ಮುಂದಿನ ವಿಧಾನಸಭಾ ಚುನಾವಣೆಯಲ್ಲಿ 140 ಸ್ಥಾನಗಳಲ್ಲಿ ಗೆಲುವು: ಸಿಎಂ ಯಡಿಯೂರಪ್ಪ

Update: 2020-09-26 17:17 GMT

ಬೆಂಗಳೂರು, ಸೆ.26: ಮುಂದಿನ ವಿಧಾನಸಭಾ ಚುನಾವಣೆಯಲ್ಲಿ 130-140 ಸ್ಥಾನ ಗೆದ್ದು ಇನ್ನು 10 ವರ್ಷ ಕಾಂಗ್ರೆಸ್ ವಿರೋಧ ಪಕ್ಷದಲ್ಲಿ ಇರುವಂತೆ ಮಾಡುತ್ತೇನೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.

ವಿಧಾನಸಭೆಯಲ್ಲಿ ಕಾಂಗ್ರೆಸ್ ಪಕ್ಷ ಮಂಡಿಸಿದ ಅವಿಶ್ವಾಸ ನಿರ್ಣಯದ ಮೇಲಿನ ಚರ್ಚೆಗೆ ಉತ್ತರಿಸಿದ ಅವರು, ಗುಲಾಂ ನಬಿ ಆಝಾದ್ ಕಾಂಗ್ರೆಸ್ ಇನ್ನು 50 ವರ್ಷ ವಿರೋಧ ಪಕ್ಷದಲ್ಲಿರುತ್ತದೆ ಎಂದಿದ್ದಾರೆ. ಲೋಕಸಭೆಯಲ್ಲಿ ಬಿಜೆಪಿ 303 ಸ್ಥಾನ ಪಡೆದಿದ್ದರೆ, ಎನ್‍ಡಿಎ ಒಟ್ಟಾರೆಯಾಗಿ 350 ಸ್ಥಾನ ಗೆದ್ದಿದೆ ಎಂದರು.

ರಾಜ್ಯದ 28 ಲೋಕಸಭಾ ಕ್ಷೇತ್ರಗಳಲ್ಲಿ 25 ಸ್ಥಾನ ಬಿಜೆಪಿ ಗೆದ್ದಿದೆ. ಉಪ ಚುನಾವಣೆ ನಡೆದ 15 ಸ್ಥಾನಗಳಲ್ಲಿ 12 ಸ್ಥಾನ ಗೆದ್ದಿದ್ದೇವೆ. ರಾಜ್ಯದ ಜನ ನಮ್ಮ ಮೇಲೆ ವಿಶ್ವಾಸ ಇರಿಸದೆ ಇದ್ದಿದ್ದರೆ ಈ ಗೆಲವು ಸಾಧ್ಯವಿತ್ತೆ. ಮುಂದೆ ಬರುವ ಚುನಾವಣೆಗಳಲ್ಲೂ ಅತೀ ಹೆಚ್ಚು ಸ್ಥಾನಗಳನ್ನು ಗೆಲ್ಲುತ್ತೇವೆ ಎಂದು ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಗೆ ಅವರು ಸವಾಲು ಹಾಕಿದರು.

ರಾಜ್ಯದ ಎಲ್ಲ ಜಲಾಶಯಗಳು, ಕೆರೆ, ಕಟ್ಟೆಗಳು ತುಂಬಿ ತುಳುಕುತ್ತಿವೆ. ಉತ್ತಮ ಬಿತ್ತನೆ, ಬೆಳೆ ನಿರೀಕ್ಷೆ ಇದೆ. ಒಳ್ಳೆಯ ಕಾಲ ಬಂದಿದೆ. ರೈತ, ಕೃಷಿ, ಕಾರ್ಮಿಕ, ಪರಿಶಿಷ್ಟ ಜಾತಿ, ಪಂಗಡದವರು ನಮ್ಮ ಜೊತೆ ಇದ್ದಾರೆ ಎಂದು ಯಡಿಯೂರಪ್ಪ ಹೇಳಿದರು.

ನೆರೆ ಹಾವಳಿಯಿಂದ ಹಾನಿಗೀಡಾದ ಮನೆಗಳಿಗೆ ಪರಿಹಾರ, ಮೃತಪಟ್ಟಿರುವವರಿಗೆ ತಲಾ 7 ಲಕ್ಷ ರೂ. ಪರಿಹಾರ ನೀಡಿದ್ದೇವೆ. 9.74 ಲಕ್ಷ ಮನೆಗಳನ್ನು ನಿರ್ಮಿಸಿಕೊಡಲು 10,196 ಕೋಟಿ ರೂ.ಗಳಿಗೆ ಅನುಮೋದನೆ ನೀಡಿದ್ದೇವೆ. ರಾಜೀವ್ ಗಾಂಧಿ ವಸತಿ ನಿಗಮದಿಂದ ಮುಂದಿನ ಎರಡು ವರ್ಷಗಳಲ್ಲಿ 10 ಲಕ್ಷ ಮನೆಗಳನ್ನು ಕಟ್ಟಿ ಕೊಡುತ್ತೇವೆ ಎಂದು ಯಡಿಯೂರಪ್ಪ ಹೇಳಿದರು.

ಕೋವಿಡ್ ಸಂಕಷ್ಟದ ಸಂದರ್ಭದಲ್ಲಿಯೂ ನಾವು ಕರ್ತವ್ಯದಿಂದ ಹಿಂದೆ ಸರಿದಿಲ್ಲ. ಜನರ ಹಿತದೃಷ್ಟಿಯಿಂದ ಶಕ್ತಿ ಮೀರಿ ಪ್ರಾಮಾಣಿಕ ಕೆಲಸ ಮಾಡಿದ್ದೇವೆ. ನೀರಾವರಿ, ತೋಟಗಾರಿಕೆ ಬೆಳೆಗಳಿಗೆ ಪರಿಹಾರ ನೀಡಿದ್ದೇವೆ. ಎಸ್‍ಡಿಆರ್‍ಎಫ್ ಎನ್‍ಡಿಆರ್‍ಎಫ್ ಮೂಲಕ ಹೆಚ್ಚುವರಿ ಹಣ ಬಿಡುಗಡೆ ಮಾಡಿದ್ದೇವೆ ಎಂದು ಅವರು ತಿಳಿಸಿದರು.

ಕಿಸಾನ್ ಸಮ್ಮಾನ್ ಯೋಜನೆಯಡಿ ಕೇಂದ್ರ ಸರಕಾರ ನೀಡಿರುವ 6 ಸಾವಿರ ರೂ.ಗಳ ಜೊತೆಗೆ ನಮ್ಮ ಸರಕಾರವು 4 ಸಾವಿರ ರೂ.ಗಳಂತೆ ಹೆಚ್ಚುವರಿಯಾಗಿ 44 ಲಕ್ಷ ಫಲಾನುಭವಿಗಳಿಗೆ ಹಂಚಿಕೆ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಹೇಳಿದರು.

ಕೈಮಗ್ಗ, ವಿದ್ಯುತ್ ಮಗ್ಗ ನೇಕಾರರಿಗೆ, ಟ್ಯಾಕ್ಸಿ ಚಾಲಕರಿಗೆ ಪರಿಹಾರ ನೀಡಿದ್ದೇವೆ. 35 ರಿಂದ 40 ಸಾವಿರ ಕೋಟಿ ರೂ.ಸಾಲ ಪಡೆದು, ಎಲ್ಲ ಅಭಿವೃದ್ಧಿ ಕಾರ್ಯಗಳನ್ನು ಮುಂದುವರಿಸುತ್ತೇನೆ ಎಂದು ಅವರು ತಿಳಿಸಿದರು.

2018ರ ಚುನಾವಣೆ ಸಂದರ್ಭದಲ್ಲಿ ಸಿದ್ದರಾಮಯ್ಯ ಸರಕಾರ 15 ಲಕ್ಷ ಮನೆಗಳ ನಿರ್ಮಾಣಕ್ಕೆ ಆದೇಶ ಮಾಡಿದರು. ಅದಕ್ಕೆ 29 ಸಾವಿರ ಕೋಟಿ ರೂ. ಬೇಕಾಗಿತ್ತು. ಆದರೆ, ಬಜೆಟ್‍ನಲ್ಲಿ ಇಟ್ಟಿದ್ದು 3 ಸಾವಿರ ಕೋಟಿ ರೂ.ಮಾತ್ರ. ನೀರಾವರಿಗೆ 9 ಸಾವಿರ ಕೋಟಿ ರೂ.ಇಟ್ಟು, 1.03 ಲಕ್ಷ ಕೋಟಿ ರೂ. ಕಾಮಗಾರಿಗಳಿಗೆ ವಚನ ನೀಡಿದ್ದಾರೆ ಎಂದು ಯಡಿಯೂರಪ್ಪ ಆರೋಪಿಸಿದರು.

ನಿಮ್ಮ ಸರಕಾರದಲ್ಲಿ ನಡೆದ ವ್ಯಾಪಕ ಭ್ರಷ್ಟಾಚಾರ, ಸುಳ್ಳು ಆಶ್ವಾಸನೆಗಳನ್ನು ನೀಡಿದ್ದರಿಂದ ವಿಧಾನಸಭೆ, ಲೋಕಸಭೆ  ಹಾಗೂ ವಿಧಾನಸಭೆ ಉಪ ಚುನಾವಣೆಯಲ್ಲಿ ಜನ ಶಾಪ ಹಾಕಿದರು. ಇವತ್ತು ಮಾಡಿರುವ ಚರ್ಚೆಗೂ ಜನ ಉತ್ತರ ನೀಡುತ್ತಾರೆ ಎಂದು ಅವರು ಸವಾಲು ಹಾಕಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News