ಗಾಂಜಾ ದಾಸ್ತಾನು ಆರೋಪ: ತಂದೆ- ಮಗಳ ಬಂಧನ

Update: 2020-09-25 17:28 GMT

ಚಿಕ್ಕಮಗಳೂರು, ಸೆ.25: ಗಾಂಜಾ ದಾಸ್ತಾನು ಮಾಡಿದ್ದ ಆರೋಪದ ಮೇರೆಗೆ ತಂದೆ ಹಾಗೂ ಮಗಳನ್ನು ಪೊಲೀಸರು ಬಂಧಿಸಿರುವ ಘಟನೆ ಕಡೂರು ಪಟ್ಟಣದಲ್ಲಿ ಗುರುವಾರ ಸಂಜೆ ವರದಿಯಾಗಿದೆ.

ಕಡೂರು ಪಟ್ಟಣದ ಈದ್ಗಾ ನಗರದ ನಿವಾಸಿಗಳಾದ ಜಯಣ್ಣ(65) ಮತ್ತು ಈತನ ಮಗಳು ವಿಜಯಾ(45) ಬಂಧಿತ ಆರೋಪಿಗಳಾಗಿದ್ದು, ಬಂಧಿತ ಆರೋಪಿಗಳ ಮನೆಯಿಂದ 960 ಗ್ರಾಂ ಗಾಂಜಾವನ್ನು ಕಡೂರು ಪೊಲೀಸರು ವಶಕ್ಕೆ ಪಡೆದಿದ್ದಾರೆಂದು ತಿಳಿದುಬಂದಿದೆ.

ಕಡೂರು ಪಟ್ಟಣದ ಈದ್ಗಾ ನಗರದ ಮನೆಯೊಂದರಲ್ಲಿ ಗಾಂಜಾ ದಾಸ್ತಾನು ಮಾಡಲಾಗಿದೆ ಎಂಬ ಖಚಿತ ಮಾಹಿತಿ ಮೇರೆಗೆ ಕಡೂರು ಠಾಣಾಧಿಕಾರಿ ವಿಶ್ವಾನಾಥ್ ಹಾಗೂ ಸಿಬ್ಬಂದಿ ಆರೋಪಿ ಜಯಣ್ಣ ಹಾಗೂ ವಿಜಯಾ ಅವರ ಮನೆ ಮೇಲೆ ಗುರುವಾರ ಸಂಜೆ ದಿಢೀರ್ ದಾಳಿ ಮಾಡಿದ್ದಾರೆ. ದಾಳಿ ವೇಳೆ ಮನೆಯನ್ನು ಪರಿಶೀಲನೆ ಮಾಡಿದಾಗ ಗಾಂಜಾ ದಾಸ್ತಾನು ಮಾಡಿರುವುದು ಪತ್ತೆಯಾಗಿದೆ ಎನ್ನಲಾಗಿದೆ. ಘಟನೆಯ ಹಿನ್ನೆಲೆಯಲ್ಲಿ ಇಬ್ಬರ ಮೇಲೆ ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸರು ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News