×
Ad

ಭೂ ಸುಧಾರಣೆ ಕಾಯ್ದೆ: ವಿಧೇಯಕದಲ್ಲಿನ ಅಂಶಗಳ ಬದಲಾವಣೆಗೆ ಎಚ್‍ಡಿಕೆ ಆಗ್ರಹ

Update: 2020-09-26 22:09 IST

ಬೆಂಗಳೂರು, ಸೆ.26: ಕರ್ನಾಟಕ ಭೂ ಸುಧಾರಣೆಗಳ ಕಾಯ್ದೆಯಲ್ಲಿನ ನ್ಯೂನತೆಯನ್ನು ಸರಿಪಡಿಸಿದರೆ, 2020 ನೇ ಸಾಲಿನ ಕರ್ನಾಟಕದ ಭೂ ಸುಧಾರಣೆಗಳ (2ನೆ ತಿದ್ದುಪಡಿ) ವಿಧೇಯಕ ಒಪ್ಪಲಾಗುವುದು ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ತಿಳಿಸಿದರು.

ಶನಿವಾರ ವಿಧಾನ ಸಭೆಯಲ್ಲಿ ಭೂ ಸುಧಾರಣೆ ತಿದ್ದುಪಡಿ ವಿಧೇಯಕ ಚರ್ಚೆಯಲ್ಲಿ ಮಾತನಾಡಿದ ಅವರು, ಕಾಯ್ದೆಯ 79(ಎ) 79(ಬಿ) ದುರ್ಬಳಕೆಯಾಗುತ್ತಿವೆ. 35 ವರ್ಷದ ಹಿಂದೆ ಬಿಡದಿ ಬಳಿ ಭೂಮಿ ಖರೀದಿಸಿ ಅದರ ಸಮಸ್ಯೆಯನ್ನು ಸ್ವತಃ ಆನುಭವಿಸಿದ್ದೇನೆ ಎಂದು ಸದನದ ಗಮನ ಸೆಳೆದರು.

ರಾಜಧಾನಿ ಬೆಂಗಳೂರು ಸೇರಿದಂತೆ ಇನ್ನಿತರೆ ನಗರ ಪ್ರದೇಶಗಳ ವ್ಯಾಪ್ತಿಯಲ್ಲಿನ ಕೃಷಿಕರನ್ನು ಒಕ್ಕಲೆಬ್ಬಿಸಬಾರದು ಎಂದ ಅವರು, ಬಡಾವಣೆ ನಿರ್ಮಾಣ ಮಾಡಲು ಬೆಂಗಳೂರು ಸುತ್ತ ಮುತ್ತ ಭೂಮಿ ವಶಕ್ಕೆ ಪಡೆದಾಗ ರೈತರಿಗೆ ಎಷ್ಟರ ಮಟ್ಟಿಗೆ ಅನುಕೂಲವಾಯಿತು. ರೈತರಿಂದ ಜಿಪಿಎ ಮಾಡಿಕೊಂಡವರಿಗೆ ಭೂಮಿ ಸಿಕ್ಕಿದೆಯೇ, ಅರ್ಕಾವತಿ ಬಡಾವಣೆಯಲ್ಲಿ ನಿವೇಶನದಾರರಿಗೆ ನಿವೇಶನವಿಲ್ಲ, ರೈತರಿಗೆ ಎಷ್ಟು ಭೂಮಿ ವಾಪಾಸ್ ಕೊಟ್ಟಿದ್ದೀರಿ ? ಹೀಗೆ ಲೋಪದೋಷ ಸರಿಪಡಿಸದೇ ವಿಧೇಯಕಗಳನ್ನು ಜಾರಿಗೊಳಿಸಿದರೆ ಯಾವುದೇ ರೀತಿಯ ಪ್ರಯೋಜನವಿಲ್ಲ ಎಂದು ನುಡಿದರು.

ರಾಜ್ಯದಲ್ಲಿ ಭೂಮಿಯ ಬೆಲೆ ಏರುತ್ತಿದೆ, ಬೆಂಗಳೂರು ಸುತ್ತಮುತ್ತ ಪ್ರತಿ ಎಕರೆಗೆ 2-3 ಕೋಟಿ ರೂ. ಬೆಲೆ ಇದೆ. ಕೃಷಿ ಆದಾಯದಲ್ಲಿ ಭೂಮಿ ಖರೀದಿಸಲು ಸಾಧ್ಯವಿದೆಯೇ? ಕೃಷಿ ಕುಟುಂಬ ಕಷ್ಟದಲ್ಲಿದೆ, ಇನ್ನಷ್ಟು ಕಷ್ಟಕ್ಕೆ ದೂಡಬೇಡಿ, ಈ ಕಾಯ್ದೆಯಿಂದ ಕೃಷಿಕರಿಗೆ ಅನುಕೂಲವಾಗುತ್ತದೆಯೇ ಎಂದು ಸರಕಾರವನ್ನು ಪ್ರಶ್ನಿಸಿದರು.

ಕೋವಿಡ್-19ರ ಆತಂಕದಲ್ಲಿ ಎಲ್ಲಾ ವಲಯಗಳು ನಷ್ಟದ ಪರಿಣಾಮಕ್ಕೆ ಸಿಲುಕಿವೆ. ಆದರೂ ಕೃಷಿ ಕ್ಷೇತ್ರ ಮಾತ್ರ ತನ್ನ ಚಟುವಟಿಕೆ ನಿಲ್ಲಿಸಿಲ್ಲ. ಈ ಬಾರಿ ದಾಖಲೆ ಪ್ರಮಾಣದಲ್ಲಿ ಬಿತ್ತನೆ ಮಾಡಲಾಗಿದೆ ಎಂದು ಸರಕಾರವೇ ಹೇಳಿದೆ ಎಂದ ಅವರು, ಭ್ರಷ್ಟಾಚಾರದ ಬಗ್ಗೆ ಇಲ್ಲಿ ಚರ್ಚೆಯೇ ಇಲ್ಲ. ಇನ್ನು ಬೆಕ್ಕಿಗೆ ಗಂಟೆ ಕಟ್ಟುವವರು ಯಾರು ಎನ್ನುವಂತಾಗುತ್ತದೆ ಅಷ್ಟೇ ಎಂದು ಕುಮಾರಸ್ವಾಮಿ ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News