ಸೆ.26ರಿಂದ ಉ-ಕ ಭಾಗದಲ್ಲಿ ಗ್ರಾಮೋದ್ಯೋಗ ಉಳಿಸಿ ಚಳವಳಿಗೆ ಚಾಲನೆ

Update: 2020-09-25 18:24 GMT

ಬೆಂಗಳೂರು, ಸೆ.25: ಗ್ರಾಮೀಣ ಪ್ರದೇಶದ ಉದ್ಯೋಗಗಳು ನಶಿಸಿ ಹೋಗುತ್ತಿರುವ ಈ ದಿನಗಳಲ್ಲಿ ಮತ್ತೆ ಅವುಗಳಿಗೆ ಶಕ್ತಿ ತುಂಬುವ ಉದ್ದೇಶದಿಂದ ಗ್ರಾಮ ಸೇವಾ ಸಂಘ ಸೇರಿ ಹಲವು ಸಂಘಟನೆಗಳು ಗ್ರಾಮೋದ್ಯೋಗ ಉಳಿಸಿ ಎಂಬ ಚಳುವಳಿಯನ್ನು ಉತ್ತರ ಕರ್ನಾಟಕದಲ್ಲಿ ಪ್ರಾರಂಭಿಸಲಿವೆ. ಸೆ.26ರ ಬೆಳಗ್ಗೆ 10.30ಕ್ಕೆ ಬಾಗಲಕೋಟೆ ಜಿಲ್ಲೆಯ ಗುಳೇದಗುಡ್ಡ ಗ್ರಾಮದಲ್ಲಿ ಈ ಚಳುವಳಿಗೆ ಚಾಲನೆ ದೊರೆಯಲಿದೆ.

ನೇಕಾರರು, ಕೃಷಿಕರು, ಕುರುಬರು, ಕಂಬಾರರು, ಚಮ್ಮಾರರು, ಮಾದಾರರು ಇತರೆ ಗ್ರಾಮದ ಎಲ್ಲ ಕಸುಬುದಾರರು ಒಟ್ಟಾಗಿ ಗ್ರಾಮೋದ್ಯೋಗ ಉಳಿಸುವಂತೆ ಕೋರಿ ಗುಳೇದಗುಡ್ಡ ಗ್ರಾಮದ ಹರದೊಳ್ಳಿ ಹನುಮಪ್ಪನ ಗುಡಿಯಿಂದ ಹಾದಿ ಬಸವಣ್ಣನ ಗುಡಿಯವರೆಗೆ ಪಾದಯಾತ್ರೆ ಹೊರಡಲಿದ್ದಾರೆ.

ಬಸವಣ್ಣನ ಗುಡಿಯ ಆವರಣವನ್ನು ಊರಿನ ಶರಣರು, ಪ್ರಮುಖ ವ್ಯಕ್ತಿಗಳು ಸೇರಿ ಎಲ್ಲರೂ ಸ್ವಚ್ಛ ಮಾಡುವಂತೆ, ಜನಪ್ರತಿನಿಧಿಗಳಿಗೆ ಪಂಚಾಯಿತಿ, ವಿಧಾನಸಭೆ, ಲೋಕಸಭೆಯ ಒಳಗಿನ ಕಸವನ್ನು ಸ್ವಚ್ಛಗೊಳಿಸಬೇಕು ಎಂಬ ಚಳುವಳಿಯನ್ನು ಪ್ರಾರಂಭಿಸಲಿದ್ದಾರೆ. ಚಳವಳಿಗಾರರು ನಾವುಗಳು ಕೇವಲ ಹೊರಗಿನ ಕಸ ಗುಡಿಸುತ್ತೇವೆ ಎಂಬ ಸಂದೇಶವನ್ನು ಚಳವಳಿ ಮೂಲಕ ತಿಳಿಸಲಿದ್ದಾರೆ.

ಈ ಚಳವಳಿಯಲ್ಲಿ ರಂಗಕರ್ಮಿ, ಸಾಮಾಜಿಕ ಕಾರ್ಯಕರ್ತ ಪ್ರಸನ್ನ, ಗುರುಸಿದ್ದೇಶ್ವರ ಮಠದ ಬಸವರಾಜ ಸ್ವಾಮೀಜಿ, ಮಾಜಿ ಶಾಸಕ ಮಲ್ಲಿಕಾರ್ಜುನ ಬನ್ನಿ, ಕಾಂಗ್ರೆಸ್ ಮುಖಂಡ ಹೊಸಬಸವ ಶೆಟ್ಟರು, ವಿನ್ಯಾಸಗಾರ ಗೋಪಿ ಕೃಷ್ಣ, ಕೆಂಚರಡ್ಡಿ ಹಾಗೂ ಇತರೆ ಸ್ಥಳೀಯ ಸಾಮಾಜಿಕ ಕಾರ್ಯಕರ್ತರು ಭಾಗವಹಿಸಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News