×
Ad

ಮುಖ್ಯಮಂತ್ರಿಯೊಂದಿಗೆ ಸಂಧಾನ ಸಭೆ ವಿಫಲ: ಸೆ.28ರ 'ಕರ್ನಾಟಕ ಬಂದ್‍' ನತ್ತ ರೈತರ ಹೆಜ್ಜೆ

Update: 2020-09-25 20:24 IST

ಬೆಂಗಳೂರು, ಸೆ.25: ಕೇಂದ್ರ ಮತ್ತು ರಾಜ್ಯ ಸರಕಾರಗಳು ಜಾರಿಗೆ ಹೊರಟಿರುವ ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ಸೇರಿದಂತೆ ಇನ್ನಿತರೆ ಸುಗ್ರೀವಾಜ್ಞೆ ಕಾಯ್ದೆಗಳಿಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ಜರುಗಿದ ಸಂಧಾನ ಸಭೆ ವಿಫಲವಾದ ಹಿನ್ನೆಲೆ ಸೆ.28ರಂದು ಕರ್ನಾಟಕ ಬಂದ್‍ಗೆ ರೈತ, ದಲಿತ,ಕಾರ್ಮಿಕರ ಐಕ್ಯ ಹೋರಾಟ ಸಮಿತಿ ಕರೆ ನೀಡಿದೆ.

ಶುಕ್ರವಾರ ನಗರದ ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ರೈತ ಸಂಘಟನೆಗಳ ಮುಖಂಡರ ನಿಯೋಗದ ಜೊತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಸಂಧಾನ ಸಭೆ ನಡೆಸಿದ್ದು, ಈ ವೇಳೆ ರೈತರ ಬೇಡಿಕೆಗೆ ಸ್ಪಂದಿಸದ ಹಿನ್ನೆಲೆ ಮುಖಂಡರು ಕರ್ನಾಟಕ ಬಂದ್ ಚಳವಳಿಯತ್ತ ಹೆಜ್ಜೆ ಹಾಕಿದ್ದಾರೆ.

ಜಮೀನು ಹೊಂದುವ ಮಿತಿ ಕಡಿಮೆ ಮಾಡುವ ಬಗ್ಗೆ ಮಾತ್ರ ಭರವಸೆ ನೀಡಿದರು. ಆದರೆ, ರೈತರಲ್ಲದವರು ಜಮೀನು ಖರೀದಿ ಮಾಡಲು ಅವಕಾಶ ನೀಡಬಾರದು ಎನ್ನುವ ನಮ್ಮ ಬೇಡಿಕೆ ಇದೆ. ಆದರೆ, ಇದಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ಸ್ಪಷ್ಟವಾಗಿ ನಿರಾಕರಿಸಿದ್ದಾರೆ. ಅದೇ ರೀತಿ, ಸರಕಾರ ಕಾಯ್ದೆ ವಿಚಾರದಲ್ಲಿ ತನ್ನ ನಿಲುವು ಬದಲಿಸಿಕೊಳ್ಳದ ಹಿನ್ನೆಲೆ ಸೆ. 28ಕ್ಕೆ ಕರ್ನಾಟಕ ಬಂದ್ ನಡೆಸಲು ಪ್ರತಿಭಟನಾಕಾರರು ತೀರ್ಮಾನ  ಕೈಗೊಳ್ಳಲಾಗಿದೆ ಎಂದು ಸಭೆಯಲ್ಲಿ ಭಾಗವಹಿಸಿದ ರೈತ ಮುಖಂಡರು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದರು.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ರೈತ ಮುಖಂಡ ಕುರುಬೂರು ಶಾಂತಕುಮಾರ್, ಸೆ.28 ರಂದು ಕರ್ನಾಟಕ ಬಂದ್ ನಡೆಸುವ ನಿರ್ಧಾರದಿಂದ ಯಾವುದೇ ಕಾರಣಕ್ಕೂ ಹಿಂದೆ ಸರಿಯದಿರಲು ರೈತ ಸಂಘಟನೆಗಳು ನಿರ್ಧರಿಸಿವೆ. ಸಭೆಯಲ್ಲಿ ರೈತರ ಮನವಿಗೆ ಸ್ಪಂದಿಸದ ಮುಖ್ಯಮಂತ್ರಿ ಯಡಿಯೂರಪ್ಪ ಕಾಯ್ದೆಯಲ್ಲಿ ಯಾವುದೇ ಬದಲಾವಣೆಗೆ ಒಪ್ಪಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕರ್ನಾಟಕ ಪ್ರಾಂತ ರೈತ ಸಂಘದ ಉಪಾಧ್ಯಕ್ಷ ಮಾರುತಿ ಮಾನ್ಪಡೆ ಮಾತನಾಡಿ, ಮುಖ್ಯಮಂತ್ರಿ ಸಮಜಾಯಿಷಿಗೆ ಒಪ್ಪಲು ಸಾಧ್ಯವಿಲ್ಲ. ಭೂ ಸುಧಾರಣೆ ಕಾಯ್ದೆ ತಿದ್ದುಪಡಿ ಕೈ ಬಿಡುವಂತೆ ಒತ್ತಾಯ ಮಾಡಿದ್ದೇವೆ. ಅವರು ನಮಗೆ ಉಪದೇಶ ಮಾಡಲು ಬಂದಿದ್ದರು. ಅದನ್ನು ನಾವು ಒಪ್ಪಿಕೊಂಡಿಲ್ಲ ಎಂದು ತಿಳಿಸಿದರು.

ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಮಾತನಾಡಿ, ಮುಖ್ಯಮಂತ್ರಿ ಯಡಿಯೂರಪ್ಪ ಬಿಲ್‍ಗಳನ್ನು ವಾಪಸ್ ಪಡೆಯುವ ಬಗ್ಗೆ ಯಾವುದೇ ಹಂತದಲ್ಲಿಯೂ ಸಕಾರಾತ್ಮಕವಾಗಿ ಸ್ಪಂದಿಸಲಿಲ್ಲ. ಅವರು ಪ್ರಧಾನಿ ನರೇಂದ್ರ ಮೋದಿ ಮಾತು ಮೀರಲು ಸಿದ್ಧರಿಲ್ಲ. ಹಾಗಾಗಿ, ನಾವು ಸೆ.28ರ ಬಂದ್‍ಗೆ ಮುಂದಾಗಿದ್ದೇವೆ. ರೈತರ ಅನ್ನ ಅವಲಂಬಿಸಿದ ಎಲ್ಲರೂ ಬಂದ್‍ಗೆ ಬೆಂಬಲ ನೀಡಬೇಕು ಎಂದು ಕರೆ ನೀಡಿದರು.

ಮತ್ತೋರ್ವ ರೈತ ಮುಖಂಡ ಬಡಗಲಪುರ ನಾಗೇಂದ್ರ ಮಾತನಾಡಿ, ಕರ್ನಾಟಕ ಬಂದ್ ಮಾಡಿಯೇ ಮಾಡುತ್ತೇವೆ. ಪ್ರತಿ ಊರಲ್ಲಿ ಬಿಜೆಪಿ ಸರಕಾರದ ವಿರುದ್ಧವಾಗಿ ಮನೆ ಮನೆಯಿಂದ ಹೋರಾಟ ಆರಂಭ ಮಾಡುತ್ತೇವೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News