ವಿಧಾನಸಭೆ ಕಲಾಪ: ‘ಬಿ ಕರಾಬ್ ಭೂಮಿ’ ಸಕ್ರಮ ರಾಜ್ಯಾದ್ಯಂತ ವಿಸ್ತರಣೆಗೆ ಸದಸ್ಯರ ಆಗ್ರಹ

Update: 2020-09-25 18:11 GMT

ಬೆಂಗಳೂರು, ಸೆ.25: ರಾಜಧಾನಿ ಬೆಂಗಳೂರು ವ್ಯಾಪ್ತಿಯಲ್ಲಿ ಅನಧಿಕೃತವಾಗಿ ಬಳಕೆಯಾಗುತ್ತಿರುವ ಬಿ ಕರಾಬ್ ಭೂಮಿಯನ್ನು ಸಕ್ರಮಗೊಳಿಸುವ ಸಂಬಂಧ ಜಾರಿಗೆ ತಂದಿರುವ 2020ನೆ ಸಾಲಿನ ಕರ್ನಾಟಕ ಭೂ ಕಂದಾಯ(ಎರಡನೆ ತಿದ್ದುಪಡಿ) ವಿಧೇಯಕವನ್ನು ಗ್ರಾಮೀಣ ಪ್ರದೇಶಗಳಿಗೂ ವಿಸ್ತರಿಸುವಂತೆ ಪಕ್ಷಾತೀತವಾಗಿ ಸದಸ್ಯರು ಸರಕಾರವನ್ನು ಆಗ್ರಹಿಸಿದರು.

ಶುಕ್ರವಾರ ಭೋಜನ ವಿರಾಮದ ಬಳಿಕ ನಡೆದ ವಿಧಾನಸಭೆ ಕಲಾಪದಲ್ಲಿ ಕಂದಾಯ ಸಚಿವ ಆರ್.ಅಶೋಕ್ ಮಂಡಿಸಿದ 2020ನೆ ಸಾಲಿನ ಕರ್ನಾಟಕ ಭೂ ಕಂದಾಯ(ಎರಡನೆ ತಿದ್ದುಪಡಿ) ವಿಧೇಯಕದ ಮೇಲೆ ನಡೆದ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಕಾಂಗ್ರೆಸ್ ಹಿರಿಯ ಸದಸ್ಯ ಕೆ.ಆರ್.ರಮೇಶ್ ಕುಮಾರ್, ವಿಪಕ್ಷ ನಾಯಕ ಸಿದ್ದರಾಮಯ್ಯ, ಜೆಡಿಎಸ್ ಸದಸ್ಯರಾದ ಎ.ಟಿ.ರಾಮಸ್ವಾಮಿ, ಶಿವಲಿಂಗೇಗೌಡ, ಕಾಂಗ್ರೆಸ್ ಸದಸ್ಯ ಪ್ರಿಯಾಂಕ್ ಖರ್ಗೆ ಸೇರಿದಂತೆ ಇನ್ನಿತರರು ಈ ವಿಧೇಯಕದ ವ್ಯಾಪ್ತಿಯಲ್ಲಿ ಗ್ರಾಮೀಣ ಪ್ರದೇಶವನ್ನು ಸೇರಿಸುವಂತೆ ಕೋರಿದರು.

ಜೆಡಿಎಸ್ ಸದಸ್ಯ ಶಿವಲಿಂಗೇಗೌಡ ಮಾತನಾಡಿ, ಕೇವಲ ಬೆಂಗಳೂರಿಗೆ ಸೀಮಿತವಾಗಿ ಯಾಕೆ ಈ ವಿಧೇಯಕವನ್ನು ತರಲಾಗಿದೆ. ಹಳ್ಳಿಗಳಲ್ಲಿರುವ ಬಡ ರೈತರನ್ನು ಯಾಕೆ ಕಡೆಗಣಿಸಲಾಗುತ್ತಿದೆ. ದೊಡ್ಡ ದೊಡ್ಡ ಕಂಪೆನಿಗಳಿಗೆ ನೆರವು ನೀಡಲು ಈ ತಿದ್ದುಪಡಿ ತರಲಾಗಿದೆಯೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ವಿಧೇಯಕವನ್ನು ಸಿದ್ಧಪಡಿಸುವಾಗ ಸದನದಲ್ಲಿ ವಿರೋಧ ವ್ಯಕ್ತವಾಗಬಹುದು ಎಂಬ ಆತಂಕ ನನ್ನಲ್ಲಿ ಇತ್ತು. ಆದರೆ, ನಿಮ್ಮ ಸಹಕಾರ, ಬೆಂಬಲ ನೋಡಿ ಆಶ್ಚರ್ಯವಾಗಿದೆ. ರೈತರಿಗೆ ನೆರವು ನೀಡಲು ಸರಕಾರ ಮುಕ್ತ ಮನಸ್ಸು ಹೊಂದಿದೆ. ಈ ಬಗ್ಗೆ ಚರ್ಚೆ ಮಾಡಿ ಮುಂದಿನ ದಿನಗಳಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಅಶೋಕ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News