ಶಾಸಕರ ಪ್ರದೇಶಾಭಿವೃದ್ಧಿ ನಿಧಿಗೆ 50 ಲಕ್ಷ ರೂ. ಬಿಡುಗಡೆಗೆ ಕ್ರಮ: ಸಚಿವ ಮಾಧುಸ್ವಾಮಿ

Update: 2020-09-26 16:40 GMT

ಬೆಂಗಳೂರು, ಸೆ.26: ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಡಿಯಲ್ಲಿ ನೀಡುವ ಅನುದಾನದ ಪೈಕಿ ಶೀಘ್ರದಲ್ಲಿಯೇ 50 ಲಕ್ಷ ರೂ.ಗಳನ್ನು ಬಿಡುಗಡೆ ಮಾಡಲಾಗುವುದು ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾದುಸ್ವಾಮಿ ಹೇಳಿದ್ದಾರೆ.

ಶನಿವಾರ ವಿಧಾನಪರಿಷತ್‍ನಲ್ಲಿ ಎಸ್.ರವಿ ಪ್ರಸ್ತಾಪಿಸಿದ ಶಾಸಕರ ಪ್ರದೇಶ ಅಭಿವೃದ್ಧಿ ನಿಧಿ ವಿಳಂಬ ಮಾಡುತ್ತಿರುವ ವಿಷಯಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಶಾಸಕರ ಪ್ರದೇಶಾಭಿವೃದ್ಧಿಗಾಗಿ ಸರಕಾರ ಎರಡು ಕೋಟಿ ರೂ.ಗಳ ಅನುದಾನ ಮೀಸಲಿಟ್ಟಿದೆ. ಅದರಲ್ಲಿ ಶೀಘ್ರದಲ್ಲಿಯೇ 50 ಲಕ್ಷ ಬಿಡುಗಡೆ ಮಾಡಲು ಕ್ರಮ ವಹಿಸಲಾಗುವುದು. ಉಳಿದ ಅನುದಾನ ಮುಂದಿನ ದಿನಗಳಲ್ಲಿ ನೀಡಲಾಗುವುದು ಎಂದು ತಿಳಿಸಿದರು.

ಯೋಜನೆ ಅಡಿ ಪ್ರತಿ ವರ್ಷ ನೀಡಲಾಗುವ ತಲಾ ಎರಡು ಕೋಟಿ ರೂ.ಗಳಲ್ಲಿ ಪ್ರಸಕ್ತ ಸಾಲಿಗೆ ಈಗಾಗಲೇ 50 ಲಕ್ಷ ರೂ. ಬಿಡುಗಡೆ ಮಾಡಲಾಗಿದೆ. ಇನ್ನೂ 50 ಲಕ್ಷ ಶೀಘ್ರ ಆದೇಶ ಹೊರಡಿಸಲಾಗುವುದು. ಸಾಧ್ಯವಾದರೆ ಉಳಿದ ಒಂದು ಕೋಟಿ ಅನುದಾನವನ್ನೂ ನೀಡಲಾಗುವುದು. ಹಿಂದಿನ ವರ್ಷದ ಅನುದಾನದ ಬಗ್ಗೆ ನನಗೆ ಮಾಹಿತಿ ಇಲ್ಲ' ಎಂದು ಹೇಳಿದರು.

ಇದಕ್ಕೂ ಮುನ್ನ ಮಾತನಾಡಿದ ರವಿ, `ನಿಧಿ ಅಡಿ ಹಲವು ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಪೂರ್ಣಗೊಂಡು ಸುಮಾರು ದಿನಗಳಾದರೂ ಹಣ ಬಿಡುಗಡೆ ಆಗಿಲ್ಲ. ಜನರಿಗೆ ಉತ್ತರಿಸಲು ಸಾಧ್ಯವಾಗುತ್ತಿಲ್ಲ' ಎಂದು ಅಲವತ್ತುಕೊಂಡರು.

ದನಿಗೂಡಿಸಿದ ಸದಸ್ಯ ಶ್ರೀನಿವಾಸ ಮಾನೆ, `2019-20 ಮತ್ತು 2020-21ನೇ ಸಾಲಿನ ಕ್ರಿಯಾಯೋಜನೆ ಸಿದ್ಧಪಡಿಸಿ ಸರಕಾರಕ್ಕೆ ಸಲ್ಲಿಸಲಾಗಿದೆ. ಅನುದಾನ ಇದುವರೆಗೆ ಬಂದಿಲ್ಲ. ಜನರನ್ನು ತಪ್ಪಿಸಿ ಓಡಾಡುವ ಸ್ಥಿತಿ ಇದೆ' ಎಂದು ಹೇಳಿದರು. ಪ್ರತಿಪಕ್ಷ ನಾಯಕ ಎಸ್.ಆರ್. ಪಾಟೀಲ, ಮರಿತಿಬ್ಬೇಗೌಡ ಮತ್ತಿತರರು ಮಾತನಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News