ಕಲಬುರಗಿ: ನಿಂತಿದ್ದ ಲಾರಿಗೆ ಕಾರು ಢಿಕ್ಕಿ; ಗರ್ಭಿಣಿ ಸಹಿತ ಏಳು ಮಂದಿ ಮೃತ್ಯು

Update: 2020-09-27 11:32 GMT

ಕಲಬುರ್ಗಿ, ಸೆ.27: ರಸ್ತೆ ಬದಿ ನಿಂತಿದ್ದ ಲಾರಿಗೆ ವೇಗವಾಗಿ ಹೋಗುತ್ತಿದ್ದ ಕಾರು ಢಿಕ್ಕಿ ಹೊಡೆದ ಪರಿಣಾಮ ಏಳು ಮಂದಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಸಾವಳಗಿ ಕ್ರಾಸ್ ಹತ್ತಿರ, ಆಳಂದ ರಸ್ತೆಯಲ್ಲಿ ನಡೆದಿದೆ ಎಂದು ವರದಿಯಾಗಿದೆ.

ಆಳಂದ ತಾಲೂಕಿನ ನಿವಾಸಿಗಳಾದ ಇರ್ಫಾನಾ ಬೇಗಂ(25), ರುಬಿಯಾ ಬೇಗಂ(50), ಅಬೇದಾಬಿ ಬೇಗಂ(50) ಹಾಗೂ ಮುನೀರ್(28), ಮಹಮ್ಮದ್ ಅಲಿ(38), ಶೌಕತ್ ಅಲಿ(29) ಎಂಬುವರು ಮೃತರು ಪೊಲೀಸರು ಗುರುತಿಸಿದ್ದು, ಇನ್ನೋರ್ವ ಮಹಿಳೆ ಕುರಿತು ಮಾಹಿತಿ ದೊರೆತಿಲ್ಲ ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ.

ಗರ್ಭಿಣಿಯಾಗಿದ್ದ ಇರ್ಫಾನಾ ಬೇಗಂ ಅವರಿಗೆ ರವಿವಾರ ಮುಂಜಾನೆ ಹೆರಿಗೆ ನೋವು ಕಾಣಿಸಿಕೊಂಡಿತು. ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲು ಪತಿ ಮತ್ತು ಕುಟುಂಬದವರು ಕಾರಿನಲ್ಲಿ ತೆರಳುತ್ತಿದ್ದರು. ಕಾರು ಚಾಲಕ ಅವಸರದಲ್ಲಿ ವಾಹನ ಓಡಿಸುವಾಗ ರಸ್ತೆ ಪಕ್ಕ ಎದುರಿಗೆ ನಿಂತಿದ್ದ ಲಾರಿಗೆ ಢಿಕ್ಕಿ ಹೊಡೆದಿದೆ. ಇದರ ರಭಸಕ್ಕೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ ಎನ್ನಲಾಗಿದೆ.

ಇನ್ನು, ಲಾರಿ ಕೂಡ ಉರುಳಿ ರಸ್ತೆ ಪಕ್ಕದ ತಗ್ಗಿನಲ್ಲಿ ಬಿದ್ದಿದೆ. ಅಪಘಾತವಾದ ಕೆಲವೇ ಕ್ಷಣಗಳಲ್ಲಿ ಸಾವಳಗಿ ಗ್ರಾಮಸ್ಥರು ಸ್ಥಳಕ್ಕೆ ಆಗಮಿಸಿದರು. ಈ ವೇಳೆ ಕಾರಿನಲ್ಲಿದ್ದ ಎಲ್ಲರ ದೇಹಗಳೂ ಸಿಕ್ಕಿಕೊಂಡಿದ್ದವು. ಕೆಲ ಸಮಯದ ನಂತರ ಸಂಚಾರ ಠಾಣೆ ಪೊಲೀಸರು ಸ್ಥಳಕ್ಕೆ ಬಂದು ಗ್ರಾಮಸ್ಥರ ಸಹಾಯದಿಂದ ಕಾರು ಬಾಗಿಲುಗಳನ್ನು ಮುರಿದು ಶವಗಳನ್ನು ಹೊರತೆಗೆದರು. ಈ ಸಂಬಂಧ ಕಲಬುರ್ಗಿ ನಗರ ಸಂಚಾರ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News