ನನಸಾಗುವತ್ತ ಪೌರ ಕಾರ್ಮಿಕರ ಸ್ವಂತ ಸೂರಿನ ಕನಸು: ಕಲ್ದೊಡ್ಡಿಯಲ್ಲಿ 73 ಮನೆಗಳ ಕಾಮಗಾರಿ ಪ್ರಗತಿಯಲ್ಲಿ

Update: 2020-09-25 16:30 GMT

ಚಿಕ್ಕಮಗಳೂರು, ಸೆ.25: ನಗರವೊಂದನ್ನು ಸುಂದರವಾಗಿಯೂ, ಸ್ವಚ್ಛವಾಗಿಯೂ ಇರುವಂತೆ ಮಾಡುವಲ್ಲಿ ಪೌರಕಾರ್ಮಿಕರ ಶ್ರಮ ಸ್ಮರಣೀಯ. ತಮ್ಮ ಆರೋಗ್ಯವನ್ನೂ ಲೆಕ್ಕಿಸದೆ ನಗರ, ಪಟ್ಟಣ, ಗ್ರಾಮಗಳನ್ನು ಸ್ವಚ್ಛ ಮಾಡುವ ಪೌರಕಾರ್ಮಿಕರಿಗೆ ಸರಕಾರಗಳು ಇತ್ತೀಚೆಗೆ ಹಲವು ಸೌಲಭ್ಯಗಳನ್ನು ಕಲ್ಪಿಸುತ್ತಿದೆ. ಆದರೂ ಜಿಲ್ಲೆಯಲ್ಲಿರುವ ಪೌರಕಾರ್ಮಿಕರು ಸ್ವಂತ ಮನೆ ಇಲ್ಲದೇ ಬಾಡಿಗೆ ಮನೆಗಳಲ್ಲಿ ವಾಸ ಮಾಡುತ್ತಿದ್ದು, ಪೌರಕಾರ್ಮಿಕರಿಗೆ ಸ್ವಂತ ಸೂರೊದಗಿಸುವ ನಿಟ್ಟಿನಲ್ಲಿ ಸರಕಾರ ಯೋಜನೆ ರೂಪಿಸಿರುವುದರ ಫಲವಾಗಿ ಜಿಲ್ಲೆಯಲ್ಲಿನ ಪೌರಕಾರ್ಮಿಕರು ಇದೀಗ ಸ್ವಂತ ಸೂರು ಹೊಂದುವ ಕಾಲ ಸನ್ನಿಹಿತವಾಗಿದೆ.

ಚಿಕ್ಕಮಗಳೂರು ನಗರದಲ್ಲಿ ನಗರಸಭೆಯ ಪೌರಕಾರ್ಮಿಕರಾಗಿ ಸೇವೆ ಸಲ್ಲಿಸುತ್ತಿರುವ ಕಾರ್ಮಿಕರ ಪೈಕಿ ಒಂದಷ್ಟು ಕಾರ್ಮಿಕರಿಗೆ ಸ್ವಂತ ಸೂರು ಒದಗಿಸುವ ನಿಟ್ಟಿನಲ್ಲಿ ನಗರ ಸಮೀಪದ ಕಲ್ದೊಡ್ಡಿ ಬಡಾವಣೆಯಲ್ಲಿ ಎರಡೂವರೆ ಎಕರೆ ಪ್ರದೇಶದಲ್ಲಿ 100 ನಿವೇಶಗಳನ್ನು ಪೌರಕಾರ್ಮಿಕರಿಗೆ ಹಂಚಿಕೆ ಮಾಡಿದೆ. ಈ ನಿವೇಶನಗಳಲ್ಲಿ ಸದ್ಯ 73 ಮನೆಗಳ ನಿರ್ಮಾಣಕಾರ್ಯ ಪ್ರಗತಿಯಲ್ಲಿದೆ. ಮನೆಗಳ ನಿರ್ಮಾಣ ಕಾರ್ಯ ಕುಂಟುತ್ತಾ ಸಾಗುತ್ತಿದೆಯಾದರೂ ಮೇಲ್ಛಾವಣಿ ಕಾಮಗಾರಿ ನಡೆಯುತ್ತಿದೆ. ಮುಂದಿನ 4 ತಿಂಗಳುಗಳಲ್ಲಿ ಮನೆಗಳ ನಿರ್ಮಾಣ ಕಾರ್ಯ ಪೂರ್ಣಗೊಂಡು ಪೌರಕಾರ್ಮಿಕರಿಗೆ ಹಸ್ತಾಂತರವಾಗಲಿವೆ.

ಚಿಕ್ಕಮಗಳೂರು ನಗರಸಭೆಯಲ್ಲಿ ಕೆಸಲ ಮಾಡುತ್ತಿರುವ ಪೌರಕಾರ್ಮಿಕರ ಪೈಕಿ 73 ಮಂದಿ ಪೌರಕಾರ್ಮಿಕರು ಖಾಯಂಗೊಂಡಿದ್ದಾರೆ. ಬಾಕಿ 98 ಕಾರ್ಮಿಕರು ದಿನಗೂಲಿ ಕಾರ್ಮಿಕರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಪೌರಕಾರ್ಮಿಕರಾಗಿ ಕೆಲಸ ನಿರ್ವಹಿಸುತ್ತಿರುವವರಿಗೆ ಸ್ವಂತ ಮನೆ ನೀಡಬೇಕೆಂಬ ಉದ್ದೇಶವನ್ನು ಸರಕಾರ ಹೊಂದಿದ್ದು, ಚಿಕ್ಕಮಗಳೂರು ನಗರದಲ್ಲಿ ಮೊದಲ ಹಂತದಲ್ಲಿ 73 ಮನೆಗಳ ನಿರ್ಮಾಣ ಕಾರ್ಯ ನಡೆಯುತ್ತಿದ್ದು, ಬಾಕಿ ಪೌರ ಕಾರ್ಮಿಕರಿಗೆ ಆಶ್ರಯ ಸಮಿತಿ ನಿವೇಶನಗಳನ್ನು ಕಲ್ಪಿಸಿದ ಬಳಿಕ ಮನೆಗಳ ನಿರ್ಮಾಣ ಕಾರ್ಯ ನಡೆಯಲಿದೆ.

ನಗರದ ಕಲ್ದೊಡ್ಡಿ ಬಡಾವಣೆಯ 2 ಎಕರೆ ಜಾಗದಲ್ಲಿ ಹೊಸ ಪೌರಕಾರ್ಮಿಕರ ಕಾಲನಿ ನಿರ್ಮಾಣವಾಗುತ್ತಿದೆ. ಪ್ರತೀ ಮನೆಗಳನ್ನು 6 ಆರು ಚದರ ಅಡಿ ಅಳತೆ ನಿವೇಶನದಲ್ಲಿ ನಿರ್ಮಿಸಲಾಗುತ್ತಿದೆ. ಪ್ರತೀ ಮನೆಗಳಲ್ಲಿ ಒಂದು ಹಾಲ್, 1 ಮಲಗುವ ಕೋಣೆ, ಅಡುಗೆಮನೆ, ಶೌಚಾಲಯ ಹೊಂದಿದೆ. ಸದ್ಯ ನಿರ್ಮಾಣ ಹಂತದಲ್ಲಿರುವ ಮನೆಗಳ ಪೈಕಿ ಕೆಲ ಮನೆಗಳ ಕಾಮಗಾರಿ ಆರ್‍ಸಿಸಿ ಹಂತದಲ್ಲಿದ್ದರೆ, ಮತ್ತೆ ಕೆಲವು ಮನೆಗಳ ಮಾಲಕರು ಸ್ವಂತ ಹಣಹಾಕಿ ಮತ್ತೊಂದು ಅಂತಸ್ತಿನ ಮನೆ ಕಟ್ಟಿಸಿಕೊಳ್ಳುತ್ತಿದ್ದಾರೆ. ಇನ್ನೂ ಕೆಲವರು ಸರಕಾರದ ಅನುದಾನದೊಂದಿಗೆ ಸ್ವಂತ ಹಣಹಾಕಿ ತಮ್ಮ ಸಾಮರ್ಥ್ಯಕ್ಕೆ ತಕ್ಕ ಹಾಗೆ ಮನೆಗಳ ನಿರ್ಮಾಣಕ್ಕೆ ಮುಂದಾಗಿದ್ದಾರೆ.

ಪೌರಕಾರ್ಮಿಕರ ಮನೆಗಳ ಪ್ರತೀ ಚದರ ಅಡಿಗೆ ರಾಜ್ಯ ಸರಕಾರ 1 ಲಕ್ಷ ರೂ. ಹಣ ನೀಡುತ್ತಿದ್ದು, ನಾಲ್ಕು ಹಂತಗಳಲ್ಲಿ ಮನೆಗಳ ನಿರ್ಮಾಣಕಾರ್ಯ ನಡೆಯಲಿದೆ. ಪ್ರತೀ ಹಂತ ಮುಗಿಯುತ್ತಿದ್ದಂತೆ ಸರಕಾರ ಹಣವನ್ನು ಪೌರಕಾರ್ಮಿಕರ ಖಾತೆಗೆ ಜಮೆ ಮಾಡುತ್ತಿದೆ. ಈಗಾಗಲೇ ಪೌರಕಾರ್ಮಿಕರಾಗಿ ನಿವೃತ್ತಿ ಹೊಂದಿದವರಿಗೂ ಮನೆಗಳ ಹಕ್ಕುಪತ್ರಗಳನ್ನು ನೀಡಲಾಗಿದ್ದು, ಅವರು ಮುಂದಿನ ದಿನಗಳಲ್ಲಿ ಮನೆ ನಿರ್ಮಿಸಿಕೊಳ್ಳಬೇಕಾಗಿದೆ. ಮನೆಗಳ ನಿರ್ಮಾಣ ಕಾರ್ಯ ಪೂರ್ಣಗೊಂಡರೆ, ರಸ್ತೆ, ಬೀದಿದೀಪ, ಕುಡಿಯುವ ನೀರಿನ ಸೌಲಭ್ಯ, ಒಳಚರಂಡಿ ವ್ಯವಸ್ಥೆಯನ್ನು ನಗರಸಭೆ ವತಿಯಿಂದಲೇ ಒದಗಿಸಲಾಗುತ್ತದೆ. ಒಟ್ಟಾರೆಯಾಗಿ ನಗರಸಭೆಗೆ ಸೇರಿದ ಕಟ್ಟಡ ಮತ್ತು ಬಾಡಿಗೆ ಮನೆಗಳಲ್ಲಿ ವಾಸವಾಗಿದ್ದ ಪೌರಕಾರ್ಮಿಕರು ಸ್ವಂತ ಮನೆ ನಿರ್ಮಿಸಿಕೊಳ್ಳಬೇಕೆಂಬ ಮಹಾದಾಸೆಗೆ ಸರಕಾರ ಯೋಜನೆಗಳು ಆಸರೆ ಒದಗಿಸಿದ್ದು, ಸುಸಜ್ಜಿತ ಮನೆಗಳು ಶೀಘ್ರ ಪೌರಕಾರ್ಮಿಕರ ವಾಸಕ್ಕೆ ಸಿದ್ಧಗೊಳ್ಳಲಿವೆ.

ಕಲ್ದೊಡ್ಡಿಯಲ್ಲಿ ಎರಡು ಎಕರೆ ಜಮೀನಿನಲ್ಲಿ 30x40 ಅಳತೆಯಲ್ಲಿ 73 ಮನೆಗಳನ್ನು ಪೌರಕಾರ್ಮಿಕರಿಗಾಗಿ ನಿರ್ಮಿಸಲಾಗುತ್ತಿದೆ. ಈ ಮನೆಗಳಿಗೆ ಒಟ್ಟು 7 ಕೋಟಿ ರೂ. ವೆಚ್ಚವಾಗಲಿದೆ. ಖಾಯ ಆಗದ ಪೌರಕಾರ್ಮಿಕರಿಗೂ ಮನೆಗಳನ್ನು ನಿರ್ಮಿಸಿಕೊಡುವ ನಿಟ್ಟಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಚರ್ಚಿಸಿ ಈ ಬಗ್ಗೆ ಚಿಂತನೆ ನಡೆಸಲಾಗುವುದು. ಇಂದಾವರ ಗ್ರಾಮದ ಸ.ನಂ.47, 49ರಲ್ಲಿ 23.12 ಎಕರೆ ಜಾಗದಲ್ಲಿ 296, ನಲ್ಲೂರು ಗ್ರಾಮದಲ್ಲಿ 2.12 ಎಕರೆಯಲ್ಲಿ 144 ಮನೆ ಹಾಗೂ ಇಂದಾವರದ ಮತ್ತೊಂದು ಸರ್ವೆ ನಂಬರಿನಲ್ಲಿ 69 ಮನೆಗಳು ಸೇರಿದಂತೆ ಒಟ್ಟು 1508 ಜಿಪ್ಲಸ್2 ಅಳತೆಯ ಮನೆಗಳನ್ನು ಸಾರ್ವಜನಿಕರಿಗಾಗಿ ನಿರ್ಮಿಸಲಾಗುತ್ತಿದೆ.
-  ಬಸವರಾಜು, ಪೌರಾಯುಕ್ತ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News