ಸರಕಾರಿ ಗೌರವದೊಂದಿಗೆ ಶಾಸಕ ಬಿ.ನಾರಾಯಣರಾವ್ ಅಂತ್ಯಕ್ರಿಯೆ

Update: 2020-09-25 12:00 GMT

ಬೀದರ್, ಸೆ.25: ಬೀದರ್ ಜಿಲ್ಲೆಯ ಬಸವಕಲ್ಯಾಣದ ಹೊರವಲಯದಲ್ಲಿರುವ ಮುಡಬಿ ಕ್ರಾಸ್ ಬಳಿಯ ಆಟೋನಗರದಲ್ಲಿ ಸಕಲ ಸರಕಾರಿ ಗೌರವದೊಂದಿಗೆ ಹಾಗೂ ಸುರಕ್ಷಿತ ಅಂತರ ಕಾಪಾಡಿಕೊಂಡು ಕೊರೋನ ಮಾರ್ಗಸೂಚಿ ಅನುಸಾರ ಶಾಸಕ ಬಿ.ನಾರಾಯಣರಾವ್ ಅವರ ಅಂತ್ಯಸಂಸ್ಕಾರವನ್ನು ಜಿಲ್ಲಾಡಳಿತದಿಂದ ಶುಕ್ರವಾರ ನೆರವೇರಿಸಲಾಯಿತು.

ಮಾರ್ಗಸೂಚಿ ಅನುಸಾರ ಪಿಪಿಇ ಕಿಟ್ ಧರಿಸಿದ್ದ ಆರೋಗ್ಯ ಸಿಬ್ಬಂದಿಗಳು ನಾರಾಯಣರಾವ್ ಅವರ ಪಾರ್ಥಿವ ಶರೀರವನ್ನು ಅಂತ್ಯಸಂಸ್ಕಾರದ ಸ್ಥಳಕ್ಕೆ ತರುತ್ತಿದ್ದಂತೆಯೇ ಕುಟುಂಬದ ಸದಸ್ಯರ ಆಕ್ರಂದನ ಮುಗಿಲು ಮುಟ್ಟಿತ್ತು. ಕುಟುಂಬ ಸದಸ್ಯರು ನಿಗದಿತ ದೂರದಿಂದಲೇ ದರ್ಶನ ಮಾಡಲು ಅವಕಾಶ ಕಲ್ಪಿಸಲಾಯಿತು.

ಪಿಪಿಇ ಕಿಟ್ ಧರಿಸಿದ್ದ ನಾರಾಯಣರಾವ್ ಅವರ ಪತ್ನಿ ಮಲ್ಲಮ್ಮ, ಪುತ್ರರಾದ ಗೌತಮ, ರಾಹುಲ್ ಅವರಿಗೆ ಪಾರ್ಥಿವ ಶರೀರದ ಬಳಿ ಹೋಗಲು ಅವಕಾಶ ನೀಡಲಾಗಿತ್ತು. ಪೊಲೀಸರು ಕುಶಾಲತೋಪು ಹಾರಿಸಿದ ಬಳಿಕ, ಅಂತ್ಯಕ್ರಿಯೆ ನೆರವೇರಿಸಲಾಯಿತು.

ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ, ರಾಜಶೇಖರ ಪಾಟೀಲ, ಬಂಡೆಪ್ಪ ಕಾಶೆಂಪುರ, ಯು.ಟಿ.ಖಾದರ್, ವಿಧಾನ ಪರಿಷತ್ ಸದಸ್ಯರಾದ ವಿಜಯಸಿಂಗ್, ಡಾ.ಚಂದ್ರಶೇಖರ ಪಾಟೀಲ, ಕಲಬುರ್ಗಿ ಸಂಸದ ಡಾ.ಉಮೇಶ ಜಾಧವ, ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News