ಬಲವಂತದ ಬಂದ್ ಗೆ ಮುಂದಾದರೆ ಕಠಿಣ ಕ್ರಮ: ಕೊಡಗು ಜಿಲ್ಲಾಡಳಿತ ಎಚ್ಚರಿಕೆ

Update: 2020-09-27 14:23 GMT

ಮಡಿಕೇರಿ, ಸೆ.27: ಕೊಡಗು ಜಿಲ್ಲೆಯಾದ್ಯಂತ ರಾಷ್ಟ್ರೀಯ ಪ್ರಕೃತಿ ವಿಕೋಪ ನಿರ್ವಹಣಾ ಕಾಯ್ದೆ ಜಾರಿಯಲ್ಲಿರುವುದರಿಂದ ಯಾವುದೇ ಬಂದ್, ಪ್ರತಿಭಟನೆ, ರಸ್ತೆ ತಡೆ, ಮುಷ್ಕರದಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕಿದ್ದಲ್ಲಿ ಜಿಲ್ಲಾಡಳಿತದಿಂದ ಪೂರ್ವಾನುಮತಿ ಪಡೆದು ಸಾರ್ವಜನಿಕ ಶಾಂತಿಗೆ ಧಕ್ಕೆಯುಂಟಾಗದಂತೆ ಕಾರ್ಯಕ್ರಮ ನಡೆಸುವುದು ಕಡ್ಡಾಯವಾಗಿದೆ. ಪೂರ್ವಾನುಮತಿ ಪಡೆಯದೆ ನಡೆಸುವ ಕಾರ್ಯಕ್ರಮಗಳ ಆಯೋಜಕರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಡಳಿತ ಎಚ್ಚರಿಸಿದೆ.

ಕೇಂದ್ರ ಹಾಗೂ ರಾಜ್ಯ ಸರಕಾರಗಳು ಜಾರಿಗೆ ತಂದಿರುವ ಭೂ ಸುಧಾರಣಾ ತಿದ್ದುಪಡಿ ಕಾಯ್ದೆ, ಎಪಿಎಂಸಿ ಕಾಯ್ದೆ ಹಾಗೂ ವಿದ್ಯುತ್ ಖಾಸಗೀಕರಣ ತಿದ್ದುಪಡಿ ಮಸೂದೆಗಳನ್ನು ವಿರೋಧಿಸಿ ಸೋಮವಾರ ಕರ್ನಾಟಕ ರಾಜ್ಯ ರೈತ ಸಂಘ, ಕರ್ನಾಟಕ ಪ್ರಾಂತ್ಯ ರೈತ ಸಂಘ, ರಾಜ್ಯ ಕಬ್ಬು ಬೆಳೆಗಾರರ ಸಂಘ, ಅಖಿಲ ಭಾರತ ಕಿಸಾನ್ ಸಭಾ, ರೈತ ಕೂಲಿಕಾರರ ಸಂಘ ಹಾಗೂ ಇನ್ನಿತರ ಸಂಘಟನೆಗಳು ನಡೆಸಲುದ್ದೇಶಿಸಿರುವ ಕರ್ನಾಟಕ ಬಂದ್ ಹಿನ್ನೆಲೆಯಲ್ಲಿ ಕೊಡಗಿನ ಗಡಿ ಭಾಗಗಳಲ್ಲಿ ರಸ್ತೆತಡೆ, ಪ್ರತಿಭಟನೆ, ಮುಷ್ಕರಗಳು ನಡೆಯಲಿರುವುದಾಗಿ ದೊರೆತ ಖಚಿತ ಮಾಹಿತಿ ಅನ್ವಯ ಜಿಲ್ಲಾಡಳಿತ ಈ ಎಚ್ಚರಿಕೆ ನೀಡಿದೆ.

ಜಿಲ್ಲಾ ದಂಡಾಧಿಕಾರಿಗಳೂ ಆಗಿರುವ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾ ಮಿಶ್ರಾ ಅವರ ಸಮ್ಮುಖದಲ್ಲಿ ರವಿವಾರ ನಡೆದ ಜಂಟಿ ಸಭೆಯಲ್ಲಿ ಈ ಸಂಬಂಧ ಹಲವು ಮಹತ್ವದ ತೀರ್ಮಾನಗಳನ್ನು ಕೈಗೊಳ್ಳಲಾಗಿದೆ.

ಕೊಡಗು ಜಿಲ್ಲೆಯಲ್ಲಿ ಕೋವಿಡ್ ಸೋಂಕು ದಿನೇ ದಿನೇ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಯಾವುದೇ ಸಭೆ, ಸಮಾರಂಭ, ಪ್ರತಿಭಟನೆ, ಬಂದ್‍ನಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸುವವರು ಕೋವಿಡ್ ಮಾರ್ಗಸೂಚಿಯಂತೆ ಮುಖಗವಸನ್ನು ಕಡ್ಡಾಯವಾಗಿ ಧರಿಸಿ, ಸುರಕ್ಷಿತ ಅಂತರವನ್ನು ಕಾಯ್ದುಕೊಳ್ಳುವುದು ಕಡ್ಡಾಯವಾಗಿದೆ. ಈ ಮಾರ್ಗಸೂಚಿ ಉಲ್ಲಂಘಿಸುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಸಭೆಯಲ್ಲಿ ನಿರ್ಧರಿಸಲಾಯಿತು.

ಸರ್ವೋಚ್ಛ ನ್ಯಾಯಾಲಯವು ರಿಟ್ ಅರ್ಜಿ ಸಂಖ್ಯೆ 77/2017ರಲ್ಲಿ ನೀಡಿರುವ ತೀರ್ಪಿನ ಅನ್ವಯ ಯಾವುದೇ ಬಂದ್, ಪ್ರತಿಭಟನೆ, ರಸ್ತೆತಡೆ, ಮುಷ್ಕರ ಇತ್ಯಾದಿ ಸಂದರ್ಭ ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿಯಾದಲ್ಲಿ ಅಂತಹ ಕಾರ್ಯಕ್ರಮಗಳಿಗೆ ಕರೆ ಕೊಟ್ಟಿರುವ ಸಂಘಟನಾಕಾರರಿಂದಲೇ ಆ ಆಸ್ತಿಯ ನಷ್ಟ ಭರಿಸಬೇಕಾಗಿದ್ದು, ಸೋಮವಾರ ನಡೆಯುವ ಬಂದ್, ಪ್ರತಿಭಟನೆ, ರಸ್ತೆತಡೆ, ಮುಷ್ಕರದ ಸಂದರ್ಭದಲ್ಲಿ ಯಾವುದೇ ರೀತಿಯ ಅಂಗಡಿ ಮುಂಗಟ್ಟುಗಳು, ಸರಕಾರಿ ಕಚೇರಿಗಳನ್ನು ಬಲವಂತವಾಗಿ ಮುಚ್ಚುವುದು ಕಾನೂನು ಬಾಹಿರವಾಗಿದೆ. ಅಂತಹ ಕೃತ್ಯಗಳಲ್ಲಿ ತೊಡಗುವವರ ವಿರುದ್ಧ ಕಾನೂನು ಕ್ರಮ ಜರುಗಿಸಲು, ಸಾರ್ವಜನಿಕ ಆಸ್ತಿಪಾಸ್ತಿ, ಅಂಗಡಿ ಮುಂಗಟ್ಟುಗಳಿಗೆ ಹಾನಿಯುಂಟಾದರೆ ಪ್ರತಿಭಟನೆ ಆಯೋಜಿಸಿರುವ ಆಯೋಜಕರನ್ನೇ ನೇರ ಹೊಣೆಗಾರರನ್ನಾಗಿ ಮಾಡಿ ಮೊಕದ್ದಮೆ ದಾಖಲಿಸಲು, ಸಾರ್ವಜನಿಕ ಮತ್ತು ಸರಕಾರಿ ಆಸ್ತಿಪಾಸ್ತಿಗೆ ಆದ ನಷ್ಟವನ್ನು ಆಯೋಜಕರಿಂದಲೇ ಭರಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.

ರಸ್ತೆ ತಡೆ, ಮೆರವಣಿಗೆ ಇತ್ಯಾದಿಗಳನ್ನು ಮಾಡಿದಲ್ಲಿ, ಸಾರ್ವಜನಿಕರಿಗೆ ಹಾಗೂ ವಾಣಿಜ್ಯ ವಹಿವಾಟಿಗೆ ತೊಂದರೆಯಾಗಿ ಶಾಂತಿ ಭಂಗ ಉಂಟಾಗುವ ಸಂಭವವಿರುವುದರಿಂದ ರಸ್ತೆ ತಡೆ ಮತ್ತು ಮೆರವಣಿಗೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದ್ದು, ಇದನ್ನು ನಡೆಸುವವರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ನಿರ್ಧರಿಸಲಾಯಿತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News