ಬಿಎಸ್‍ವೈ ಕಾರ್ಪೋರೇಟ್ ಕಂಪೆನಿಯ ಸಾಕು ಮಗ: ರೈತ ಸಂಘ ರಾಜ್ಯಾಧ್ಯಕ್ಷ ಬಡಗಲಪರ ನಾಗೇಂದ್ರ

Update: 2020-09-26 14:44 GMT

ಬೆಂಗಳೂರು, ಸೆ.26: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಇನ್ನು ಮುಂದೆ ರೈತರ ಮಗ ಎಂದು ಕರೆಯುವುದಿಲ್ಲ. ಬದಲಿಗೆ ಕಾರ್ಪೋರೇಟ್ ಕಂಪೆನಿಯ ಸಾಕು ಮಗನೆಂದು ಕರೆಯುತ್ತೇವೆ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ರಾಜ್ಯಾಧ್ಯಕ್ಷ ಬಡಗಲಪರ ನಾಗೇಂದ್ರ ಹೇಳಿದ್ದಾರೆ.

ಶನಿವಾರ ಭೂ ಸುಧಾರಣಾ ಕಾಯ್ದೆ, ಎಪಿಎಂಸಿ ಕಾಯ್ದೆಗಳ ವಿರುದ್ಧ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರನ್ನು ಭೇಟಿಯಾದ ವೇಳೆ ಆತ್ಮಸಾಕ್ಷಿಯಾಗಿ ಕೆಲಸ ಮಾಡಿ, ರೈತರಿಗೆ ಮನ್ನಣೆ ಕೊಡಿ ಎಂದು ಹೇಳಿದ್ದೆವು. ಆದರೆ, ಅವರು ನಮ್ಮ ಮಾತಿಗೆ ಮನ್ನಣೆ ನೀಡಲಿಲ್ಲ. ಆದ್ದರಿಂದ ಅವರನ್ನು ಇನ್ನು ಮುಂದೆ ರೈತ ಮಗ ಅಂತಾ ಕರೆಯುವುದಿಲ್ಲ. ಕಾರ್ಪೋರೇಟ್ ಕಂಪೆನಿಯ ಸಾಕುಮಗ ಎಂದು ಕರೆಯುತ್ತೇವೆ. ಅವರಿಗೆ ಹೊಸ ಬಿರುದು ಕೊಡುತ್ತೇವೆ. ನಾವು ಆರು ಕೋಟಿ ಜನ ಇದ್ದೇವೆ. ಕಾನೂನುಗಳನ್ನು ಹಾಗೂ ಕಾರ್ಪೋರೇಟ್ ಕಂಪೆನಿಗಳನ್ನು ಬರುವುದಕ್ಕೆ ಬಿಡುವುದಿಲ್ಲ. ಯಡಿಯೂರಪ್ಪನವರೇ ರಾಜಕೀಯ ಸವಾಲು ಇನ್ನು ಮುಂದೆ ನಿಮಗೆ. ನೀವು ಕಾರ್ಪೋರೇಟ್ ಮಗನಾಗಿರಿ ಎಂದರು.

ರೈತ ಮುಖಂಡ ಕುರುಬೂರು ಶಾಂತಕುಮಾರ್ ಮಾತನಾಡಿ, ಸರಕಾರ ಅಂಗೀಕಾರ ಮಾಡಿದ ಮಸೂದೆಗೆ ರಾಜ್ಯಪಾಲರ ಒಪ್ಪಿಗೆ ಬೇಕು. ರಾಜ್ಯಪಾಲರು ಸಹಿ ಹಾಕಬಾರದು. ರಾಜ್ಯಪಾಲರು ಸಹಿ ಹಾಕಿದರೆ ರಾಜಭವನದ ಬಗ್ಗೆ ಇರುವ ಗೌರವ ಹೋಗುತ್ತದೆ ಎಂದರು.

ಶುಕ್ರವಾರ ನಡೆದ ರಸ್ತೆ ತಡೆ ಚಳುವಳಿ ಯಶಸ್ವಿಯಾಗಿದೆ. 28ರ ಬಂದ್‍ಗೆ ಬಹಳಷ್ಟು ಸಂಘಟನೆಗಳು ಬೆಂಬಲ ಸೂಚಿಸಿವೆ. ರಾಜ್ಯದ ಜನರಿಗೆ ಮನವಿ ಮಾಡುತ್ತೇವೆ. ಅನ್ನದಾತನ ಪರವಾಗಿ ರಾಜ್ಯದ ಜನರು ನಿಲ್ಲಬೇಕು. ಸ್ವಯಂ ಪ್ರೇರಿತವಾಗಿ ಬಂದ್ ಮಾಡಬೇಕು. ರಾಜ್ಯ ಸರಕಾರ ರೈತರನ್ನು ಹಗುರವಾಗಿ ತೆಗೆದುಕೊಂಡಿದ್ದಾರೆ. ರೈತರೆಂದರೆ ಏನು ಎಂಬುದನ್ನು ತೋರಿಸಬೇಕು ಎಂದು ಹೇಳಿದರು.

ರಾಜ್ಯ ಸರಕಾರ ಜಾರಿಗೊಳಿಸಿರುವ ಕಾಯ್ದೆಗಳ ಆದೇಶ ಪ್ರತಿಗಳನ್ನು ಸುಡಲಾಗುವುದು. ಸೆ.28ರ ಸೋಮವಾರ ಬೆಳಗ್ಗೆ 10 ಗಂಟೆಗೆ ಟೌನ್ ಹಾಲ್ ಬಳಿ ಬೃಹತ್ ಮೆರವಣಿಗೆ ಮಾಡುವುದಕ್ಕೆ ನಿರ್ಧಾರ ಮಾಡಲಾಗಿದೆ. ಬಂದ್‍ನ ದಿನದಂದು ಬೆಳಗ್ಗೆ 6 ಗಂಟೆಯಿಂದ ನಮ್ಮ ಪ್ರತಿಭಟನೆ ಪ್ರಾರಂಭವಾಗುತ್ತದೆ ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News