ಶಾಸಕ ದಿನೇಶ್ ಗುಂಡೂರಾವ್‍ಗೆ ಕೊರೋನ ಸೋಂಕು ದೃಢ

Update: 2020-09-27 11:25 GMT

ಬೆಂಗಳೂರು, ಸೆ.27: ಮೂರು ರಾಜ್ಯಗಳ ಉಸ್ತುವಾರಿಯಾಗಿ ಇತ್ತೀಚೆಗೆ ನೇಮಕಗೊಂಡಿರುವ ಕೆಪಿಸಿಸಿ ಮಾಜಿ ಅಧ್ಯಕ್ಷ ಹಾಗೂ ಶಾಸಕ ದಿನೇಶ್ ಗುಂಡೂರಾವ್‍ಗೆ ಕೊರೋನ ಸೋಂಕು ದೃಢಪಟ್ಟಿದೆ.

ತಮಿಳುನಾಡು, ಗೋವಾ ಹಾಗೂ ಪುದುಚೇರಿ ರಾಜ್ಯಗಳ ಕಾಂಗ್ರೆಸ್ ಉಸ್ತುವಾರಿಯಾಗಿ ಇತ್ತೀಚೆಗಷ್ಟೇ ನೇಮಕಗೊಂಡಿದ್ದ ಅವರು, ಕಳೆದ ಒಂದು ವಾರದಿಂದ ನಿರಂತರ ಪ್ರವಾಸದಲ್ಲಿದ್ದರು. ದೆಹಲಿಗೆ ತೆರಳಿದ್ದ ಅವರು, ಕಳೆದ ಮೂರು ದಿನಗಳಿಂದ ತಮಿಳುನಾಡು ರಾಜ್ಯದ ವಿವಿಧ ಭಾಗಗಳಲ್ಲಿ ಸಂಚರಿಸಿದ್ದರು. ತಮಿಳುನಾಡು ಉಸ್ತುವಾರಿ ಆಗಿರುವ ಹಿನ್ನೆಲೆ ಅಲ್ಲಿನ ಕಾಂಗ್ರೆಸ್ ಕಚೇರಿಗೆ ಭೇಟಿ ನೀಡಿ ಅಧಿಕಾರ ಸ್ವೀಕರಿಸಿದ್ದರು. ಡಿಎಂಕೆ ಪಕ್ಷದ ನಾಯಕರು ಸೇರಿದಂತೆ ಹಲವು ನಾಯಕರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದರು.

ಆದರೆ ಇದೀಗ ಟ್ವೀಟ್ ಮೂಲಕ ಅವರೇ ಕೊರೋನ ಸೋಂಕು ತಗುಲಿರುವ ಕುರಿತು ಸ್ಪಷ್ಟಪಡಿಸಿದ್ದು, ನನಗೆ ಕೋವಿಡ್ ಪಾಸಿಟಿವ್ ಬಂದಿದೆ. ಈ ಹಿನ್ನೆಲೆ ಮುಂದಿನ ಹತ್ತು ದಿನಗಳ ಕಾಲ ಮನೆಯಲ್ಲೇ ಕ್ವಾರಂಟೈನ್ ಆಗುವುದಾಗಿ ತಿಳಿಸಿದ್ದಾರೆ. ಜೊತೆಗೆ ಕಳೆದ ನಾಲ್ಕೈದು ದಿನಗಳಿಂದ ತಮ್ಮ ಸಂಪರ್ಕಕ್ಕೆ ಬಂದವರು ಸ್ವಯಂ ಪರೀಕ್ಷೆಗೆ ಒಳಗಾಗುವಂತೆ ಮನವಿ ಮಾಡಿದ್ದಾರೆ.

ರಾಜ್ಯ ಕಾಂಗ್ರೆಸ್ ಉಸ್ತುವಾರಿಯಾಗಿ ನೇಮಕಗೊಂಡಿರುವ ರಣದೀಪ್ ಸಿಂಗ್ ಸುರ್ಜೇವಾಲ ಈಗಾಗಲೇ ರಾಜ್ಯ ಪ್ರವಾಸದಲ್ಲಿದ್ದು, ನಗರದಲ್ಲಿ ವಿವಿಧ ಸಭೆ ನಡೆಸಲಿದ್ದಾರೆ. ಈ ಎಲ್ಲಾ ಸಭೆಯಲ್ಲಿ ದಿನೇಶ್ ಗುಂಡೂರಾವ್ ಕೂಡ ಭಾಗಿಯಾಗಬೇಕಿತ್ತು. ಆದರೆ, ಇದೀಗ ಕೊರೋನ ತಗುಲಿದ ಹಿನ್ನೆಲೆ ಅವರು ಈ ಸಭೆಯಲ್ಲಿ ಭಾಗಿಯಾಗಲು ಸಾಧ್ಯವಾಗುತ್ತಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News