ಸೋಮವಾರ ಕರ್ನಾಟಕ ಬಂದ್: ಏನಿರುತ್ತೆ ? ಏನಿರಲ್ಲ ? ಇಲ್ಲಿದೆ ವಿವರ

Update: 2020-09-27 14:58 GMT

ಬೆಂಗಳೂರು, ಸೆ.27: ಕೇಂದ್ರ ಮತ್ತು ರಾಜ್ಯ ಸರಕಾರಗಳು ಜಾರಿಗೆ ಹೊರಟಿರುವ ಭೂ ಸುಧಾರಣೆ, ಎಪಿಎಂಸಿ ತಿದ್ದುಪಡಿ ಕಾಯ್ದೆ ಸೇರಿ ಇನ್ನಿತರೆ ಕಾಯ್ದೆಗಳ ಸುಗ್ರೀವಾಜ್ಞೆಗಳ ವಿರುದ್ಧ ರೈತ ದಲಿತ ಕಾರ್ಮಿಕ ಐಕ್ಯ ಹೋರಾಟ ಸಮಿತಿ ನಾಳೆ(ಸೆ.28) ಕರ್ನಾಟಕ ಬಂದ್‍ಗೆ ಕರೆ ನೀಡಿದ್ದು, ಹಲವು ಸೇವೆಗಳಲ್ಲಿ ಏರುಪೇರಾಗುವ ಸಾಧ್ಯತೆ ದಟ್ಟವಾಗಿದೆ.

ಹಾಲು, ಹಣ್ಣು, ತರಕಾರಿ, ಆರೋಗ್ಯ ಸೇವೆ, ಔಷಧಿ ಅಂಗಡಿಗಳು, ಪೆಟ್ರೋಲ್ ಬಂಕ್‍ಗಳು, ಮಾರುಕಟ್ಟೆಗಳು ತೆರೆದಿರುತ್ತವೆ. ಗ್ರಾಹಕರ ಹಿತದೃಷ್ಟಿಯಿಂದ ಹೊಟೇಲ್‍ಗಳನ್ನು ಮುಚ್ಚುವುದಿಲ್ಲ ಎಂದು ಹೊಟೇಲ್ ಮಾಲಕರ ಸಂಘ ಹೇಳಿದೆ. ಆದರೂ ಪರಿಸ್ಥಿತಿ ಅನುಗುಣವಾಗಿ ಈ ಸೇವೆಗಳಲ್ಲಿ ಬದಲಾವಣೆ ಸಾಧ್ಯತೆ ಇದೆ.

ಇನ್ನು, ಸಾರಿಗೆ ನಿಗಮಗಳ ಸಿಬ್ಬಂದಿ ಬಂದ್‍ಗೆ ನೈತಿಕ ಬೆಂಬಲ ವ್ಯಕ್ತಪಡಿಸಿದ್ದಾರೆ. ಆದರೆ, ಕೆಲಸಕ್ಕೆ ಗೈರಾಗಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಸಂಘದ ಪ್ರಮುಖರು ತಿಳಿಸಿದ್ದಾರೆ. ಮತ್ತೊಂದೆಡೆ ನಗರ ಮತ್ತು ಸಾರಿಗೆ ಸಂಸ್ಥೆ ಬಸ್‍ಗಳು ಎಂದಿನಂತೆ ಸಂಚರಿಸಲಿವೆ ಎಂದು ಸರಕಾರದ ಮೂಲಗಳು ಹೇಳಿವೆ.

ಖಾಸಗಿ ವಾಹನಗಳ ಚಾಲಕರ ಸಂಘ ಸೇರಿದಂತೆ ಹಲವು ಸಂಘಟನೆಗಳು ಬಂದ್‍ಗೆ ಬೆಂಬಲ ವ್ಯಕ್ತಪಡಿಸಿರುವುದರಿಂದ ಟ್ಯಾಕ್ಸಿ ಮತ್ತು ಆಟೊ ಸಂಚಾರದಲ್ಲಿ ವ್ಯತ್ಯಯವಾಗುವ ಸಂಭವವಿದೆ.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಜತೆ ಸೆ.25ರಂದು ನಡೆದ ಮಾತುಕತೆ ವಿಫಲವಾಗಿರುವ ಹಿನ್ನೆಲೆ ರಾಜ್ಯದ 110ಕ್ಕೂ ಅಧಿಕ ಜನಪರ ಹೋರಾಟದ ಸಂಘಟನೆಗಳು ಈ ಕರ್ನಾಟಕ ಬಂದ್ ಹೋರಾಟದಲ್ಲಿ ದುಮುಕಿವೆ. ಜತೆಗೆ, ಕಾಂಗ್ರೆಸ್, ಜೆಡಿಎಸ್ ಸೇರಿದಂತೆ ಇನ್ನಿತರೆ ರಾಜಕೀಯ ಪಕ್ಷಗಳು ಬೆಂಬಲ ಸೂಚಿಸಿವೆ.

ಸೋಮವಾರ ಬೆಳಗ್ಗೆ 6ಗಂಟೆಯಿಂದಲೇ ಶಾಂತಿಯುತ ಸ್ವಯಂಪ್ರೇರಣೆಯ ಬಂದ್ ನಡೆಯುತ್ತದೆ. ಪ್ರಮುಖವಾಗಿ ಬೆಂಗಳೂರಿನ ಪುರಭವನ ಬಳಿ ಬೆಳಗ್ಗೆ 10 ಗಂಟೆಗೆ ಜಮಾಯಿಸಿ, ಮೈಸೂರು ಬ್ಯಾಂಕ್ ವೃತ್ತದವರೆಗೂ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಲಿದ್ದೇವೆ ಎಂದು ಐಕ್ಯ ಸಮಿತಿಯ ಪ್ರಮುಖರಾದ ಕುರುಬೂರು ಶಾಂತಕುಮಾರ್ ‘ವಾರ್ತಾಭಾರತಿ’ಗೆ ತಿಳಿಸಿದರು.

ಬಂದ್ ಹಿನ್ನೆಲೆಯಲ್ಲಿ ಅಹಿತಕರ ಘಟನೆಗಳು ನಡೆಯದಂತೆ ವ್ಯಾಪಕ ಬಂದೋಬಸ್ತ್ ಮಾಡಲಾಗಿದೆ ಎಂದು ಪೊಲೀಸ್ ಮೂಲಗಳು ಹೇಳಿವೆ.

ಬೈಕ್ ರ‍್ಯಾಲಿ: ರಾಜ್ಯ ರೈತ ಸಂಘದ ಅಧ್ಯಕ್ಷ ಗಿರೀಶ್ ಗೌಡ ಅವರ ನೇತೃತ್ವದಲ್ಲಿ ಬೆಳಗ್ಗೆ 9ಗಂಟೆಗೆ ಇಲ್ಲಿನ ಸುಮ್ನಳ್ಳಿ ವೃತ್ತ, ಮಾಗಡಿ ರಸ್ತೆ ಮಾರ್ಗವಾಗಿ ಪುರಭವನದವರೆಗೂ ಬೃಹತ್ ಬೈಕ್ ರ‍್ಯಾಲಿ ಹಮ್ಮಿಕೊಳ್ಳಲಾಗಿದೆ.

ಪರಿಸ್ಥಿತಿ ಅವಲೋಕಿಸಿ ತೀರ್ಮಾನ

ಸಾರಿಗೆ ನಿಗಮಗಳ ಸಿಬ್ಬಂದಿ ನೈತಿಕ ಬೆಂಬಲ ನೀಡಿದ್ದರೂ ಬಂದ್‍ನಲ್ಲಿ ಭಾಗವಹಿಸುವುದಿಲ್ಲ. ಗಲಭೆಗಳು ನಡೆದರೆ ಪರಿಸ್ಥಿತಿ ನೋಡಿಕೊಂಡು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಸಾರಿಗೆ ಇಲಾಖೆ ಮೂಲಗಳು ಹೇಳಿವೆ.

ರಾಜ್ಯ ಬಂದ್: ವಿವಿಧ ಪರೀಕ್ಷೆ ಮುಂದೂಡಿಕೆ

ಕರ್ನಾಟಕ ಬಂದ್ ಹಿನ್ನೆಲೆ ಎಸೆಸೆಲ್ಸಿ ಪೂರಕ ಪರೀಕ್ಷೆ ಸೇರಿದಂತೆ ಸೆ.28ರಂದು ನಡೆಯಬೇಕಿದ್ದ ಎಲ್ಲ ಪರೀಕ್ಷೆಗಳನ್ನು ಮುಂದೂಡಲಾಗಿದೆ. ಎಸೆಸೆಲ್ಸಿಯ ವಿಜ್ಞಾನ, ರಾಜ್ಯ ಶಾಸ್ತ್ರ, ಕರ್ನಾಟಕ ಸಂಗೀತ, ಹಿಂದೂಸ್ತಾನಿ ಸಂಗೀತ ವಿಷಯಗಳ ಪರೀಕ್ಷೆ ಸೋಮವಾರ ನಡೆಸಲು ದಿನಾಂಕ ನಿಗದಿಯಾಗಿತ್ತು.

ಅದೇ ರೀತಿ, ಬೆಂಗಳೂರು ವಿಶ್ವವಿದ್ಯಾಲಯ, ವಿಜಯಪುರದ ಮಹಿಳಾ ವಿಶ್ವವಿದ್ಯಾಲಯ ಸೇರಿದಂತೆ ಹಲವು ವಿಶ್ವವಿದ್ಯಾಲಯಗಳಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿ ಪರೀಕ್ಷೆಗಳು ನಡೆಯಬೇಕಿತ್ತು. ಪರೀಕ್ಷೆಗೆ ಹಾಜರಾಗಲು ವಿದ್ಯಾರ್ಥಿಗಳಿಗೆ ತೊಂದರೆ ಉಂಟಾಗಬಹುದೆಂಬ ಕಾರಣಕ್ಕೆ ಪರೀಕ್ಷೆಯನ್ನು ಮುಂದೂಡಲಾಗಿದೆ ಎಂದು ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಹಾಗೂ ವಿಶ್ವವಿದ್ಯಾಲಯಗಳು ತಿಳಿಸಿವೆ.

ಏನೇನಿರುತ್ತದೆ?

* ಹಾಲು, ತರಕಾರಿ ಹಾಗೂ ದಿನಸಿ ಅಂಗಡಿಗಳು

* ಆಸ್ಪತ್ರೆಗಳು, ಔಷಧ ಅಂಗಡಿಗಳು, ದಿನಪತ್ರಿಕೆ

* ಹೋಟೆಲ್‍ಗಳು, ಮೆಟ್ರೊ ರೈಲು, ವಿಮಾನ ಸೇವೆ

ಏನಿರುವುದಿಲ್ಲ?

* ಆಟೊ–ಟ್ಯಾಕ್ಸಿ ಸೇವೆ ಇರುವುದಿಲ್ಲ

* ಬಿಎಂಟಿಸಿ ಕೆಎಸ್ಸಾರ್ಟಿಸಿ ಬಸ್ ಸೇವೆ ಇರಲಿದೆ ಎಂದು ಸರಕಾರ ಹೇಳಿದೆ. ಆದರೆ, ಈ ನಿಗಮಗಳ ನೌಕರರ ಸಂಘ ಬಂದ್ ಬೆಂಬಲ ವ್ಯಕ್ತಪಡಿಸಿರುವುದರಿಂದ ವ್ಯತ್ಯಯವಾಗುವ ಸಾಧ್ಯತೆ ಇದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News