ಮೈಸೂರು ಲ್ಯಾಂಪ್ಸ್ ಸ್ವತ್ತು ಖಾಸಗಿ ಪರಭಾರೆ ಮಾಡದಂತೆ ಪ್ರತಿಪಕ್ಷಗಳಿಂದ ಖಾಸಗಿ ನಿರ್ಣಯ ಮಂಡನೆ

Update: 2020-09-25 16:14 GMT

ಬೆಂಗಳೂರು, ಸೆ.25: ನಗರದ ಹೃದಯ ಭಾಗದಲ್ಲಿರುವ ಮೈಸೂರು ಲ್ಯಾಂಪ್ಸ್ ಸ್ವತ್ತು ಹಾಗೂ ಆಸ್ತಿಯನ್ನು ಯಾವುದೇ ಕಾರಣಕ್ಕೂ ಖಾಸಗಿಯವರಿಗೆ ಮಾರಾಟ ಮಾಡಬಾರದು, ಈ 22 ಎಕರೆ ಜಾಗವನ್ನು ಉದ್ಯಾನ, ಆಟದ ಮೈದಾನ ಸೇರಿದಂತೆ ಇತರೆ ಬಳಕೆಗೆ ಸರಕಾರವೇ ಉಪಯೋಗಿಸಿಕೊಳ್ಳಬೇಕು. ಖಾಸಗಿಯವರಿಗೆ ನೀಡಬಾರದು ಎಂದು ಖಾಸಗಿ ನಿರ್ಣಯ ಮಂಡಿಸಲಾಯಿತು.

ವಿಧಾನ ಪರಿಷತ್‍ನಲ್ಲಿ ಖಾಸಗಿ ಮಸೂದೆ ಮಂಡಿಸಿದ ಕಾಂಗ್ರೆಸ್ ಸದಸ್ಯ ಬಿ.ಕೆ. ಹರಿಪ್ರಸಾದ್ ಮಾತನಾಡಿ, 22 ಎಕರೆ ಪ್ರದೇಶ ಹಸಿರುಮಯವಾಗಿದೆ. ಮಲ್ಲೇಶ್ವರ, ಸದಾಶಿವನಗರ ವ್ಯಾಪ್ತಿಯಲ್ಲಿ ಉಸಿರಾಟಕ್ಕೆ ಸ್ಥಳಾವಕಾಶ ಇಲ್ಲ. ಒಂದೊಮ್ಮೆ ಜಯದೇವ ಮಾದರಿಯ ಆಸ್ಪತ್ರೆ ಮಾಡಿ ಸಾರ್ವಜನಿಕ ಸ್ವತ್ತಾಗಿ ಉಳಿಯಬೇಕು. ಮೈಸೂರು ಮಹಾರಾಜರು ನೀಡಿದ ಸ್ಥಳ ಸರಕಾರಿ ಸ್ವತ್ತಾಗಿ ಉಳಿಯಬೇಕೆಂದು ಕೋರಿದರು. ಸರಕಾರಕ್ಕೆ ಆದೇಶ, ಸೂಚನೆ ನೀಡುತ್ತಿಲ್ಲ. ಇದು ಮನವಿ ಆಗಿದೆ ಎಂದರು.

ಮಧ್ಯ ಪ್ರವೇಶ ಮಾಡಿದ ಸಚಿವ ಮಾಧುಸ್ವಾಮಿ ಯಾವ ಕಾರಣಕ್ಕೂ ಸರಕಾರವನ್ನು ಲಘುವಾಗಿ ಪರಿಗಣಿಸಬೇಡಿ. ನಮಗೆ ಅಂಥ ಸ್ಥಿತಿ ಬಂದಿಲ್ಲ. ಸ್ಪಷ್ಟವಾಗಿ ನಿಮ್ಮ ಮಾತನ್ನು ಹೇಳಿ. ಸರಕಾರವನ್ನು ಮುಜುಗರಕ್ಕೆ ಸಿಲುಕಿಸಬೇಡಿ. ಹೈಕೋರ್ಟ್ ಮುಂದೆ ಬಂದಾಗ ಇಂಥ ಪ್ರಸ್ತಾಪ ಬಂದಿತ್ತು. ನಾವು ಅದನ್ನು ಉಳಿಸಿಕೊಳ್ಳುವ ಮಾತಾಡಿದ್ದೇವೆ. ಹೀಗಿರುವಾಗ ಇಂಥ ಚರ್ಚೆ ತಂದು ಸದನದಲ್ಲಿ ಮುಜುಗರಕ್ಕೆ ಒಳಗಾಗಿಸಬೇಡಿ. ಸಿಎಂ ಬಿ.ಎಸ್.ಯಡಿಯೂರಪ್ಪ ಅವರೇ ಮಾರಾಟ ಮಾಡಲ್ಲ ಎಂದು ಭರವಸೆ ಕೊಟ್ಟಿದ್ದಾರೆ. ಹೀಗಿರುವಾಗ ಈ ರೀತಿಯ ಖಾಸಗಿ ನಿರ್ಣಯ ಮಂಡಿಸುವುದು ಸರಿಯೇ ಎಂದು ಕೇಳಿದರು.

ಡಿಸಿಎಂ ಲಕ್ಷ್ಮಣ ಸವದಿ ಮಾತನಾಡಿ, ಪೀಣ್ಯ ಬಳಿ ಇರುವ ಬಸವೇಶ್ವರ ಬಸ್ ನಿಲ್ದಾಣ ಇರುವ ಸ್ಥಳ ವ್ಯವಸ್ಥಿತವಾಗಿಲ್ಲ. ಅವಕಾಶ ಇದ್ದರೆ ಈ ಸ್ಥಳ ಬಳಸಿಕೊಳ್ಳಿ ಎಂಬ ಸಲಹೆ ಬಂದಿತ್ತು. ಯಾವ ನಿರ್ಧಾರ ಕೈಗೊಂಡಿಲ್ಲ ಎಂದಾಗ ಮಾಧುಸ್ವಾಮಿ ಮಧ್ಯಪ್ರವೇಶ ಮಾಡಿ, ಸುಮ್ಮನೆ ವಿಷಯ ಎಳೆಯಬೇಡಿ. ಅನಗತ್ಯ ಚರ್ಚೆ ಬೇಡ ಎಂದರು.

ಬಸವರಾಜ ಹೊರಟ್ಟಿ ಮಾತನಾಡಿ, ಕ್ಯಾಬಿನೆಟ್‍ನಲ್ಲಿ ಪ್ರಸ್ತಾಪಿಸಿ ಇದನ್ನು ಅಧಿಕೃತಪಡಿಸಿ ಎಂದು ಸಲಹೆ ಕೊಟ್ಟರು. ಅದಕ್ಕೆ ಒಪ್ಪಿಕೊಳ್ಳಲಾಯಿತು. ಸದಸ್ಯ ಮೋಹನ್ ಕೊಂಡಜ್ಜಿ ಮಾತನಾಡಿ, ಅಶೋಕ ಹೋಟೆಲ್ ಮಾರಾಟವಾದಾಗ ಯಾರಿಂದಲೂ ತಡೆಯಲಾಗಲಿಲ್ಲ. ಕೇಂದ್ರ ಸಚಿವ ಅನಂತ್ ಕುಮಾರ್, ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರಿಗೆ ಉಳಿಸಿಕೊಳ್ಳಲಾಗಲಿಲ್ಲ. ಅಂಥ ಸ್ಥಿತಿ ಬರಬಾರದು ಎಂದು ಸಲಹೆ ನೀಡಿದರು.

ಬಿಜೆಪಿ ಸದಸ್ಯ ಆಯನೂರು ಮಂಜುನಾಥ್ ಮಾತನಾಡಿ, ಎರಡು ದಿನ ಹಿಂದೆ ನಡೆದ ಚರ್ಚೆಯನ್ನು ಮತ್ತೆ ನಿರ್ಣಯ ತರುವುದು ಎಷ್ಟು ಸರಿ? ಅಲ್ಲದೇ ನಿರ್ಣಯ ತರಲು ಏಳು ದಿನ ಮುನ್ನ ಪ್ರಸ್ತಾವನೆ ಸಲ್ಲಿಸಬೇಕು ಎಂದರು.

ಸಭಾಪತಿ ಪ್ರತಾಪ್‍ ಚಂದ್ರ ಶೆಟ್ಟಿ ಅವರ ನಿರ್ಧಾರಕ್ಕೆ ಬಿಡಲಾಯಿತು. ನಿರ್ಣಯ ಮಂಡನೆ ಆಗಿದೆ ಅಷ್ಟೇ. ಸರಕಾರ ಈ ಬಗ್ಗೆ ನಿರ್ಧಾರ ಕೈಗೊಳ್ಳಲಿದೆ ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News