'ಮಾಸ್ಕ್ ಧರಿಸಲು ಸೂಚಿಸಿ, ಇಲ್ಲವೇ ನಮಗೆ ಪಿಪಿಇ ಕಿಟ್ ಕೊಡಿಸಿ'

Update: 2020-09-25 12:15 GMT

ಬೆಂಗಳೂರು, ಸೆ. 25: `ಕೋವಿಡ್ ಸೋಂಕಿನ ಹಿನ್ನೆಲೆಯಲ್ಲಿ ಈ ಸದನದಲ್ಲಿ ಹಲವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಗಿದೆ. ಮುನ್ನಚ್ಚರಿಕೆಯಾಗಿ ಎಲ್ಲ ಸದಸ್ಯರಿಗೆ ಮಾಸ್ಕ್ ಧರಿಸಿ ಮಾತನಾಡಲು ಸೂಚನೆ ನೀಡಿ. ಇಲ್ಲವಾದರೆ ನಮಗೆ ಒಂದು ಪಿಪಿಇ ಕಿಟ್ ಕೊಡಿಸಿ' ಎಂದು ಕಾಂಗ್ರೆಸ್ ಸದಸ್ಯೆ ಸೌಮ್ಯಾ ರೆಡ್ಡಿ, ಸ್ಪೀಕರ್ ಅವರಿಗೆ ಎಚ್ಚರಿಕೆ ದಾಟಿಯಲ್ಲಿ ಬೇಡಿಕೆಯನ್ನಿಟ್ಟ ಪ್ರಸಂಗ ವಿಧಾನಸಭೆಯಲ್ಲಿ ನಡೆಯಿತು.

ಶುಕ್ರವಾರ ವಿಧಾನಸಭೆಯಲ್ಲಿ ಮಸೂದೆ ಮಂಡನೆ ವೇಳೆ ಕಂದಾಯ ಸಚಿವ ಆರ್.ಅಶೋಕ್ ಮಾಸ್ಕ್ ಧರಿಸದೆ ಮಾತನಾಡುತ್ತಿದ್ದರು. ಈ ವೇಳೆ ಮಧ್ಯ ಪ್ರವೇಶಿಸಿದ ಸೌಮ್ಯಾ ರೆಡ್ಡಿ, ಮಾಸ್ಕ್ ಧರಿಸಿ ಮಾತನಾಡುವಂತೆ ಸೂಚನೆ ನೀಡಿ ಎಂದು ಸಲಹೆ ಮಾಡಿದರು. ಕೊರೋನ ವೈರಸ್ ಸೋಂಕು ನಿಯಂತ್ರಣ ದೃಷ್ಟಿಯಿಂದ ಎಲ್ಲರೂ ಕಡ್ಡಾಯವಾಗಿ ಮಾಸ್ಕ್ ಧರಿಸಿರಬೇಕು ಎಂದು ಹೇಳಿದರು.

ಕಡ್ಡಾಯ: `ಸದನದಲ್ಲಿ ಎಲ್ಲ ಸದಸ್ಯರು ಕಡ್ಡಾಯವಾಗಿ ಮಾಸ್ಕ್ ಧರಿಸಿಯೇ ಕುಳಿತುಕೊಳ್ಳಬೇಕು. ಮಾತನಾಡುವ ವೇಳೆಯೂ ತಪ್ಪದೆ ಮಾಸ್ಕ್ ಹಾಕಿಕೊಂಡೇ ಮಾತನಾಡಬೇಕು. ಕೊರೋನ ಸೋಂಕಿನ ಬಗ್ಗೆ ನಾನು ಇನ್ನು ಎಷ್ಟು ಸೂಚನೆಗಳನ್ನು ನೀಡಬೇಕೋ ಗೊತ್ತಿಲ್ಲ. ಪದೇ ಪದೇ ಸೂಚನೆ ನೀಡಿದರೂ ಸದಸ್ಯರು ಸರಿಯಾಗಿ ಪಾಲಿಸುತ್ತಿಲ್ಲ. ಇದು ಒಳ್ಳೆಯದಲ್ಲ' ಎಂದು ಸ್ಪೀಕರ್ ಕಾಗೇರಿ ಎಚ್ಚರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News