ಸೆ.28ರಂದು ಕರ್ನಾಟಕ ಬಂದ್: ರಾಜ್ಯದ ಎಲ್ಲಾ ಸಂಘಟನೆಗಳ ಬೆಂಬಲ ಕೋರಿದ ಐಕ್ಯ ಹೋರಾಟ ಸಮಿತಿ

Update: 2020-09-26 16:56 GMT

ಮೈಸೂರು,ಸೆ.26: ಸುಗ್ರೀವಾಜ್ಞೆಗಳ ಮೂಲಕ ರೈತ ವಿರೋಧಿ ಮಸೂಧೆಗಳನ್ನು ಜಾರಿಗೆ ತಂದು ಸಂವಿಧಾನದ ಶಕ್ತಿಯನ್ನು ದುರ್ಬಲಗೊಳಿಸಿ, ಜನರ ಹಕ್ಕನ್ನು ಕಿತ್ತುಕೊಳ್ಳುತ್ತಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಪ್ರಜಾಪ್ರಭುತ್ವ ವಿರೋಧಿ ನಡೆಗಳನ್ನು ಖಂಡಿಸಿ ಸೆ.28 ರಂದು ಕರ್ನಾಟಕ ಬಂದ್‍ಗೆ ಕರೆ ನೀಡಲಾಗಿದ್ದು, ರಾಜ್ಯದ ಎಲ್ಲಾ ಸಂಘಟನೆಗಳು ಬೆಂಬಲ ನೀಡಿ ಸಹಕರಿಸಬೇಕು ಎಂದು ರೈತ ಮುಖಂಡ ಹಸಕೋಟೆ ಬಸವರಾಜು ಮನವಿ ಮಾಡಿದರು.

ನಗರದ ಜಲದರ್ಶಿನಿ ಅತಿಥಿಗೃಹದಲ್ಲಿ ಶನಿವಾರ ವಿವಿಧ ಸಂಘಟನೆಗಳೊಡಗೂಡಿ ಸೆ.28ರ ಕರ್ನಾಟಕ ಬಂದ್‍ಗೆ ಸಂಬಂಧಿಸಿದಂತೆ ಪೂರ್ವಭಾವಿ ಸಭೆ ನಡೆಸಿ ಯಾವ ರೀತಿಯ ಹೋರಾಟ ಮತ್ತು ಎಲ್ಲಿ ಮಾಡಬೇಕೆಂಬ ಬಗ್ಗೆ ಚರ್ಚಿಸಲಾಯಿತು.

ನಂತರ  ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ರೈತ ವಿರೋಧಿ ಕಾಯ್ದೆಗಳನ್ನು ಜಾರಿಗೆ ತಂದಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ಧ ಕಳೆದ 6 ದಿನಗಳಿಂದಲೂ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆ ನಡೆಸಲಾಗುತ್ತಿದೆ. ಆದರೆ ಸರ್ಕಾರ ರೈತರ ಸಂಕಷ್ಟಗಳಿಗೆ ಸ್ಪಂದಿಸುತ್ತಿಲ್ಲ. ಹಾಗಾಗಿ ಕರ್ನಾಟಕ ಬಂದ್ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಪ್ರಜಾಪ್ರಭುತ್ವ ವಿರೋಧಿ ನಡೆಗಳನ್ನು ಖಂಡಿಸಿ ಐಕ್ಯ ಹೋರಾಟ ವೇದಿಕೆ ನಡೆಸುತ್ತಿರುವ ಪ್ರತಿಭಟನೆಗಳ ಮುಂದುವರಿದ ಭಾಗವಾಗಿ ಸೆ.28 ಸೋಮವಾರ ಕರ್ನಾಟಕ ಬಂದ್‍ಗೆ ಕರೆ ನೀಡಲಾಗಿದೆ. ಅಂದು ಬೆಳಿಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆ ವರೆಗೆ ಬಂದ್ ಆಚರಿಸಲಾಗುವುದು. ರೈತ ವಿರೋಧಿ ಕಾಯ್ದೆ ವಾಪಸ್ ಪಡೆಯುವವರೆಗೆ ನಿರಂತರ ಹೋರಾಟ ನಡೆಯಲಿದೆ. ಇಡೀ ಸಮಾಜದ ಜೀವನ ಚಕ್ರದ ಆಹಾರ ಪೂರೈಕೆಯ ಚೈತನ್ಯದ ಕೇಂದ್ರವಾಗಿರುವ ರೈತರ ಅಸ್ತಿತ್ವದ ಅಳಿವು ಉಳಿವಿನ ನಿರ್ಣಾಯಕ ಹೋರಾಟಕ್ಕೆ ಜೀವನದ ಎಲ್ಲಾ ರಂಗಗಳ ಸಂಘಟನೆಗಳು ಒಗ್ಗೂಡಿ ಬಂದ್‍ಗೆ ಬೆಂಬಲ ವ್ಯಕ್ತಪಡಿಸಿವೆ ಎಂದು ಹೇಳಿದರು.

ಸಭೆಯಲ್ಲಿ ರೈತ ಸಂಘದ ಹೊಸಕೋಟೆ ಬಸವರಾಜು, ಪಿ.ಮರಂಕಯ್ಯ, ಅಹಿಂದ ಮುಖಂಡ ಕೆ.ಎಸ್.ಶಿವರಾಮ್, ಸ್ವರಾಜ್ ಇಂಡಿಯಾದ ಉಗ್ರನರಸಿಂಹೇಗೌಡ, ವಕೀಲ ಪುನೀತ್, ಕನ್ನಡ ಸಂಘಟನೆಗಳ ಗಿರೀಶ್ ಶಿವಾರ್ಚಕ, ಐಎನ್‍ಟಿಯುಸಿ ಅನಿಲ್ ಕುಮಾರ್, ಎಐಟಿಯುಸಿ ಮುದ್ದುಕೃಷ್ಣ, ರಾಜ್ಯ ಕಬ್ಬು ಬೆಳೆಗಾರರ ಸಂಘದ ಜಿಲ್ಲಾಧ್ಯಕ್ಷ ವೆಂಕಟೇಶ್, ಮೈಸೂರು ವಿ.ವಿ.ಸಂಶೋಧಕರ ಸಂಘದ ಅಧ್ಯಕ್ಷ ಮರಿದೇವಯ್ಯ, ಗೀತಾ ವೇಲುಮಣಿ, ನಗರ್ಲೆ ವಿಜಯಕುಮಾರ್, ನಾಯಕ ಸಂಘದ ದ್ಯಾವಪ್ಪ ನಾಯಕ, ದಸಂಸ ಮುಖಂಡ ಕಲ್ಲಹಳ್ಳಿ ಕುಮಾರ್, ಪರಿಸರವಾದಿ ಭಾನುಮೋಹನ್, ಗಣೇಶ್, ಧನರಾಜ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News