ರಾಜ್ಯ ಸರಕಾರಗಳಿಗೆ ಕೇಂದ್ರದಿಂದ ಜಿಎಸ್‍ಟಿ ದ್ರೋಹ: ಮಾಜಿ ಸಿಎಂ ಸಿದ್ದರಾಮಯ್ಯ

Update: 2020-09-26 13:27 GMT

ಬೆಂಗಳೂರು, ಸೆ.26: ರಾಜ್ಯಗಳಿಗೆ ಜಿಎಸ್‍ಟಿ ಪರಿಹಾರ ನೀಡಲು ಸಂಗ್ರಹ ಮಾಡಿದ್ದ ಸೆಸ್ ಹಣವನ್ನು ನರೇಂದ್ರ ಮೋದಿ ಸರಕಾರ ಅನ್ಯ ಉದ್ದೇಶಕ್ಕೆ ಬಳಸಿದೆ ಎಂದು ಸಿಎಜಿ ನೀಡಿರುವ ವರದಿ ರಾಜ್ಯ ಸರಕಾರಗಳಿಗೆ ಕೇಂದ್ರ ಸರಕಾರ ಬಗೆದಿರುವ ಜಿಎಸ್‍ಟಿ ದ್ರೋಹಕ್ಕೆ ಪುರಾವೆಯಾಗಿದೆ ಎಂದು ‘ವಾರ್ತಾಭಾರತಿ’ ಪತ್ರಿಕೆಯ ಮುಖಪುಟದಲ್ಲಿ ಪ್ರಕಟವಾಗಿರುವ ಸುದ್ದಿಯನ್ನು ಉಲ್ಲೇಖಿಸಿ ವಿರೋಧ ಪಕ್ಷದ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.

ಜಿಎಸ್‍ಟಿ  ಪರಿಹಾರ ನೀಡಲು ಸಂಗ್ರಹಿಸಲಾಗುವ ಸೆಸ್ ಮೊತ್ತವನ್ನು ಪ್ರತ್ಯೇಕ ಖಾತೆಯಲ್ಲಿ ಠೇವಣಿ ಮಾಡಬೇಕಾಗುತ್ತದೆ. ನಿರ್ದಿಷ್ಟ ವರ್ಷ ವ್ಯಯವಾಗದೆ ಉಳಿದಿರುವ ಹಣವನ್ನು ಮುಂದಿನ ವರ್ಷಕ್ಕೆ ವರ್ಗಾಯಿಸುವ ಅವಕಾಶ ಕೂಡಾ ಇದೆ. ಆದರೆ, ನರೇಂದ್ರ ಮೋದಿ ಸರಕಾರ ಅನ್ಯ ಉದ್ದೇಶಕ್ಕೆ ದುರುಪಯೋಗ ಮಾಡಿಕೊಂಡಿದೆ ಎಂದು ಅವರು ಟೀಕಿಸಿದ್ದಾರೆ.

ನಿರ್ದಿಷ್ಟ ಉದ್ದೇಶಕ್ಕೆ ಸಂಗ್ರಹಿಸಲಾಗುವ ಸೆಸ್ ಹಣವನ್ನು ಅನ್ಯ ಉದ್ದೇಶಕ್ಕೆ ಬಳಸುವುದು ಕಾನೂನು ಉಲ್ಲಂಘನೆಯಾಗಿದೆ. ಆದರೆ ನರೇಂದ್ರ ಮೋದಿ ಸರಕಾರ ಜಿಎಸ್‍ಟಿ ಪರಿಹಾರ ನಿಧಿಯ ಹಣವನ್ನು ‘ಕನ್ಸಾಲಿಟೇಡೆಡ್ ಫಂಡ್’ಗೆ ವರ್ಗಾಯಿಸಿ ಜಿಎಸ್‍ಟಿ ಕಾಯ್ದೆಯ ಉಲ್ಲಂಘನೆ ಮಾಡಿದೆ ಎಂದು ಸಿದ್ದರಾಮಯ್ಯ ದೂರಿದ್ದಾರೆ.

ಕರ್ನಾಟಕ್ಕೆ 2021ರ ಅಂತ್ಯಕ್ಕೆ ನೀಡಬೇಕಾಗಿರುವ  ಜಿಎಸ್‍ಟಿ ಪರಿಹಾರ 30 ಸಾವಿರ ಕೋಟಿ ರೂ., ಇದನ್ನು ನಿರಾಕರಿಸಿ, ಆರ್‍ಬಿಐ ನಿಂದ ಸಾಲ ಎತ್ತಲು ಹೇಳಿರುವ ನರೇಂದ್ರ ಮೋದಿ ಸರಕಾರ, ಜಿಎಸ್‍ಟಿ ಪರಿಹಾರಕ್ಕಾಗಿಯೇ ಸಂಗ್ರಹಿಸಿರುವ ಸೆಸ್ ದುಡ್ಡನ್ನು ತನ್ನ ಖಾಲಿ ಖಜಾನೆಯನ್ನು ತುಂಬಲು ದುರುಪಯೋಗ ಮಾಡಿಕೊಂಡಿದೆ ಎಂದು ಅವರು ಆರೋಪಿಸಿದ್ದಾರೆ.

ಜಿಎಸ್‍ಟಿ ಪರಿಹಾರಕ್ಕಾಗಿ 2017-18 ಮತ್ತು 2018-19ರಲ್ಲಿ ಕ್ರಮವಾಗಿ 56,146 ಕೋಟಿ ಮತ್ತು 54,275 ಕೋಟಿ ರೂ.ಸೆಸ್ ಹಣ ವರ್ಗಾವಣೆಯಾಗಿದೆ. ಉಳಿಕೆ ಸೆಸ್ ಮೊತ್ತವನ್ನು ದುರುಪಯೋಗ ಮಾಡಿಕೊಂಡಿರುವ ನರೇಂದ್ರ ಮೋದಿ ಸರಕಾರದ ಈ ಅಕ್ರಮದ ವಿರುದ್ಧ ರಾಜ್ಯ ಸರಕಾರ ಕಾನೂನು ಕ್ರಮಕ್ಕೆ ಮುಂದಾಗಬೇಕು ಎಂದು ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

ಮುಖ್ಯಮಂತ್ರಿ ಯಡಿಯೂರಪ್ಪ ಅವರೇ, ಅಧಿಕಾರಕ್ಕಿಂತ ರಾಜ್ಯದ ಹಿತ ರಕ್ಷಣೆ ಮುಖ್ಯ. ನಿಮಗೆ ರಾಜ್ಯದ ಜನತೆ ಬಗ್ಗೆ ಕಿಂಚಿತ್ತಾದರೂ ಕಾಳಜಿ ಇದ್ದರೆ ನಮ್ಮ ಜನರ ತೆರಿಗೆ ಹಣದ ಪಾಲನ್ನು ಧೈರ್ಯದಿಂದ ಪ್ರಧಾನಿ ನರೇಂದ್ರ ಮೋದಿ ಬಳಿ ಕೇಳಿ. ನಿಮಗೆ ಧೈರ್ಯವಿಲ್ಲದೆ ಇದ್ದರೆ ನಮ್ಮನ್ನು ಜೊತೆಯಲ್ಲಿ ಕರೆದುಕೊಂಡು ಹೋಗಿ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News