ಶೀಘ್ರದಲ್ಲಿಯೇ ಸ್ಥಳೀಯ ಸಂಸ್ಥೆಗಳಿಗೆ ಅಧ್ಯಕ್ಷ-ಉಪಾಧ್ಯಕ್ಷರ ನೇಮಕ: ಸಚಿವ ನಾರಾಯಣಗೌಡ

Update: 2020-09-25 18:03 GMT

ಬೆಂಗಳೂರು, ಸೆ.25: ರಾಜ್ಯದಲ್ಲಿ ಚುನಾವಣೆ ನಡೆದು ಅಧ್ಯಕ್ಷ ಹಾಗೂ ಉಪಾಧ್ಯಕ್ಷರುಗಳು ಆಯ್ಕೆಯಾಗದ ಸ್ಥಳೀಯ ಸಂಸ್ಥೆಗಳಿಗೆ ಶೀಘ್ರದಲ್ಲಿಯೇ ಚುನಾವಣೆ ನಡೆಸಲಾಗುವುದು ಎಂದು ಸಚಿವ ನಾರಾಯಣಗೌಡ ಹೇಳಿದ್ದಾರೆ.

ಶುಕ್ರವಾರ ವಿಧಾನಪರಿಷತ್‍ನಲ್ಲಿ ಕರ್ನಾಟಕ ಪೌರಸಭೆಗಳ(ತಿದ್ದುಪಡಿ) ವಿಧೇಯಕ-2020 ಮಂಡಿಸಿದ ವೇಳೆ ಪರಿಷತ್‍ನಲ್ಲಿ ವಿಪಕ್ಷಗಳು ರಾಜ್ಯದಲ್ಲಿ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆದು ಎರಡು ವರ್ಷಗಳಾಗುತ್ತಿದ್ದರೂ ಇನ್ನೂ ಅಧ್ಯಕ್ಷ ಹಾಗೂ ಉಪಾಧ್ಯಕ್ಷರನ್ನು ನೇಮಕ ಮಾಡಿಲ್ಲ. ಇದರಿಂದಾಗಿ ಚುನಾಯಿತರಾದವರು ಹುಚ್ಚರಂತಾಗುತ್ತಿದ್ದಾರೆ ಎಂದು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

ಈ ವೇಳೆ ಮಾತನಾಡಿದ ಸಚಿವ ನಾರಾಯಣಗೌಡ, ಚುನಾವಣಾ ಪೂರ್ವದಲ್ಲಿಯೇ ಸರಕಾರ ಪ್ರಕಟಿಸಿದ್ದ ಮೀಸಲಾತಿಯನ್ನು ಪ್ರಶ್ನಿಸಿ ಹಲವು ಕಡೆಗಳಿಂದ ನ್ಯಾಯಾಲಯದಲ್ಲಿ ದಾವೆ ಹೂಡಿದ್ದಾರೆ. ಈ ಸಂಬಂಧ ಸರಕಾರ ಸದನದ ಉಪ ಸಮಿತಿಯೊಂದನ್ನು ರಚಿಸಿ, ಮೀಸಲಾತಿಗೆ ಸಂಬಂಧಿಸಿದಂತೆ ಸಮಗ್ರ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಿದ್ದು, ಕೋರ್ಟ್ ನಿಂದ ಅನುಮತಿ ಸಿಕ್ಕಿದ ಕೂಡಲೇ ಚುನಾವಣೆ ಮಾಡುತ್ತೇವೆ ಎಂದು ತಿಳಿಸಿದರು.

ಇದಕ್ಕೂ ಮೊದಲು ಮಾತನಾಡಿದ ಪರಿಷತ್ ವಿರೋಧ ಪಕ್ಷದ ನಾಯಕ ಎಸ್.ಆರ್.ಪಾಟೀಲ್, ಸದಸ್ಯರು ನ್ಯಾಯಾಲಯಕ್ಕೆ ಹೋಗಿದ್ದಾರೆ. ಆದರೆ, ಸರಕಾರಿ ವಕೀಲರು ಏನಾಗಿದ್ದಾರೆ ಎಂದು ಪ್ರಶ್ನಿಸಿದರು. ಈ ವೇಳೆ ಸಚಿವ ನಾರಾಯಣಗೌಡ ನೀವು ಒಂದು ವರ್ಷ ಅಧಿಕಾರದಲ್ಲಿದ್ದಿರಿ ಅಲ್ವಾ ಯಾಕೆ ಮಾಡಲಿಲ್ಲ ಎಂದು ಅಣಕಿಸಿದರು. ಅದಕ್ಕೆ ಆಕ್ಷೇಪಿಸಿದ ಪಾಟೀಲ್, ನೀವು-ನಾವು ಅನ್ನೋದೆ ಆಯ್ತಾ. ಅದರ ಬದಲಿಗೆ ಈ ಪ್ರಕರಣ ಇತ್ಯರ್ಥವಾಗುವ ಕಡೆಗೆ ಯೋಚನೆ ಮಾಡುತ್ತೀರಾ ಎಂದು ದೂರಿದರು.

ಈ ನಡುವೆ ಸಚಿವ ಸುರೇಶ್ ಕುಮಾರ್ ಪ್ರತಿಕ್ರಿಯಿಸಿ, ಚುನಾಯಿತರಾದವರು ಅಧಿಕಾರ ಸಿಕ್ಕಿಲ್ಲ ಎಂಬ ಅರಿವು ಸರಕಾರಕ್ಕೆ ಇದೆ. ಈ ನಿಟ್ಟಿನಲ್ಲಿ ಪರಿಷ್ಕೃತ ಮೀಸಲಾತಿ ಪಟ್ಟಿ ಪ್ರಕಟಿಸಿದ್ದು, ಅದರ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರಿರುವುದರಿಂದ ತಡವಾಗಿದೆ. ಕೂಡಲೇ ಆ ಸಮಸ್ಯೆಯನ್ನು ಬಗೆಹರಿಸಲಾಗುವುದು ಎಂದು ಹೇಳಿದರು.

ಅನಂತರ ಮಾತನಾಡಿದ ಆಡಳಿತ ಪಕ್ಷದ ಸದಸ್ಯ ಆಯನೂರು ಮಂಜುನಾಥ್, ರಾಜ್ಯದಲ್ಲಿ ಈಗಾಗಲೇ ಹಲವು ಮಹಾನಗರ ಪಾಲಿಕೆಗಳಿವೆ. ಆದರೆ, ಎಲ್ಲಿಯೂ ಏರಿಯಾ ಸಭೆ ಅಥವಾ ವಾರ್ಡ್ ಸಮಿತಿಗಳು ಆಗಲಿಲ್ಲ. ಇನ್ನು, ಆಡಳಿತ ನಡೆಸಲು ಸರಿಯಾದ ಮೂಲಭೂತ ಸೌಲಭ್ಯ, ಕಚೇರಿ ಹಾಗೂ ಸಿಬ್ಬಂದಿಯಿಲ್ಲ. ಕಾರ್ಪೋರೇಟರ್ ಗಳ ಜತೆ ಸಂಪರ್ಕ ಸಾಧಿಸಲು ಸರಿಯಾದ ಅಧಿಕಾರಿಗಳೇ ಇಲ್ಲ ಎಂದು ಹಲವು ನ್ಯೂನತೆಗಳನ್ನು ಪ್ರಸ್ತುತಪಡಿಸಿದರು. ಇದರ ಜತೆಗೆ ಪಿ.ಆರ್.ರಮೇಶ್, ಗೋವಿಂದರಾಜು, ಮರಿತಿಬ್ಬೇಗೌಡ ಸೇರಿದಂತೆ ಹಲವು ಬೆಂಬಲಿಸಿ ಮಾತನಾಡಿದರು.

ಗೂಬೆಗೆ ಹೋಲಿಕೆ: ಸ್ಥಳೀಯ ಸಂಸ್ಥೆಗಳಿಗೆ ನಡೆದ ಚುನಾವಣೆಯಲ್ಲಿ ಆಯ್ಕೆಯಾದವರಿಗೆ ಅಧಿಕಾರ ದೊರಕದ ಕುರಿತು ನಡೆಯುತ್ತಿದ್ದ ಚರ್ಚೆಯ ವೇಳೆ ಮೈಸೂರಿನ ಘಟನೆಯೊಂದನ್ನು ಉಲ್ಲೇಖಿಸಿದ ಸದಸ್ಯ ಮರಿತಿಬ್ಬೇಗೌಡ ಬಿಜೆಪಿ ಸದಸ್ಯ ವೈ.ಎ.ನಾರಾಯಣಸ್ವಾಮಿಯನ್ನು ಗೂಬೆಗೆ ಹೋಲಿಕೆ ಮಾಡಿದರು. ಈ ನಡುವೆ ಆಡಳಿತ ಪಕ್ಷ ಹಾಗೂ ವಿಪಕ್ಷ ಸದಸ್ಯರ ನಡುವೆ ವಾದ-ವಿವಾದಗಳು ನಡೆದವು. ಇದರ ಮಧ್ಯದಲ್ಲಿ ಸಭಾಪತಿ ಪ್ರತಾಪಚಂದ್ರ ಶೆಟ್ಟಿ ಧ್ವನಿವರ್ದಕ ಮೂಲಕ ತಿದ್ದುಪಡಿ ವಿಧೇಯಕವನ್ನು ಅಂಗೀಕರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News