ಶಿವಮೊಗ್ಗ: ಮಾಸ್ಕ್ ಹಾಕದ್ದಕ್ಕೆ ದಂಡ ವಿಧಿಸಿದ ಪೊಲೀಸರ ಬೈಕನ್ನೇ ಕದ್ದೊಯ್ದ ಯುವಕ

Update: 2020-09-26 11:24 GMT
ಸಾಂದರ್ಭಿಕ ಚಿತ್ರ

ಶಿವಮೊಗ್ಗ, ಸೆ.26: ಮಾಸ್ಕ್ ಹಾಕದಿದ್ದಕ್ಕೆ ದಂಡ ಹಾಕಿದ ಪೊಲೀಸರ ಬೈಕನ್ನೇ ಕಳ್ಳತನ ಮಾಡಿ ಯುವಕನೊಬ್ಬ ಪರಾರಿಯಾದ ಘಟನೆ ಎರಡು ದಿನಗಳ ಹಿಂದೆ ಹೊಸನಗರ ಪೊಲೀಸ್ ಠಾಣೆ ಮುಂಭಾಗ ನಡೆದಿದೆ.

ಜಿಲ್ಲೆಯಾದ್ಯಂತ ಪೊಲೀಸರು ಮಾಸ್ಕ್ ಹಾಕದವರ ವಿರುದ್ಧ ಕಾರ್ಯಾಚರಣೆ ಆರಂಭಿಸಿದ್ದಾರೆ. ಮಾಸ್ಕ್ ಧರಿಸದೆ ಓಡಾಡುವವರನ್ನು ಹಿಡಿದು ಪೊಲೀಸರು ದಂಡ ಹಾಕುತ್ತಿದ್ದಾರೆ. ಈ ಕಾರ್ಯಾಚರಣೆ ವೇಳೆ ಹೊಸನಗರದಲ್ಲಿ ಯುವಕನೊಬ್ಬನನ್ನು ಹಿಡಿದು ದಂಡ ವಿಧಿಸಿದ್ದರು. ಆದರೆ ದಂಡ ಕಟ್ಟಿ ಠಾಣೆಯಿಂದ ಹಿಂತಿರುಗುವ ವೇಳೆ ಯುವಕ ಪೊಲೀಸರ ಬೈಕನ್ನೇ ಎಗರಿಸಿದ್ದಾನೆ ಎಂದು ತಿಳಿದುಬಂದಿದೆ.

ಸಿಸಿಟಿವಿಯಲ್ಲಿ ಸೆರೆಯಾಯ್ತು ಕೈಚಳಕ
ಪೊಲೀಸರ ಬೈಕ್ ಕಳ್ಳತನ ಮಾಡುತ್ತಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಬೈಕ್ ನಿಲ್ಲಿಸಿ ಎಟಿಎಂಗೆ ತೆರಳಿದ್ದ ಪೊಲೀಸ್ ಸಿಬ್ಬಂದಿ ರಾಘವೇಂದ್ರ ಅವರ ಬೈಕ್‌ಗೆ ನಕಲಿ ಕೀ ಹಾಕಿ, ಕಳ್ಳತನ ಮಾಡಲಾಗಿದೆ. ಯುವಕನನ್ನು ಕುಂದಾಪುರದ ಚೇತನ್ ಎಂದು ಗುರುತಿಸಲಾಗಿದ್ದು, ಪೊಲೀಸರು ವಶಕ್ಕೆ ಪಡೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News