4ನೆ ದಿನಕ್ಕೆ ಕಾಲಿಟ್ಟ ವೈದ್ಯಕೀಯ ಗುತ್ತಿಗೆ, ಹೊರಗುತ್ತಿಗೆ ನೌಕರರ ಮುಷ್ಕರ

Update: 2020-09-27 16:34 GMT

ಬೆಂಗಳೂರು/ಯಾದಗಿರಿ, ಸೆ.27: ವೈದ್ಯಕೀಯ ಇಲಾಖೆ ಹಾಗೂ ರಾಷ್ಟ್ರೀಯ ಆರೋಗ್ಯ ಅಭಿಯಾನದ ಗುತ್ತಿಗೆ, ಹೊರಗುತ್ತಿಗೆ ನೌಕರರ ಸಂಘದ ನೌಕರರ  ಅನಿರ್ದಿಷ್ಟಾವಧಿ ಹೋರಾಟ 4ನೆ ದಿನಕ್ಕೆ ಕಾಲಿರಿಸಿದೆ. ಇದರಿಂದ ಸಾರ್ವಜನಿಕ ಸರಕಾರಿ ಆಸ್ಪತ್ರೆಗಳಲ್ಲಿ ಕೋವಿಡ್-19 ಸೋಕಿಂತ ರೋಗಿಗಳು ಸೇರಿದಂತೆ ಇತರೆ ರೋಗಿಗಳಿಗೆ ಸರಿಯಾದ ರೀತಿ ಚಿಕಿತ್ಸೆ ಇಲ್ಲದೆ ನರಳಾಡುತ್ತಿರುವ ಪರಿಸ್ಥಿತಿ ನಿರ್ಮಾಣವಾಗಿದೆ.

ಬೆಂಗಳೂರು ಸೇರಿದಂತೆ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ 30 ಸಾವಿರಕ್ಕೂ ಹೆಚ್ಚು ಹೊರ ಗುತ್ತಿಗೆ ವೈದ್ಯರು ಮತ್ತು ನೌಕರರು ಕೆಲಸ ಸ್ಥಗಿತ ಹೋರಾಟ ಮುಷ್ಕರದಲ್ಲಿ ಭಾಗಿಯಾಗಿದ್ದು ರಾಜ್ಯದ ಕೆಲ ಆಸ್ಪತ್ರೆಗಳಲ್ಲಿ ಪರಿಸ್ಥಿತಿ ಬಿಗಡಾಯಿಸಿದೆ. ಆಸ್ಪತ್ರೆಯ ಕೋವಿಡ್ ಕೇಂದ್ರದಲ್ಲಿ ಕೊರೋನ ಸೋಂಕಿತರಿಗೆ ಸರಿಯಾದ ರೀತಿ ಚಿಕಿತ್ಸೆ ಇಲ್ಲದೆ ಪರದಾಡುವ ಸನ್ನಿವೇಶ ನಿರ್ಮಾಣವಾಗಿದೆ ಎಂದು ವೈದ್ಯಕೀಯ ಗುತ್ತಿಗೆ, ಹೊರಗುತ್ತಿಗೆ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀಕಾಂತ್ ಸ್ವಾಮಿ ತಿಳಿಸಿದ್ದಾರೆ.

ಆರ್ಯುವೇದ ಹೊರ ಗುತ್ತಿಗೆ ವೈದ್ಯರು ಮುಷ್ಕರದಲ್ಲಿ ಭಾಗಿಯಾಗಿದ್ದಾರೆ. ಜೊತೆಗೆ ಹೊರಗುತ್ತಿಗೆ ವೈದ್ಯರು ಮತ್ತು ನೌಕರರ ಮುಷ್ಕರದಿಂದ ಮುನ್ಸಿಪಾಲಿಟಿ ಸೇರಿದಂತೆ ಇತರೆ ಇಲಾಖೆ ನೌಕರರು ಕೋವಿಡ್ ರೋಗಿಗಳ ಚಿಕಿತ್ಸೆಯಲ್ಲಿ ಬಳಸಿಕೊಳ್ಳುತ್ತಿರುವುದರಿಂದ ಪರಿಣಾಮಕಾರಿಯಾಗಿ ಕೊರೋನ ಸೋಂಕಿತರಿಗೆ ಚಿಕಿತ್ಸೆ ದೊರೆಯುತ್ತಿಲ್ಲ ಎಂದು ಅವರು ತಿಳಿಸಿದ್ದಾರೆ.

108 ಆಂಬ್ಯುಲೆನ್ಸ್ ಸೇವೆ ಹೊರತು ಪಡಿಸಿ ಇತರೆ ಆಂಬ್ಯುಲೆನ್ಸ್ ಸೇವೆಯ ನೌಕರರು ಕೂಡ ಕೆಲಸ ಸ್ಥಗಿತ ಮಾಡಿ ಮುಷ್ಕರದಲ್ಲಿ ಭಾಗಿಯಾಗಿದ್ದಾರೆ. ಕೊರೋನ ತುರ್ತು ಸೇವೆಯಲ್ಲಿ ವ್ಯತ್ಯಯ ಉಂಟಾಗಿ ರೋಗಿಗಳು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಮುಷ್ಕರದಿಂದಾಗಿ ಸರಕಾರಿ ಆಸ್ಪತ್ರೆಗಳ ಒಪಿಡಿ ಮತ್ತು ಐಪಿಡಿ ವಿಭಾಗದಲ್ಲಿ ಸಾವಿರಾರು ಮಂದಿ ಹೊರ ಗುತ್ತಿಗೆ ನೌಕರರ ಕೊರತೆಯಿಂದ ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿಗಳೇ ಈ ಕಾರ್ಯವನ್ನು ನಿರ್ವಹಿಸುತ್ತಿದ್ದಾರೆ ಎಂದು ಅವರು ತಿಳಿಸಿದ್ದಾರೆ.

2016ರಲ್ಲಿ  ಸರ್ವೋಚ್ಯ ನ್ಯಾಯಾಲಯ ಪಂಜಾಬ್ ರಾಜ್ಯ ಮತ್ತು ಜಗಜೀತ್ ಸಿಂಗ್ ಇತರರ ಪ್ರಕರಣದಲ್ಲಿ ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕೆಂದು ನಿರ್ದೇಶಿಸಿದೆ. ಆದರೆ ಸರಕಾರವು ಈ ಆದೇಶವನ್ನು ಅನುಸರಿಸದೆ ಎಲ್ಲ ಗುತ್ತಿಗೆ, ಹೊರಗುತ್ತಿಗೆ ನೌಕರರಿಗೆ ಯಾವುದೇ ಸೌಲಭ್ಯ ನೀಡದೆ ಅನ್ಯಾಯ ಮಾಡಿದೆ. ಈ ಕಾರಣಕ್ಕೆ ಎಲ್ಲ ನೌಕರರು ಹೋರಾಟಕ್ಕಿಳಿದಿದ್ದು, ಸರಕಾರದ ಕುರುಡು ನೀತಿಯೆ ಇದಕ್ಕೆ ನೇರ ಹೊಣೆ ಎಂದು ಅವರು ಪ್ರಕಟಣೆಯಲ್ಲಿ ದೂರಿದ್ದಾರೆ.

ಎಲ್ಲ ಹಂತಗಳಲ್ಲಿ  ಹೋರಾಟ ನಡೆಸಿದರೂ ಸರಕಾರದಿಂದ ಯಾವುದೇ ರೀತಿಯ ಪ್ರತಿಕ್ರಿಯೆ ಇದುವರೆಗೂ ದೊರೆತಿಲ್ಲ. ಕೊರೋನ ವೈರಸ್ ಹಾವಳಿ ಸಂದರ್ಭದಲ್ಲಿಯೂ ಜೀವ ಪಣಕ್ಕಿಟ್ಟು ಕೆಲಸ ಮಾಡಿದರೂ ಬಡ ನೌಕರರ ಬೇಡಿಕೆಗಳಿಗೆ ಸ್ಪಂದಿಸದೆ ಇರುವುದು ಖಂಡನೀಯ. ಇದೇ ಧೋರಣೆ ಮುಂದುವರಿದರೆ ಸರಕಾರದ ವಿರುದ್ಧ ರಾಜ್ಯದ ಎಲ್ಲೆಡೆ ಬೀದಿಗಿಳಿದು ಹೋರಾಟ ನಡೆಸಲಾಗುವುದು.

-ವಿಶ್ವಾರಾಧ್ಯ ಎಚ್.ವೈ., ವೈದ್ಯಕೀಯ ಗುತ್ತಿಗೆ, ಹೊರಗುತ್ತಿಗೆ ನೌಕರರ ಸಂಘದ ರಾಜ್ಯಾಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News