ಮಾಲೂರಿನಲ್ಲಿ ಅಕ್ರಮ ಗಣಿಗಾರಿಕೆಗೆ 9 ಸಾವಿರ ಮರಗಳ ಮಾರಣಹೋಮ ಆರೋಪ: ಸರಕಾರಕ್ಕೆ ಹೈಕೋರ್ಟ್ ನೋಟಿಸ್

Update: 2020-09-26 16:34 GMT

ಬೆಂಗಳೂರು, ಸೆ.26: ಕೋಲಾರ ಜಿಲ್ಲೆ ಮಾಲೂರು ತಾಲೂಕಿನ ಗುಂಡೇನಹಳ್ಳಿ ಬೆಟ್ಟದಲ್ಲಿದ್ದ 9 ಸಾವಿರಕ್ಕೂ ಅಧಿಕ ಮರಗಳನ್ನು ಅಕ್ರಮ ಗಣಿಗಾರಿಕೆಗಾಗಿ ನಾಶಗೊಳಿಸಲಾಗಿದೆ ಎಂದು ಆರೋಪಿಸಿ ಸಲ್ಲಿಸಿರುವ ಅರ್ಜಿ ಸಂಬಂಧ ಹೈಕೋರ್ಟ್, ರಾಜ್ಯ ಸರಕಾರಕ್ಕೆ ನೋಟಿಸ್ ಜಾರಿ ಮಾಡಿದೆ.

ಈ ಕುರಿತು ಸ್ಥಳೀಯ ನಿವಾಸಿಗಳಾದ ರವೀಂದ್ರ ಮತ್ತಿತರರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಎಸ್.ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ಈ ವೇಳೆ ಅರ್ಜಿದಾರರ ಪರ ವಕೀಲರಾದ ವೆಂಕಟೇಶ್ ದಳವಾಯಿ ವಾದಿಸಿ, ಬೆಟ್ಟದಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿದ್ದು, ಅರಣ್ಯ ಇಲಾಖೆ ಬೆಳೆಸಿದ್ದ 9,500 ಮರಗಳನ್ನು ನಾಶಪಡಿಸಲಾಗಿದೆ. ಅಕ್ರಮ ಗಣಿಗಾರಿಕೆ ಸಂಬಂಧ ಸರಕಾರ 106 ಕೋಟಿ ರೂಪಾಯಿ ದಂಡ ವಿಧಿಸಿದ್ದರೂ ಈವರೆಗೆ ಅದನ್ನು ವಸೂಲಿ ಮಾಡಿಲ್ಲ. ಬದಲಿಗೆ ಗಣಿಗಾರಿಕೆ ಪರವಾನಿಗೆಗಳನ್ನು ನವೀಕರಿಸಿಕೊಡಲಾಗಿದೆ ಎಂದು ವಿವರಿಸಿದರು.

ವಾದ ಪರಿಗಣಸಿದ ಪೀಠ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಕೊಲಾರ ಜಿಲ್ಲಾಧಿಕಾರಿ ಹಾಗೂ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಅರಣ್ಯ ಇಲಾಖೆಗೆ ನೋಟಿಸ್ ಜಾರಿ ಮಾಡಿ ವಿಚಾರಣೆಯನ್ನು ಅ.14 ಕ್ಕೆ ಮುಂದೂಡಿತು.

ಅರ್ಜಿಯಲ್ಲಿ ಏನಿದೆ: ಕೊಲಾರದ ಮಾಲೂರು ತಾಲೂಕಿನ ಗುಂಡೇನಹಳ್ಳಿ ಬೆಟ್ಟದ 45.16 ಎಕರೆ ಪ್ರದೇಶದಲ್ಲಿ ಅರಣ್ಯ ಇಲಾಖೆ ಮತ್ತು ಬನಹಳ್ಳಿ ಗ್ರಾಮ ಪಂಚಾಯತ್ ಜಂಟಿಯಾಗಿ ಮರಗಳನ್ನು ಬೆಳೆಸಿದ್ದವು. ಈ ಜಾಗದಲ್ಲಿ ಅಕ್ರಮವಾಗಿ ಗಣಿಗಾರಿಕೆ ನಡೆಸಿರುವ ಕೆಲ ಪ್ರಭಾವಿಗಳು 37 ಎಕರೆ ಪ್ರದೇಶದಲ್ಲಿದ್ದ 9,500ಕ್ಕೂ ಅಧಿಕ ಮರಗಳನ್ನು ಕಡಿದು ಹಾಕಿದ್ದಾರೆ. ಹಾಗೆಯೇ ಅಕ್ರಮ ಗಣಿಗಾರಿಕೆ ನಡೆಸಿರುವ ಸಂಬಂಧ 106 ಕೋಟಿ ರೂಪಾಯಿ ದಂಡ ವಿಧಿಸಲಾಗಿದೆ. ಈ ದಂಡದ ಹಣವನ್ನು ಈವರೆಗೂ ವಸೂಲಿ ಮಾಡಿಲ್ಲ. ಹಾಗೆಯೇ ಇಷ್ಟು ದೊಡ್ಡ ಮೊತ್ತದ ಹಣ ಬಾಕಿ ಇರುವಾಗ ಗಣಿಗಾರಿಕೆ ಗುತ್ತಿಗೆ ಪರವಾನಿಗೆಗಳನ್ನು ನವೀಕರಿಸಲೂ ಬರುವುದಿಲ್ಲ. ಹೀಗಿದ್ದರೂ ಸರಕಾರ ಗುತ್ತಿಗೆ ಅವಧಿ ನವೀಕರಿಸಿರುವುದು ನಿಯಮ ಬಾಹಿರ. ಹೀಗಾಗಿ ದಂಡ ಮೊತ್ತವನ್ನು ವಸೂಲಿ ಮಾಡಲು, ಮರಗಳನ್ನು ನಾಶಪಡಿಸಲು ಕಾರಣರಾದ ಅಧಿಕಾರಿಗಳ ವಿರುದ್ಧ ತನಿಖೆ ನಡೆಸಿ ಕ್ರಿಮಿನಲ್ ಪ್ರಕರಣ ದಾಖಲಿಸಲು ಸರಕಾರಕ್ಕೆ ನಿರ್ದೇಶಿಸಬೇಕು ಎಂದು ಅರ್ಜಿದಾರರು ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News