೀದಿಗಳನ್ನು ಸಂಗ್ರಹಿಸಿ ವೈದ್ಯಕೀಯ ವೆಚ್ಚ ಮರುಪಾವತಿಯನ್ನು ಸಮಾಜ ಕಲ್ಯಾಣ ಇಲಾಖೆಯಿಂದ ಭರಿಸಬೇಕು ಮತ್ತು ತಕ್ಷಣ ಸೂಕ್ತ ಪರಿಹಾರವನ್ನು ನೀಡಬೇಕು ಎಂದು ಸೂಚಿಸಲಾಗಿದೆ.

ವ್ಯಕ್ತಿಯೊಬ್ಬನನ್ನು ಸಾರ್ವಜನಿಕವಾಗಿ ಬೆತ್ತಲೆಯಾಗಿ ಮಾಡಿ, ಮರಕ್ಕೆ ಕಟ್ಟಿಹಾಕಿ ಹಲ್ಲೆ ಮಾಡುವುದು ಅಮಾನುಷ. ಅದರಲ್ಲಿಯೂ ಪ್ರತಾಪ್ ಎಂಬ ವ್ಯಕ್ತಿ ಪರಿಶಿಷ್ಟ ಜಾತಿಯವನೆಂದು ಗೊತ್ತಾದ ಮೇಲೆ ಮರಕ್ಕೆ ಕಟ್ಟಿ ಮಾರಣಾಂತಿಕವಾಗಿ ಹಲ್ಲೆ ನಡೆಸಿರುವುದು, ಆತನಿಗೆ ಪ್ರಥಮ ಚಿಕಿತ್ಸೆ ಕೊಡಿಸುವ ಬದಲು ಪೊಲೀಸ್‍ನವರು ಕಾಲಿನಿಂದ ಒದ್ದು ಜೀಪ್ ಹತ್ತಿಸಿದ ವರ್ತನೆ ಖಂಡನೀಯ. ಹಲ್ಲೆ ನಡೆದಿರುವ ಬಗ್ಗೆ ಗೊತ್ತಿದ್ದರೂ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುವವರೆಗೂ ಎಫ್‍ಐಆರ್ ದಾಖಲಿಸಿಕೊಳ್ಳದೆ ಉದ್ದೇಶಪೂರ್ವಕವಾಗಿ ಎಸ್‍ಐರಿಂದ ಡಿವೈಎಸ್‍ಪಿ ವರೆಗಿನ ಅಧಿಕಾರಿಗಳು ಕರ್ತವ್ಯ ನಿರ್ವಹಣೆಯಲ್ಲಿ ಲೋಪ ಮತ್ತು ಕಾನೂನು ಉಲ್ಲಂಘನೆ ಮಾಡಲಾಗಿದೆ. ಕಾನೂನಿನ ಚೌಕಟ್ಟಿನಲ್ಲಿ ಕರ್ತವ್ಯ ನಿರ್ವಹಿಸದಿರುವುದರಿಂದ ಕೂಡಲೇ ಸಂಬಂಧಿಸಿದವರ ಮೇಲೆ ಕಾನೂನು ರೀತಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸಮಿತಿಯು ನಿರ್ದೇಶನ ನೀಡಿದೆ.

ಅಮಾನತ್ತಿಗೆ ಸೂಚನೆ: ಪ್ರಕರಣದಲ್ಲಿ ಎಸ್‍ಐ ಒಬ್ಬರನ್ನು ಅಮಾನತು ಮಾಡಿ ಉಳಿದವರನ್ನು ಬಿಡುವುದು ಸರಿಯಾದ ಕ್ರಮವಲ್ಲ. ಅಲ್ಲದೆ, ವಿಚಾರಣೆ ವಿಳಂಬವಾದಷ್ಟು ಪ್ರಕರಣ ಬೇರೆ ರೀತಿಯ ತಿರುವು ಪಡೆಯುವ ಸಾಧ್ಯತೆ ಇರುವುದರಿಂದ ಎಸ್ಪಿಯಿಂದ ವರದಿ ಪಡೆದು ಪೊಲೀಸ್ ಇಲಾಖೆ ಮತ್ತು ಜಿಲ್ಲಾಧಿಕಾರಿಗಳು ಪ್ರಕರಣದಲ್ಲಿ ದಿಟ್ಟ ನಿಲುವು ತೆಗೆದುಕೊಂಡು ತಪ್ಪಿತಸ್ಥರ ವಿರುದ್ಧ ಕೂಡಲೇ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸಮಿತಿ ಶಿಫಾರಸ್ಸು ಮಾಡಿದೆ.

ಚಾಮರಾಜನಗರ ಜಿಲ್ಲಾಡಳಿತ, ಜಿಲ್ಲಾ ಪೊಲೀಸ್ ಅಧಿಕಾರಿಗಳು ಸೇರಿದಂತೆ ಈ ವಿಚಾರಕ್ಕೆ ಸಂಬಂಧಿಸಿದ ಸರಕಾರದ ವಿವಿಧ ಸಂಸ್ಥೆಗಳು ಸಕಾಲದಲ್ಲಿ ಕ್ರಮವಹಿಸಿದ್ದರೆ ಇಂತಹ ಘಟನೆ ನಡೆಯುತ್ತಿರಲಿಲ್ಲ. ಇಂತಹ ಘಟನೆ ಪುನರಾವರ್ತನೆಯಾಗದಂತೆ ನೋಡಿಕೊಂಡು ಪರಸ್ಪರ ಶಾಂತಿ, ಸಹಬಾಳ್ವೆ ವಿಶ್ವಾಸದಿಂದ ಮತ್ತು ಮಾನವೀಯತೆಯಿಂದ ಜೀವನ ನಡೆಸಬೇಕು ಎಂದು ಸಮಿತಿ ಗ್ರಾಮಸ್ಥರಲ್ಲಿ ಮನವಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News