ಡೀಮ್ಡ್ ಅರಣ್ಯ ಭೂಮಿ ಕಂದಾಯ ಇಲಾಖೆಗೆ ಪರಭಾರೆ: ಸಚಿವ ಆನಂದ್ ಸಿಂಗ್

Update: 2020-09-25 18:20 GMT

ಬೆಂಗಳೂರು, ಸೆ.25: ರಾಜ್ಯದಲ್ಲಿ ರಾಜ್ಯದಲ್ಲಿ 9.94 ಲಕ್ಷ ಹೆಕ್ಟೇರ್ ಅರಣ್ಯ ಭೂಮಿ ಪೈಕಿ 6.64 ಲಕ್ಷ ಹೆಕ್ಟೇರ್ ಡೀಮ್ಡ್ ಅರಣ್ಯ ಭೂಮಿಯನ್ನು ಹಿಂಪಡೆಯಲಾಗುತ್ತಿದ್ದು, ಅದನ್ನು ಕಂದಾಯ ಇಲಾಖೆಗೆ ಪರಭಾರೆ ಮಾಡಲಾಗುವುದು ಎಂದು ಅರಣ್ಯ ಸಚಿವ ಆನಂದ್ ಸಿಂಗ್ ತಿಳಿಸಿದರು.

ಶುಕ್ರವಾರ ವಿಧಾನಸಭೆಯಲ್ಲಿ ಭೂ ಕಂದಾಯ ತಿದ್ದುಪಡಿ ವಿಧೇಯಕದ ಮೇಲೆ ನಡೆಯುತ್ತಿದ್ದ ಚರ್ಚೆ ವೇಳೆ ಮಧ್ಯಪ್ರವೇಶಿಸಿ ಮಾತನಾಡಿದ ಅವರು, ಈ ಸಂಬಂಧ ಶೀಘ್ರವೆ ಆದೇಶ ಹೊರಡಿಸಲಾಗುವುದು ಎಂದರು.

ಕಂದಾಯ ಸಚಿವ ಆರ್.ಅಶೋಕ್ ಮಾತನಾಡಿ, 94 ಸಿ, 94ಸಿಸಿ ಅಡಿಯಲ್ಲಿ ಭೂಮಿ ಕೊಡುವ ಮುನ್ನ ಸ್ಮಶಾನ, ಶಾಲೆ, ಆಸ್ಪತ್ರೆಗಳಿಗೆ ಜಾಗವನ್ನು ಮೀಸಲಿಟ್ಟ ಬಳಿಕ ಆದೇಶವನ್ನು ಹೊರಡಿಸಲಾಗುವುದು. ಡೀಮ್ಡ್ ಅರಣ್ಯ ಭೂಮಿ ನಮ್ಮ ಸುಪರ್ದಿಗೆ ಬಂದ ನಂತರ ಅದನ್ನು ಸರಕಾರಿ ಸಂಸ್ಥೆಗಳಿಗೆ ಅಭಿವೃದ್ಧಿಗಾಗಿ ವಿನಿಯೋಗಿಸಲು ನೀಡಲಾಗುವುದು ಎಂದು ಅವರು ಹೇಳಿದರು.

ಇಷ್ಟೊಂದು ಪ್ರಮಾಣದ ಭೂಮಿ ಅರಣ್ಯ ಇಲಾಖೆ ಅಧೀನದಲ್ಲಿದ್ದ ಕಾರಣ ಅಭಿವೃದ್ಧಿ ಕಾಮಗಾರಿಗಳಿಗೆ ನೀಡಲು ಸಾಧ್ಯವಾಗುತ್ತಿರಲಿಲ್ಲ ಎಂದು ಅಶೋಕ್ ಹೇಳಿದರು. ಇದಕ್ಕೆ ಸದನದಲ್ಲಿ ಪಕ್ಷಾತೀತವಾಗಿ ಸದಸ್ಯರು ಬೆಂಬಲ ಸೂಚಿಸಿದರು.

ಬಗರ್ ಹುಕುಂ ಸಾಗುವಳಿ ಅಡಿಯಲ್ಲಿ ಅರ್ಜಿ ಸಲ್ಲಿಸಲು ಎರಡು ವರ್ಷ ಅವಧಿ ವಿಸ್ತರಿಸಲಾಗಿದೆ ಎಂದು ಅಶೋಕ್ ಹೇಳಿದರು. ಈ ಸಂದರ್ಭದಲ್ಲಿ ಮಧ್ಯಪ್ರವೇಶಿಸಿದ ಜೆಡಿಎಸ್ ಸದಸ್ಯ ಡಾ.ಕೆ.ಅನ್ನದಾನಿ, ಅರ್ಜಿ ಸಲ್ಲಿಸಲು ಅವಧಿ ವಿಸ್ತರಿಸಿರುವುದು ಸ್ವಾಗತಾರ್ಹ. ಆದರೆ, ಮೊದಲು ನಮಗೆ ದರ್ಖಾಸ್ತು ಸಮಿತಿಗಳನ್ನು ರಚನೆ ಮಾಡಿ ಕೊಡಿ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News