'ಕರ್ನಾಟಕ ಬಂದ್' ಹಿಂಪಡೆಯುವಂತೆ ರೈತರಿಗೆ ಸಿಎಂ ಯಡಿಯೂರಪ್ಪ ಮನವಿ

Update: 2020-09-27 12:55 GMT

ಬೆಂಗಳೂರು, ಸೆ.27: ರೈತನಿಗೆ ತಾನು ಬೆಳೆದಂತಹ ಬೆಳೆಯನ್ನು ರಾಜ್ಯದ ಅಥವಾ ದೇಶದ ಯಾವುದೆ ಭಾಗದಲ್ಲಿ ಮಾರಾಟ ಮಾಡಿಕೊಳ್ಳುವ ಸ್ವಾತಂತ್ರ್ಯ ಕೊಡಲು ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತಂದಿದ್ದೇವೆ. ಶೇ.100ಕ್ಕೆ 90ರಷ್ಟು ರೈತರು ಇದನ್ನು ಸ್ವಾಗತ ಮಾಡಿದ್ದಾರೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದರು.

ರವಿವಾರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ರೈತ ಬೆಳೆದ ಬೆಳೆ ಆತನ ಹಕ್ಕು. ಅದನ್ನು ಎಪಿಎಂಸಿ ಆವರಣದಲ್ಲಿ ಅಥವಾ ಹೊರಗೆ ಮಾರಾಟ ಮಾಡಲು ಅವಕಾಶ ನೀಡಿದ್ದೇವೆ. ಆ ಮೂಲಕ ಬಹಳ ವರ್ಷಗಳ ರೈತರ ಬೇಡಿಕೆಯನ್ನು ಈಡೇರಿಸಿದ್ದೇವೆ. ನಮ್ಮ ಸರಕಾರದ ನಿಲುವು ಹಾಗೂ ಪ್ರಧಾನಿ ಅಪೇಕ್ಷೆ ರೈತರ ಪರವಾಗಿದೆ ಎಂದರು.

ರೈತರಿಗಾಗಿಯೆ ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತಂದದ್ದು, ಇಂತಹ ಸಂದರ್ಭದಲ್ಲಿ ರೈತ ಮುಖಂಡರು ತಿದ್ದುಪಡಿಯ ಉದ್ದೇಶ ಅರ್ಥ ಮಾಡಿಕೊಂಡು, ವಿನಾಕಾರಣ ಗೊಂದಲ ಉಂಟು ಮಾಡದೆ, ಬಂದ್ ಮಾಡುವುದನ್ನು ಕೈ ಬಿಡಬೇಕು ಎಂದು ಅವರು ಹೇಳಿದರು.

ಕಾಡುಗೊಲ್ಲ ಅಭಿವೃದ್ಧಿ ನಿಗಮ: ರಾಜ್ಯ ಸರಕಾರವು ಕಾಡುಗೊಲ್ಲ ಅಭಿವೃದ್ಧಿ ನಿಗಮವನ್ನು ರಚನೆ ಮಾಡುತ್ತಿದೆ. ಅದಕ್ಕೆ ಹೆಚ್ಚಿನ ಹಣಕಾಸಿನ ನೆರವು ಒದಗಿಸಿ, ಆ ವರ್ಗದ ಜನರಿಗೆ ಹೆಚ್ಚಿನ ಅನುಕೂಲ ಕಲ್ಪಿಸಲಾಗುವುದು ಎಂದು ಮುಖ್ಯಮಂತ್ರಿ ಪ್ರಕಟಿಸಿದರು.

ಬಲವಂತದ ಬಂದ್‍ಗೆ ಅವಕಾಶವಿಲ್ಲ

ಸರಕಾರದ ವತಿಯಿಂದ ಬಂದ್ ಇರುವುದಿಲ್ಲ. ಮಾಡಲು ಅವಕಾಶವೂ ಇಲ್ಲ. ಬಂದ್ ಬಗ್ಗೆ ಸುಪ್ರೀಂಕೋರ್ಟ್, ಹೈಕೋರ್ಟಿನ ಆದೇಶಗಳು ಸ್ಪಷ್ಟವಾಗಿ ಬಂದಿವೆ. ಎಲ್ಲ ಸರಕಾರಿ ಕಚೇರಿಗಳು, ಆಸ್ಪತ್ರೆಗಳು, ಅಂಗಡಿ, ಮುಂಗಟ್ಟುಗಳು, ಟ್ಯಾಕ್ಸಿ, ಬಸ್ ಸೇವೆ ಎಲ್ಲವೂ ಯಥಾರೀತಿಯಲ್ಲಿ ಕಾರ್ಯನಿರ್ವಹಿಸುವಂತೆ ವ್ಯವಸ್ಥೆ ಮಾಡಲಾಗಿದೆ. ಸಾರ್ವಜನಿಕರು ಈ ಬಂದ್ ಸಂದರ್ಭದಲ್ಲಿ ಯಾವುದೆ ಭಯ ಭೀತಿಗೆ ಒಳಗಾಗುವ ಅಗತ್ಯವಿಲ್ಲ. ಯಾರಾದರೂ ಕಿಡಿಗೇಡಿಗಳು, ಈ ಸಂದರ್ಭದಲ್ಲಿ ಅಂಗಡಿ, ಮುಂಗಟ್ಟುಗಳಿಗೆ, ಬಸ್ಸುಗಳಿಗೆ ಕಲ್ಲು ತೂರಾಟ ಮಾಡುವುದಾಗಲಿ, ಬಲವಂತದಿಂದ ಬಂದ್ ಮಾಡಿಸುವ ಪ್ರಯತ್ನ ಮಾಡಿದರೆ ಪೊಲೀಸರು ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತಾರೆ.

-ಆರ್.ಅಶೋಕ್, ಕಂದಾಯ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News