ಸೋಮವಾರ ರಾಜ್ಯ ಬಂದ್ ನಡೆಸುವುದು ನಿಶ್ಚಿತ: ಕೋಡಿಹಳ್ಳಿ ಚಂದ್ರಶೇಖರ್

Update: 2020-09-27 17:09 GMT

ಬೆಂಗಳೂರು, ಸೆ.27: ಕೇಂದ್ರ ಸರಕಾರ ಸುಗ್ರೀವಾಜ್ಞೆಗಳ ಮೂಲಕ ಜಾರಿಗೆ ತಂದಿರುವ ಜನವಿರೋಧಿ ಕಾಯ್ದೆಗಳಾದ ಭೂಸುಧಾರಣ ಕಾಯ್ದೆ ತಿದ್ದುಪಡಿ, ಎಪಿಎಂಸಿ ಕಾಯ್ದೆ, ಅಗತ್ಯ ವಸ್ತುಗಳ ಕಾಯ್ದೆ, ಕಾರ್ಮಿಕ ಕಾಯ್ದೆ, ಬೆಂಬಲ ಬೆಲೆಗೆ ಸಂಬಂಧಿಸಿದ ನೀತಿ, ಗುತ್ತಿಗೆ ಕಾಯ್ದೆಗಳು, ಕಾರ್ಪೋರೇಟ್ ಕಂಪನಿ ಕಾಯ್ದೆ ಮತ್ತು ವಿದ್ಯುತ್‍ಚ್ಛಕ್ತಿ ಕಾಯ್ದೆಗಳನ್ನು ಜಾರಿಗೊಳಿಸಿದೆ ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ತಿಳಿಸಿದ್ದಾರೆ.

ರೈತರ, ಕಾರ್ಮಿಕರ, ದಲಿತ ವಿರೋಧಿ ಮಸೂದೆಗಳನ್ನು ಜಾರಿಗೊಳಿಸಲು ಮುಂದಾಗಿರುವ ರಾಜ್ಯ ಸರಕಾರದ ವಿರುದ್ದ ಸೆ.28ಕ್ಕೆ ಕರೆ ನೀಡಲಾಗಿರುವ ರಾಜ್ಯ ಬಂದ್ ಗೆ 100 ಕ್ಕೂ ಹೆಚ್ಚು ಸಂಘಟನೆಗಳು ಬೆಂಬಲ ನೀಡಿವೆ. ನಾಳೆ ಬೆಳಗ್ಗೆ 10 ಗಂಟೆಗೆ ನಗರದ ಟೌನ್ ಹಾಲ್ ಬಳಿ ರೈತಪರ ಸಂಘಟನೆಗಳ ಕಾರ್ಯಕರ್ತರು ಸಮಾವೇಶಗೊಳ್ಳಲಿದ್ದು, ಅಲ್ಲಿಂದ ಕೆ.ಜಿ.ರಸ್ತೆ ಮೆಜೆಸ್ಟಿಕ್ ಮಾರ್ಗವಾಗಿ ಫ್ರೀಡಂ ಪಾರ್ಕ್‍ವರೆಗೂ ಬೃಹತ್ ಮೆರವಣಿಗೆ ನಡೆಯಲಿದೆ ಎಂದು ಅವರು ವಿವರ ನೀಡಿದ್ದಾರೆ.

ರಾಜ್ಯ ಸರಕಾರ ಎಪಿಎಂಸಿ ಕಾಯ್ದೆ, ಭೂಸುಧಾರಣ ಕಾಯ್ದೆಯನ್ನು ಪ್ರತಿ ಪಕ್ಷಗಳ ವಿರೋಧ ಹಾಗೂ ರೈತರ ಪರ ಸಂಘಟನೆಗಳ ಬಲವಾದ ವಿರೋಧ ನಡುವೆ ವಿಧಾನಸಭೆ ಹಾಗೂ ವಿಧಾನ ಪರಿಷತ್ತಿನಲ್ಲಿ ಅಂಗೀಕಾರ ಪಡೆದುಕೊಂಡಿದೆ. ಇಂತಹ ಜನ ಹಾಗೂ ರೈತರ ವಿರೋಧಿ ಕಾಯ್ದೆಗಳನ್ನು ಪ್ರಬಲವಾಗಿ ವಿರೋಧಿಸಲು ಕರ್ನಾಟಕ ಬಂದ್‍ಗೆ ಕರೆ ನೀಡಲಾಗಿದೆ ಎಂದು ಕೋಡಿಹಳ್ಳಿ ಚಂದ್ರಶೇಖರ್ ತಿಳಿಸಿದ್ದಾರೆ.

ಸರಕಾರ ಮಸೂದೆಗಳನ್ನು ಹಿಂಪಡೆಯಬಹುದು ಎಂದು ಅಧಿವೇಶನ ಮುಗಿಯುವ ಕೊನೆ ಕ್ಷಣದವರೆಗೂ ನಿರೀಕ್ಷೆ ಇಟ್ಟುಕೊಂಡಿದ್ದೆವು. ಆ ನಿರೀಕ್ಷೆ ಹುಸಿಯಾಗಿದೆ. ಹಾಗಾಗಿ ಸೋಮವಾರ ರಾಜ್ಯ ಬಂದ್ ನಡೆಸುವುದು ನಿಶ್ಚಿತವಾಗಿದೆ. ಈ ಬಂದ್ ಮೂಲಕ ರಾಜ್ಯದ ಜನತೆ ನಮ್ಮ ಸಂಘಟನೆ ಮೂಲಕ ಸರಕಾರಕ್ಕೆ ಸ್ವಷ್ಟ ಸಂದೇಶವನ್ನು ರವಾನಿಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

ರೈತರು ಮತ್ತು ಸಾರ್ವಜನಿಕರ ಬದುಕಿಗೆ ಕೊಡಲಿ ಪೆಟ್ಟಾಗಿರುವ ಎಪಿಎಂಸಿ ಕಾಯ್ದೆ, ಭೂಸುಧಾರಣ ಕಾಯ್ದೆ ಜಾರಿ ತಂದ ಸರಕಾರದ ನೀತಿ ವಿರುದ್ಧ ಬಂದ್‍ಗೆ ಕರೆ ನೀಡುವ ಮೂಲಕ ರಾಜ್ಯದ ಜನತೆಯೆ ಸರಕಾರದ ವಿರುದ್ಧ ಅವಿಶ್ವಾಸ ನಿರ್ಣಯವನ್ನು ತರಲಿದ್ದಾರೆ. ಸರಕಾರ ಇದನ್ನು ಗಂಭೀರವಾಗಿ ಪರಿಗಣಿಸಿ ಸದನದಲ್ಲಿ ಏಕ ಮುಖವಾಗಿ ಅಂಗೀಕಾರ ಪಡೆದುಕೊಂಡಿರುವ ರೈತರ ವಿರೋಧಿ ಕಾಯ್ದೆಗಳನ್ನು ವಾಪಸ್ ಪಡೆಯಬೇಕೆಂದು ಅವರು ಆಗ್ರಹಿಸಿದ್ದಾರೆ.

ಬಂದ್‍ಗೆ ಎಲ್ಲ ಕನ್ನಡ ಪರ ಸಂಘಟನೆಗಳು, ವಾಹನ ಮತ್ತು ಚಾಲಕರ ಸಂಘಗಳು, ರಾಜ್ಯ ಬೀದಿ ಬದಿ ವ್ಯಾಪಾರಿಗಳ ಸಂಘ, ಮಹಿಳಾ ಸಂಘಟನೆಗಳು, ವಕೀಲರ ಸಂಘಗಳು, ತರಕಾರಿ ಮತ್ತು ಹಣ್ಣು ಸಗಟು ವರ್ತಕರ ಸಂಘ, ಕರ್ನಾಟಕ ಅಣ್ಣಾ ಡಿಎಂಕೆ, ಎಐಟಿಯುಸಿ  ಬೆಂಬಲ ಘೋಷಿಸಿವೆ ಎಂದು ಕೋಡಿಹಳ್ಳಿ ಚಂದ್ರಶೇಖರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News