ಆತ್ಮನಿರ್ಭರತೆಯಲ್ಲ, ಆತ್ಮವಂಚನೆ...

Update: 2020-09-28 06:50 GMT

ದೇಶದಲ್ಲಿ ಎರಡು ಬಗೆಯ ‘ಮನ್ ಕಿ ಬಾತ್’ ವ್ಯಕ್ತವಾಗುತ್ತಿವೆ. ಒಂದು ಬೀದಿಗಿಳಿದಿರುವ ಕೃಷಿಕರು, ವಲಸೆ ಕಾರ್ಮಿಕರ ವೇದನೆಯ ಮನ್‌ಕಿ ಬಾತ್. ಇನ್ನೊಂದು, ಪ್ರಾಥಮಿಕ ಶಾಲೆಯ ವಿದ್ಯಾರ್ಥಿಯೊಬ್ಬನ ಓತಪ್ರೋತ ಭಾಷಣದಂತಿರುವ ದೇಶದ ಪ್ರಧಾನಿಯ ಮನ್ ಕಿ ಬಾತ್. ದೇಶಾದ್ಯಂತ ರೈತರು ಬೀದಿಗಿಳಿದು ಪ್ರತಿಭಟಿಸುತ್ತಿದ್ದಾರೆ. ಪಂಜಾಬ್‌ನಲ್ಲಿ ನಿರಂತರ ರೈಲ್ ರೋಕೋದಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಮುಂಬೈ ತಲ್ಲಣಿಸಿದೆ. ಕರ್ನಾಟಕದಲ್ಲಿ ಸೆ. 28ರಂದು ರೈತರು ರಾಜ್ಯ ಬಂದ್‌ಗೆ ಕರೆ ನೀಡಿದ್ದಾರೆ. ಆದರೆ ಜನರ ಮನದ ಮಾತು, ಆಕ್ರಂದನಗಳು ಸರಕಾರವನ್ನು ತಲುಪುತ್ತಿಲ್ಲ. ಪ್ರತಿಭಟನೆಗಳ ನಡುವೆಯೇ, ರೈತ ವಿರೋಧಿ, ಕಾರ್ಮಿಕ ವಿರೋಧಿ ವಿಧೇಯಕಗಳು ಅನುಮೋದನೆ ಪಡೆಯುತ್ತಿವೆ. ಇದೇ ಸಂದರ್ಭದಲ್ಲಿ, ರಾಜ್ಯದಲ್ಲಿ ನಾಟಕೀಯ ರೀತಿಯಲ್ಲಿ, ಸರಕಾರದ ವಿರುದ್ಧ ಅವಿಶ್ವಾಸ ನಿರ್ಣಯಕ್ಕೆ ವಿರೋಧ ಪಕ್ಷಗಳು ಮುಖ್ಯವಾಗಿ ಕಾಂಗ್ರೆಸ್ ಪಕ್ಷ ಮುಂದಾಯಿತು. ಈ ಮೂಲಕ ಸರಕಾರವನ್ನು ಉರುಳಿಸುವುದಕ್ಕೆ ಆಗುವುದಿಲ್ಲ ಎನ್ನುವುದು ಸ್ಪಷ್ಟವಿದ್ದರೂ ಕಾಂಗ್ರೆಸ್ ಇಂತಹ ಕಾರ್ಯಕ್ಕೆ ಯಾಕೆ ಮುಂದಾಯಿತು ಎನ್ನುವುದು ನಿಗೂಢ.

ಆದರೂ ಈ ಸಂದರ್ಭದಲ್ಲಿ ಸರಕಾರದ ರೈತ ವಿರೋಧಿ ವಿಧೇಯಕಗಳು ಚರ್ಚೆಗೊಳಗಾದವು. ಅದನ್ನು ಹೊರತು ಪಡಿಸಿದರೆ, ಇನ್ನಾವ ವಿಶೇಷ ಲಾಭವೂ ವಿರೋಧ ಪಕ್ಷಗಳಿಗೆ ಆಗಿಲ್ಲ. ಧ್ವನಿಮತದ ಗೆಲುವನ್ನು, ಸರಕಾರ ವಿಧೇಯಕಕ್ಕೆ ಸಿಕ್ಕಿದ ಅಂಗೀಕಾರ ಎಂಬಂತೆ ಬಿಂಬಿಸುತ್ತಿದೆ. ಇದರ ಜೊತೆಗೆ, ಯಡಿಯೂರಪ್ಪ ಅವರನ್ನು ಬದಲಾಯಿಸಲು ಅಸಾಧ್ಯ ಎಂದು ಮನಗಂಡ ಬಿಜೆಪಿಯೊಳಗಿರುವ ಕೆಲವು ನಾಯಕರು ಬಂಡಾಯವೆದ್ದು ಸರಕಾರವನ್ನು ಉರುಳಿಸುವ ಸಾಧ್ಯತೆಗಳು ಆರು ತಿಂಗಳು ಮುಂದೆ ಹೋಗುವಂತಾಯಿತು. ಒಂದು ರೀತಿಯಲ್ಲಿ, ಈ ಅವಿಶ್ವಾಸ ಮತ ನಿರ್ಣಯ ಯಡಿಯೂರಪ್ಪ ಅವರನ್ನು ತಾತ್ಕಾಲಿಕವಾಗಿ ನಿರಾಳರನ್ನಾಗಿಸಿದೆ. ಪಕ್ಷದೊಳಗೆ ಅವರ ವಿರುದ್ಧ ಸಂಚುಗಳು ನಡೆಯುತ್ತಿವೆಯಾದರೂ, ಸದ್ಯಕ್ಕಂತೂ ಯಡಿಯೂರಪ್ಪ ಅವರನ್ನು ಕೆಳಗಿಳಿಸುವ ಶಕ್ತಿಯು ಕೇಂದ್ರದ ವರಿಷ್ಠರಿಗೆ ಇಲ್ಲ. ರೈತರ ಆಕ್ರೋಶ, ಪ್ರತಿಭಟನೆಗಳ ನಡುವೆ ಕಾಯ್ದೆಗಳನ್ನು ಜಾರಿಗೊಳಿಸುತ್ತಿರುವ ಪ್ರಧಾನಿ ಮೋದಿ ‘ಆತ್ಮ ನಿರ್ಭರ ಭಾರತದಲ್ಲಿ ರೈತರು ಪ್ರಧಾನ ಪಾತ್ರವಹಿಸುತ್ತಿದ್ದಾರೆ’’ ಎಂದು ಹೇಳಿದ್ದಾರೆ. ಅವರು ಪ್ರಧಾನ ಪಾತ್ರ ವಹಿಸುವುದು ನಿಜವೇ ಆಗಿದ್ದರೆ, ಸರಕಾರ ಯಾಕೆ ರೈತರ ಬೇಡಿಕೆಗಳನ್ನು ಸಾರಾಸಗಟಾಗಿ ನಿರಾಕರಿಸಿ ಅವರ ಹಿತಾಸಕ್ತಿಗಾಗಿ ವಿರುದ್ಧವಾದ ಕಾಯ್ದೆಗಳನ್ನು ಜಾರಿಗೆ ತರುತ್ತಿದೆೆ ಎನ್ನುವ ಪ್ರಶ್ನೆಗೆ ಪ್ರಧಾನಿಯವರ ಮನ್ ಕಿ ಬಾತ್‌ನಲ್ಲಿ ಉತ್ತರವಿರಲಿಲ್ಲ.

ಸದ್ಯದ ಕಾನೂನು, ಈವರೆಗೆ ಸ್ವಂತಿಕೆಯಿಂದ, ತಮ್ಮ ಕಾಲ ಮೇಲೆ ನಿಂತಿದ್ದ ರೈತರನ್ನು ಕಾರ್ಪೊರೇಟ್ ಬಾವಿಗೆ ತಳ್ಳಲಿದೆ. ಅವರ ಆತ್ಮವಿಶ್ವಾಸವನ್ನು ನಾಶಗೊಳಿಸಲಿದೆ. ಆದುದರಿಂದಲೇ, ರೈತರ ಪಾಲಿಗೆ ಮೋದಿ ತರುತ್ತಿರುವ ಕಾಯ್ದೆಗಳು ಆತ್ಮನಿರ್ಭರತೆಗೆ ಪೂರಕವಾಗಿಲ್ಲ. ಇದು ಆತ್ಮವಂಚನೆಯ ಪರಾಕಾಷ್ಠೆಯಾಗಿದೆ. ಕೇಂದ್ರ ಸರಕಾರದ ಮೂರು ಕೃಷಿ ಮಸೂದೆಗಳು ರೈತರ ಉತ್ಪನ್ನಗಳನ್ನು ಮುಕ್ತ ಮಾರುಕಟ್ಟೆಗೆ ತಲುಪಿಸಲು ನೆರವಾಗಲಿವೆ ಎನ್ನಲಾಗಿದೆ. ಮೂಲಸೌಕರ್ಯ ಕ್ಷೇತ್ರದಲ್ಲಿ ಖಾಸಗಿ ಹೂಡಿಕೆಗೆ ಉತ್ತೇಜನ ನೀಡುವ ಮೂಲಕ ರೈತರ ಉತ್ಪನ್ನಗಳನ್ನು ರಾಷ್ಟ್ರೀಯ ಮತ್ತು ಜಾಗತಿಕ ಮಾರುಕಟ್ಟೆಗೆ ತಲುಪಿಸಲು ಈ ಮಸೂದೆಗಳು ನೆರವಾಗಲಿವೆೆ ಎಂದು ಸರಕಾರ ಹೇಳುತ್ತಿದೆ. ಎಪಿಎಂಸಿಯ ಹೊರಗಡೆ, ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲು ರೈತರಿಗೆ ಸಾಧ್ಯವಾಗುತ್ತದೆ. ಇದರಿಂದ ಪೂರ್ವನಿರ್ಧರಿತ ಬೆಲೆಯಲ್ಲಿ ರೈತರು ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಬಹುದಾಗಿದೆ. ವಿಪರ್ಯಾಸವೆಂದರೆ, ಧಾನ್ಯಗಳು, ಖಾದ್ಯ ತೈಲ, ಈರುಳ್ಳಿ, ಬಟಾಟೆ ಮುಂತಾದವುಗಳನ್ನು ಅಗತ್ಯ ವಸ್ತುಗಳ ಪಟ್ಟಿಯಿಂದ ಹೊರಗಿಡಲಾಗಿದೆ.

ಇದರರ್ಥ, ಈ ಉತ್ಪನ್ನಗಳು ಬೆಲೆ ನಿಯಂತ್ರಣದ ವ್ಯಾಪ್ತಿಯಿಂದ ಹೊರಗುಳಿಯುತ್ತವೆ. ಅಲ್ಲದೆ ಅಸಾಧಾರಣ ಪರಿಸ್ಥಿತಿ ಹೊರತುಪಡಿಸಿ, ಖಾಸಗಿ ಸಂಸ್ಥೆಗಳು ಕೃಷಿ ಉತ್ಪನ್ನಗಳನ್ನು ದಾಸ್ತಾನು ಇರಿಸಲು ವಿಧಿಸಿದ್ದ ಮಿತಿಯನ್ನು ರದ್ದುಗೊಳಿಸಲಾಗಿದೆ. ಈಗ ರೈತರು ಕಮಿಷನ್ ಏಜೆಂಟರ ಮೂಲಕ ತಮ್ಮ ಉತ್ಪನ್ನಗಳನ್ನು ಎಪಿಎಂಸಿಗೆ ಮಾರುತ್ತಿದ್ದಾರೆ. ಆದರೆ ನೂತನ ಮಸೂದೆಯ ಬಳಿಕ ಕಮಿಷನ್ ಏಜೆಂಟರು ಹಾಗೂ ಎಪಿಎಂಸಿಗಳ ಮಹತ್ವ ಕಡಿಮೆಯಾಗುತ್ತದೆ. ರೈತರ ಉತ್ಪನ್ನಗಳಿಗೆ ಸರಕಾರ ಘೋಷಿಸುವ ಕನಿಷ್ಠ ಬೆಂಬಲ ಬೆಲೆಯ ಯುಗ ನಿಧಾನಕ್ಕೆ ಅಂತ್ಯವಾಗಲಿದೆ. 2014ರಲ್ಲಿ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಬಿಜೆಪಿ ಬೆಂಬಲ ಬೆಲೆಯನ್ನು ಕೃಷಿ ವೆಚ್ಚದ ಶೇ.50ಕ್ಕೆ ಹೆಚ್ಚಿಸುವುದಾಗಿ ಭರವಸೆ ನೀಡಿತ್ತು. ಆದರೆ, ಗೆದ್ದ ಬಳಿಕ ಈ ಭರವಸೆಯನ್ನು ಮರೆತೇ ಬಿಟ್ಟಿರುವುದು ವಿಪರ್ಯಾಸಕರ. ಈಗ ಕೇಂದ್ರ ಸರಕಾರ ಘೋಷಿಸಿರುವ ಕನಿಷ್ಠ ಬೆಂಬಲ ಬೆಲೆಯ ಆಶ್ವಾಸನೆಯೂ ಕಾರ್ಯಗತವಾಗುವ ಸಾಧ್ಯತೆಗಳು ಕಡಿಮೆ ಮತ್ತು ಸರಕಾರ ಯಾವೆಲ್ಲ ದೂರದೃಷ್ಟಿಯಿಂದ ಈ ಹಿಂದೆ ಯೋಜನೆಗಳನ್ನು ಘೋಷಿಸುತ್ತಾ ಬಂತೋ, ಅವೆಲ್ಲ ವಿಫಲವಾಗಿ ದೇಶದ ಆರ್ಥಿಕತೆ ಸರ್ವನಾಶವಾಯಿತು. ಅದಾನಿ, ಅಂಬಾನಿ ಹೊರತು ಪಡಿಸಿದರೆ ಮಧ್ಯಮ ಗಾತ್ರದ ಉದ್ದಿಮೆದಾರರು ಆತ್ಮಹತ್ಯೆಗಳಿಗೆ ಶರಣಾಗುವ ಸನ್ನಿವೇಶ ನಿರ್ಮಾಣವಾಗಿದೆ. ಇಂತಹ ಸಂದರ್ಭದಲ್ಲಿ, ರೈತರಿಗೆ ಆತ್ಮನಿರ್ಭರತೆಯ ಪಾಠ ಹೇಳಲು ಹೊರಟಿರುವ ಪ್ರಧಾನಿ ಮೋದಿ, ರೈತ ವಿರೋಧಿ ನೀತಿಯ ಮೂಲಕ ಈ ದೇಶದ ಅರ್ಥವ್ಯವಸ್ಥೆಯ ಶವಪೆಟ್ಟಿಗೆಗೆ ಕಟ್ಟ ಕಡೆಯ ಮೊಳೆ ಹೊಡೆಯುತ್ತಿದ್ದಾರೆ.

ಕೃಷಿ ಉತ್ಪನ್ನಗಳ ದಾಸ್ತಾನು ಮಿತಿಯನ್ನು ಕೊನೆಗೊಳಿಸುವ ನಿರ್ಧಾರ ಬೃಹತ್ ಕಾರ್ಪೊರೇಟ್ ಸಂಸ್ಥೆಗಳಿಗೆ ಅನುಕೂಲಕರವಾಗಿದ್ದು ಅವರು ತಮಗಿಷ್ಟ ಬಂದಂತೆ ಮಾರುಕಟ್ಟೆಯಲ್ಲಿ ಬೆಲೆಯನ್ನು ನಿಯಂತ್ರಿಸಲು ಸಾಧ್ಯವಾಗುತ್ತದೆ. ಮುಕ್ತ ಮಾರುಕಟ್ಟೆ ವ್ಯವಸ್ಥೆ ಎಂದು ಸರಕಾರ ಹೇಳಿದ್ದರೂ ದೊಡ್ಡ ರೈತರು ಮತ್ತು ಸಣ್ಣ ರೈತರ ಮಧ್ಯೆ ಯಾವುದೇ ವ್ಯತ್ಯಾಸವನ್ನು ಉಲ್ಲೇಖಿಸಿಲ್ಲ. ಸಣ್ಣ ಮತ್ತು ಅತೀ ಸಣ್ಣ ಕೃಷಿಕರು ದೊಡ್ಡ ರೈತರೆದುರು ಪೈಪೋಟಿ ನೀಡಲು ಸಾಧ್ಯವಾಗದು. ಸರಕಾರ ಕೃಷಿ ಕ್ಷೇತ್ರವನ್ನು ಕಾರ್ಪೊರೇಟೀಕರಣ ಮಾಡಲು ಹೊರಟಿದೆ. ರೈತರು ನೇರವಾಗಿ ಮುಕ್ತ ಮಾರುಕಟ್ಟೆಯಲ್ಲಿ ವ್ಯವಹಾರ ನಡೆಸುವುದರಿಂದ ದೇಶದ ಸಾರ್ವಜನಿಕ ವಿತರಣಾ ವ್ಯವಸ್ಥೆಗೆ ತೊಂದರೆಯಾಗಲಿದೆ. ಆಹಾರ ಅಭದ್ರತೆ ಸೃಷ್ಟಿಯಾಗಲಿದೆ. ಆಗ ಬೃಹತ್ ಕಾರ್ಪೊರೇಟ್ ಸಂಸ್ಥೆಗಳಿಂದ ಆಹಾರವನ್ನು ಪಡೆದು ಸಾರ್ವಜನಿಕ ವಿತರಣೆಗೆ ಒದಗಿಸಬೇಕಾಗುತ್ತದೆ. ಅಲ್ಲದೆ ಮೂಲ ಆಹಾರ ವಸ್ತುಗಳ ಬೆಲೆಯ ಮೇಲೆಯೂ ಇದರಿಂದ ಪರಿಣಾಮ ಉಂಟಾಗುತ್ತದೆ ಎಂದು ಆತಂಕ ವ್ಯಕ್ತವಾಗಿದೆ. ಈಗ ಚಾಲ್ತಿಯಲ್ಲಿರುವ, ಎಪಿಎಂಸಿ ಮೂಲಕ ರೈತರ ಉತ್ಪನ್ನಗಳ ಖರೀದಿ, ಮಾರಾಟ ಪ್ರಕ್ರಿಯೆಯನ್ನು ಕೂಲಂಕಷವಾಗಿ ಪರಿಶೀಲಿಸಿ, ‘ರೈತರಿಗೆ ಸೂಕ್ತ ಬೆಂಬಲ ಬೆಲೆ, ಅದು ಅವರ ಹಕ್ಕು, ಅವರಿಗೆ ಮಾಡುವ ಔದಾರ್ಯವಲ್ಲ’ ಎನ್ನುವ ನಿಟ್ಟಿನಲ್ಲಿ ಒದಗಿಸಬೇಕು. ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಒದಗಿಸುವ ಮೂಲಕ ರೈತರು ದೇಶಕ್ಕೆ ಸಲ್ಲಿಸುವ ಮಹಾನ್ ಸೇವೆಗೆ ಸರಕಾರದ ಕಡೆಯಿಂದ ಕಿಂಚಿತ್ತಾದರೂ ಕೃತಜ್ಞತೆ ಸಲ್ಲಬೇಕಿದೆ. ಆತ್ಮನಿರ್ಭರತೆಯಲ್ಲಿ ರೈತರು ಪರಿಣಾಮಕಾರಿ ಪಾತ್ರವಹಿಸಬೇಕಾದರೆ ಮೋದಿಯವರು ಆತ್ಮ ನಿರ್ಭರರಾಗಬೇಕು. ಇಲ್ಲವಾದರೆ ಮನ್‌ಕಿ ಬಾತ್ ಮುಂದಿನ ದಿನಗಳಲ್ಲಿ ಬರೇ ‘ಮಂಕೀ ಬಾತ್’ ಆಗಿ ದೇಶದ ಆರ್ಥಿಕ ಸ್ಥಿತಿ ಮರದ ಸೀಳುಗಳ ನಡುವೆ ಸಿಲುಕಿದ ಮಂಕಿಯ ಬಾಲದಂತಾಗಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News