ಮೇಘಾಲಯ: ಭೂಕುಸಿತಕ್ಕೆ ಇಬ್ಬರು ಮಹಿಳಾ ಕ್ರಿಕೆಟಿಗರು ಬಲಿ

Update: 2020-09-26 04:23 GMT

ಶಿಲ್ಲಿಂಗ್, ಸೆ.26:ಮೇಘಾಲಯದ ಈಸ್ಟ್ ಖಾಸಿ ಹಿಲ್ಸ್ ಜಿಲ್ಲೆಯ ಮವ್ನೇಯಲ್ಲಿ ಭಾರೀ ಮಳೆಯಿಂದಾಗಿ ಉಂಟಾಗಿರುವ ಭೂಕುಸಿತದಲ್ಲಿ ಇಬ್ಬರು ಮಹಿಳಾ ಕ್ರಿಕೆಟಿಗರು ಮೃತಪಟ್ಟಿದ್ದರೆ, ಇತರ ಮೂವರು ನಾಪತ್ತೆಯಾಗಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಇವೆಲ್ಲರೂ ಘಟನೆಯ ವೇಳೆ ತಮ್ಮ ಮನೆಯಲ್ಲಿದ್ದರು.

 ರಾಷ್ಟ್ರೀಯ ಮಟ್ಟದಲ್ಲಿ ರಾಜ್ಯದ ಪರ ಆಡಿರುವ ಕ್ರಿಕೆಟ್ ಆಟಗಾರ್ತಿ ರಝಿಯಾ ಅಹ್ಮದ್ ಹಾಗೂ ಸ್ಥಳೀಯ ಆಟಗಾರ್ತಿ ಫೆರೋಝಿಯಾ ಖಾನ್ ಅವರ ಮೃತದೇಹವನ್ನು ಅವಶೇಷಗಳಡಿಯಿಂದ ಹೊರ ತೆಗೆಯಲಾಗಿದೆ ಎಂದು ಮೆವ್ನೆ ಪ್ರದೇಶದ ಮುಖ್ಯಸ್ಥರು ಪಿಟಿಐಗೆ ತಿಳಿಸಿದ್ದಾರೆ.

ನಾಪತ್ತೆಯಾಗಿರುವವರ ಪತ್ತೆ ಕಾರ್ಯ ನಡೆಯುತ್ತಿದೆ ಎಂದು ಈಸ್ಟ್ ಖಾಸಿ ಹಿಲ್ಸ್ ಜಿಲ್ಲೆಯ ಪೊಲೀಸ್ ಅಧೀಕ್ಷಕ ಸಿಲ್ವೆಸ್ಟರ್ ನಾಂಗ್‌ಟಿಂಗೆರ್ ತಿಳಿಸಿದ್ದಾರೆ.

ರಝಿಯಾ 2011-12ರಿಂದ ಹಲವು ರಾಷ್ಟ್ರೀಯ ಮಟ್ಟದ ಟೂರ್ನಿಗಳಲ್ಲಿ ರಾಜ್ಯವನ್ನು ಪ್ರತಿನಿಧಿಸಿದ್ದಾರೆ ಎಂದು ಮೇಘಾಲಯ ಕ್ರಿಕೆಟ್ ಅಸೋಸಿಯೇಶನ್‌ನ ಪ್ರಧಾನ ಕಾರ್ಯದರ್ಶಿ ಜಿಡಿಯೊನ್ ಖಾರ್‌ಕೊಂಗರ್ ಹೇಳಿದ್ದಾರೆ.

ಸೋಮವಾರದಿಂದ ಸುರಿಯುತ್ತಿರುವ ವಿಪರೀತ ಮಳೆಯಿಂದಾಗಿ ರಾಜ್ಯದ ಹಲವು ಭಾಗಗಳಲ್ಲಿ ಸಮಸ್ಯೆಯಾಗಿದೆ ಎಂದು ರಾಜ್ಯ ವಿಪತ್ತು ನಿರ್ವಹಣ ಪ್ರಾಧಿಕಾರದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ರಾಜ್ಯದಾದ್ಯಂತ ಹಲವು ಕಡೆಗಳಲ್ಲಿ ಭೂಕುಸಿತ ನಡೆದಿದ್ದು, ಇದರಿಂದ ಹಲವು ಹಳ್ಳಿಗಳ ರಸ್ತೆಗಳು ಹಾಗೂ ರಾಷ್ಟ್ರೀಯ ಹೆದ್ದಾರಿಗಳು ಧ್ವಂಸವಾಗಿವೆ. ಅವಶೇಷಗಳನ್ನು ತೆರವುಗೊಳಿಸಲು ಪಿಡಬ್ಲುಡಿ ಅಧಿಕಾರಿಗಳು ಶ್ರಮಿಸುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News