ಬೆಂಗಳೂರು-ಬೆಳಗಾವಿ ನಡುವೆ ಸಂಚರಿಸುವ ರೈಲಿಗೆ ಸುರೇಶ್ ಅಂಗಡಿ ಹೆಸರಿಡಲು ಆಗ್ರಹ

Update: 2020-09-25 16:42 GMT

ಬಾಗಲಕೋಟೆ, ಸೆ.25: ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವರಾಗಿ ಅಧಿಕಾರ ವಹಿಸಿಕೊಂಡ ಒಂದೇ ವಾರದಲ್ಲಿ ಸುರೇಶ್ ಅಂಗಡಿ ಬೆಂಗಳೂರು-ಬೆಳಗಾವಿ ಮಧ್ಯೆ ಹೊಸ ರೈಲು ಆರಂಭಿಸಿದ್ದರು. ಅವರ ನೆನಪಿನಾರ್ಥವಾಗಿ ಹೊಸ ರೈಲಿಗೆ ‘ಸುರೇಶ್ ಅಂಗಡಿ ಎಕ್ಸ್ ಪ್ರಸ್’ ನಾಮಕರಣ ಮಾಡಬೇಕೆಂದು ಸದನದಲ್ಲಿ ಒತ್ತಾಯಿಸಿರುವುದಾಗಿ ವಿಧಾನ ಪರಿಷತ್ ಸದಸ್ಯ ಹನುಮಂತ ನಿರಾಣಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಗುರುವಾರ ಸದನದಲ್ಲಿ ನಡೆದ ಸಂತಾಪ ಸೂಚಕ ಸಭೆಯಲ್ಲಿ ಈ ಕುರಿತು ಮಾತನಾಡಿದ್ದೇನೆ. ಹೊಸದಾಗಿ ಆರಂಭವಾದ ರೈಲಿನಲ್ಲಿ ಸಚಿವ ಅಂಗಡಿ ಅವರೊಂದಿಗೆ ಪ್ರವಾಸ ಮಾಡಿದ ಮತ್ತು ಚರ್ಚಿಸಿದ ವಿಷಯಗಳನ್ನು ಸ್ಮರಿಸಿಕೊಂಡಾಗ ಬದಿಗೆ ಕುಳಿತ ಗೆಳೆಯನೊಬ್ಬ ಥಟ್ಟನೆ ಎದ್ದು ಹೋದಂತೆ ನೋವಾಗುತ್ತಿದೆ ಎಂದು ಅವರು ವಿಷಾಧ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು-ಬೆಳಗಾವಿ ಹೊಸ ರೈಲು ಬೆಂಗಳೂರಿನಿಂದ ರಾತ್ರಿ 9 ಗಂಟೆಗೆ ಹೊರಟು ಮರುದಿನ ಬೆಳಗ್ಗೆ 6 ಕ್ಕೆ ಬೆಳಗಾವಿ ತಲುಪುತ್ತದೆ. ಬೆಳಗಾವಿಯಿಂದ ಬೆಳಗ್ಗೆ 6 ಗಂಟೆಗೆ ಬಿಟ್ಟ ರೈಲು ಸಂಜೆ 8 ಕ್ಕೆ ಬೆಂಗಳೂರು ತಲುಪುತ್ತದೆ. ಈ ಹೊಸ ರೈಲಿಗೆ ‘ಸುರೇಶ್ ಅಂಗಡಿ ಎಕ್ಸಪ್ರಸ್’ ರೈಲು ಎಂದು ನಾಮಕರಣ ಮಾಡಲು ಸೂಚನೆ ಮಾಡಿರುವುದಕ್ಕೆ ಸದನದಲ್ಲಿ ಹಾಗೂ ಉತ್ತರ ಕರ್ನಾಟಕ ಭಾಗದಲ್ಲಿ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ಬೆಳಗಾವಿಯ ಕೆಲ ಸಂಘಟನೆಗಳು ಕೂಡ ಈ ಪ್ರಸ್ತಾಪವನ್ನು ಹಾರ್ದಿಕವಾಗಿ ಸ್ವಾಗತಿಸಿವೆ ಎಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News