ಮಂಡ್ಯ: ಭೂ ಸುಧಾರಣಾ, ಎಪಿಎಂಸಿ ತಿದ್ದುಪಡಿ ಕಾಯ್ದೆ ವಿರೋಧಿಸಿ ಎಸ್‍ಡಿಪಿಐ ಪ್ರತಿಭಟನೆ

Update: 2020-09-25 17:49 GMT

ಮಂಡ್ಯ, ಸೆ.25: ಭೂ ಸುಧಾರಣಾ ಮತ್ತು ಎಪಿಎಂಸಿ ಕಾಯ್ದೆ ತಿದ್ದುಪಡಿ ಖಂಡಿಸಿ ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದ(ಎಸ್‍ಡಿಪಿಐ) ಕಾರ್ಯಕರ್ತರು ಶುಕ್ರವಾರ ಮಂಡ್ಯದಲ್ಲಿ ಪ್ರತಿಭಟನೆ ನಡೆಸಿದರು.

ಕೇಂದ್ರ ಮತ್ತು ರಾಜ್ಯದ ಬಿಜೆಪಿ ಸರಕಾರಗಳು ಕೃಷಿ ಕ್ಷೇತ್ರವನ್ನು ಕಾರ್ಪೋರೇಟೀಕರಣ ಮಾಡಲು ಹೊರಟಿದ್ದು, ರೈತರನ್ನು ಜೀತದಾಳುಗಳನ್ನಾಗಿಸಲು ಪಣತೊಟ್ಟಿವೆ. ಗ್ರಾಮೀಣ ಜನರ ಮತ್ತು ರೈತರ ಬದುಕಿನ ಜತೆಗೆ ಚೆಲ್ಲಾಟವಾಡಲು ಹೊರಟಿವೆ ಎಂದು ಅವರು ಕಿಡಿಕಾರಿದರು.

ಎಪಿಎಂಸಿ ಮತ್ತು ವಿದ್ಯುತ್ ಕಾಯ್ದೆಗಳಿಗೂ ತಿದ್ದುಪಡಿ ತಂದಿರುವ ರಾಜ್ಯ ಸರಕಾರ ರೈತರ ಗಾಯದ ಮೇಲೆ ಬರೆ ಎಳೆದಿದೆ. ದೇಶವ್ಯಾಪಿ ವಿರೋಧ ಬಂದರೂ ಗಣನೆಗೆ ತೆಗೆದುಕೊಳ್ಳದೆ ಮಸೂದೆಗಳನ್ನು ಅಂಗೀಕಾರಗೊಳಿಸಿರುವುದು ಕೇಂದ್ರ ಮತ್ತು ರಾಜ್ಯ ಸರಕಾರಗಳ ಪ್ರಜಾಪ್ರಭುತ್ವ ವಿರೋಧಿ ಧೋರಣೆಯನ್ನು ಎತ್ತಿ ತೋರಿಸುತ್ತದೆ ಎಂದು ಅವರು ಆರೋಪಿಸಿದರು.

ಇದಲ್ಲದೆ, ಕೋವಿಡ್ ಪರಿಕರ ಖರೀದಿ ಭ್ರಷ್ಟಾಚಾರ, ಪಕ್ಷದ ಆಂತರಿಕ ಕಚ್ಚಾಟ, ಆರ್ಥಿಕ ದುಸ್ಥಿತಿ, ಇತ್ಯಾದಿ ವಿಷಯಗಳನ್ನು ಎದುರಿಸಲಾಗದೆ ರಾಜ್ಯ ವಿಧಾನಸಭಾ ಅಧಿವೇಶನವನ್ನು ಮೊಟಕುಗೊಳಿಸಲಾಗಿದೆ. ಇದು ಪ್ರಜಾಪ್ರಭುತ್ವ ವಿರೋಧಿಯೂ ಆಗಿದೆ ಎಂದು ಅವರು ದೂರಿದರು.

ಪಕ್ಷದ ಪ್ರಧಾನ ಕಾರ್ಯದರ್ಶಿ ಸಯ್ಯದ್ ಅಸ್ರಾರ್, ಮುಬಾರಕ್, ಸಯ್ಯದ್ ಅಶ್ರಾಫ್, ಸಗೀರ್ ಅಹಮದ್, ಫಾರುಖ್ ಅಹಮದ್, ರಫೀಕ್ ಅಹಮದ್, ಮಪ್ತೇಹಾರ್, ಅಜ್ಗರ್, ಇತರ ಮುಖಂಡರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News