ಕೃಷ್ಣಾ ಮೇಲ್ದಂಡೆ ಯೋಜನೆ ಆದಷ್ಟು ಬೇಗ ಜಾರಿ: ರಮೇಶ್ ಜಾರಕಿಹೊಳಿ ಭರವಸೆ

Update: 2020-09-26 16:49 GMT

ಬೆಂಗಳೂರು, ಸೆ.26: ಕೃಷ್ಣಾ ಮೇಲ್ದಂಡೆ ಯೋಜನೆಯನ್ನು ಆದಷ್ಟು ಬೇಗ ಜಾರಿಗೆ ತರಲಾಗುವುದು ಎಂದು ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ತಿಳಿಸಿದ್ದಾರೆ.

ವಿಧಾನ ಪರಿಷತ್‍ನಲ್ಲಿ ನಿಯಮ 68ರ ಅಡಿ ಪ್ರತಿಪಕ್ಷ ನಾಯಕ ಎಸ್.ಆರ್.ಪಾಟೀಲ್ ಮತ್ತಿತರ ಸದಸ್ಯರು ನಡೆಸಿದ ಚರ್ಚೆಗೆ ಉತ್ತರಿಸಿ ಮಾತನಾಡಿದ ರಮೇಶ್ ಜಾರಕಿಹೊಳಿ ಅವರು, ಮುಖ್ಯಮಂತ್ರಿಗಳ ಜತೆ ಸಮಾಲೋಚಿಸಿದ್ದೇನೆ. ಕೇಂದ್ರ ಸಚಿವರನ್ನು ಈ ವಿಚಾರವಾಗಿ ಹಲವು ಬಾರಿ ಭೇಟಿ ಮಾಡಿ ಚರ್ಚಿಸಿದ್ದೇನೆ. ಮತ್ತೊಮ್ಮೆ ತೆರಳಿ ಚರ್ಚಿಸುತ್ತೇನೆ. ಎಷ್ಟೇ ಹಣ ಖರ್ಚಾದರೂ ಪರವಾಗಿಲ್ಲ ಯೋಜನೆ ಅನುಷ್ಠಾನಕ್ಕೆ ಬರಲಿದೆ. ಯಾವುದೇ ಅಡೆತಡೆ ಎದುರಾದರೂ ನಿವಾರಿಸಿಕೊಂಡು ಯೋಜನೆ ಅನುಷ್ಠಾನ ಮಾಡುತ್ತೇವೆ ಎಂದರು.

ಪ್ರತಿಪಕ್ಷ ನಾಯಕ ಎಸ್.ಆರ್. ಪಾಟೀಲ್ ಮಾತನಾಡಿ, ಮಹದಾಯಿ, ಕಾವೇರಿ ಮಾದರಿಯಲ್ಲಿ ಸುಪ್ರೀಂಕೋರ್ಟ್ ಮೂಲಕ ನೋಟಿಫಿಕೇಷನ್ ಹೊರಡಿಸಿ ಇದಕ್ಕಿರುವ ಅಡೆತಡೆ ನಿವಾರಿಸಿ ಎಂದು ಮನವಿ ಮಾಡಿದರು. ಕಡಿಮೆ ಪ್ರಮಾಣದ ಭೂ ಸ್ವಾಧೀನ ಪ್ರಕ್ರಿಯೆ ನಡೆಯಬೇಕಿದೆ. ಶೇ.75ರಷ್ಟು ಕಾಮಗಾರಿ ಮುಗಿದಿದೆ. ಶೇ.25 ರಷ್ಟು ಮಾತ್ರ ಬಾಕಿ ಇದೆ. ಯೋಜನೆಯಿಂದ ಏಳು ಜಿಲ್ಲೆಗೆ ಅನುಕೂಲ ಆಗಲಿದೆ. ಉತ್ತರ ಕರ್ನಾಟಕ ಭಾಗದ ಅಭಿವೃದ್ಧಿ ಆಗಲಿದೆ ಎಂದರು.

ಸದಸ್ಯರಾದ ಬಸವರಾಜ್ ಇಟಗಿ, ಪ್ರಕಾಶ್ ರಾಥೋಡ್, ಆರ್.ಬಿ. ತಿಮ್ಮಾಪೂರ್, ತಿಪ್ಪೇಸ್ವಾಮಿ ಕೃಷ್ಣಾ ಮೇಲ್ದಂಡೆ ಯೋಜನೆ ಜಾರಿ ಬಗ್ಗೆ ಒತ್ತಾಯ ಮಾಡಿದರು.

ನಮ್ಮವರು ವಿಶೇಷ ಮನವಿ ಅರ್ಜಿ(ಎಸ್‍ಎಲ್‍ಪಿ) ಹಾಕಿದ್ದೇವೆ. ನಾವು ಸತತ ಪ್ರಯತ್ನ ಮಾಡುತ್ತಿದ್ದೇವೆ. ಸುಪ್ರೀಂಕೋರ್ಟ್ ನಿರ್ದೇಶನ ಇರುವಾಗ ಪ್ರಯತ್ನ ಮಾಡುತ್ತಿದ್ದೇವೆ ಎಂದು ಸಚಿವ ಮಾಧುಸ್ವಾಮಿ ತಿಳಿಸಿದರು.

ಸಚಿವ ರಮೇಶ್ ಜಾರಕಿಹೊಳಿ ಸದನಕ್ಕೆ ಮತ್ತೊಮ್ಮೆ ಭರವಸೆ ನೀಡಿ ಮಾತನಾಡಿ, ಕಾವೇರಿ, ಮಹದಾಯಿ ವಿಚಾರದಲ್ಲಿ ಯಾವುದೇ ತಡೆಯಾಜ್ಞೆ ಇರಲಿಲ್ಲ. ಆದರೆ ಇದಕ್ಕಿದೆ. ವ್ಯತ್ಯಾಸ ಸಾಕಷ್ಟಿದೆ. ಆದರೂ ನಮ್ಮ ಪ್ರಯತ್ನ ನಾವು ಮಾಡುತ್ತಿದ್ದೇವೆ. ನಮ್ಮ ಭಾಗದಲ್ಲಿ ಈ ಯೋಜನೆ ಪಕ್ಷಾತೀತವಾಗಿ ನಡೆಯುತ್ತಿದೆ. ಮಾತುಕತೆ ನಡೆಸುತ್ತಿದ್ದೇವೆ. ಸಾಧ್ಯವಾಗುವ ವಿಶ್ವಾಸ ಇದೆ. ಭೂ ಸ್ವಾದೀನಕ್ಕೆ ಒಂದು ದರ ನಿಗದಿ ಮಾಡಿ ಸ್ವಾಧೀನ ಪ್ರಕ್ರಿಯೆ ಮಾಡುತ್ತೇವೆ. ಸರ್ವ ಪಕ್ಷ ಸಭೆ ಕರೆದು ಚರ್ಚಿಸುತ್ತೇವೆ. ಈ ಉ-ಕ ಭಾಗದ ಪ್ರತಿನಿಧಿಗಳ ಸಭೆ ನಡೆಸುತ್ತೇವೆ ಎಂದು ವಿವರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News