ನನಗೆ ಕೋವಿಡ್ ಸೋಂಕು ತಗಲಿದರೆ ಮಮತಾರನ್ನು ತಬ್ಬಿಕೊಳ್ಳುವೆ: ವಿವಾದಾತ್ಮಕ ಹೇಳಿಕೆ ನೀಡಿದ ಬಿಜೆಪಿ ನಾಯಕ

Update: 2020-09-28 16:15 GMT

ಹೊಸದಿಲ್ಲಿ,ಸೆ.28: ತಾನು ಕೋವಿಡ್ ಸೋಂಕಿಗೊಳಗಾದರೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರನ್ನು ತಬ್ಬಿಕೊಳ್ಳುವುದಾಗಿ ಹೇಳಿರುವ ಬಿಜೆಪಿಯ ನೂತನ ರಾಷ್ಟ್ರೀಯ ಕಾರ್ಯದರ್ಶಿ ಅನುಪಮ್ ಹಜ್ರಾ ವಿರುದ್ಧ ಆಡಳಿತ ತೃಣಮೂಲ ಕಾಂಗ್ರೆಸ್‌ನ ಸಿಲಿಗುರಿ ಘಟಕವು ಪೊಲೀಸ್ ದೂರನ್ನು ದಾಖಲಿಸಿದೆ. ರವಿವಾರ ಸಂಜೆ ದಕ್ಷಿಣ 24 ಪರಗಣಗಳ ಜಿಲ್ಲೆಯಲ್ಲಿ ಪಕ್ಷದ ಕಾರ್ಯಕ್ರಮವೊಂದರಲ್ಲಿ ಹಜ್ರಾ ಈ ಹೇಳಿಕೆಯನ್ನು ನೀಡಿದ್ದರು.

‘ನಮ್ಮ ಕಾರ್ಯಕರ್ತರು ಕೊರೋನಕ್ಕಿಂತ ದೊಡ್ಡ ಶತ್ರುವಾಗಿರುವ ಮಮತಾ ಬ್ಯಾನರ್ಜಿ ವಿರುದ್ಧ ಹೋರಾಡುತ್ತಿದ್ದಾರೆ. ಮಾಸ್ಕ್ ಇಲ್ಲದೆ ಬ್ಯಾನರ್ಜಿಯವರ ವಿರುದ್ಧ ಹೋರಾಡಲು ನಮ್ಮ ಕಾರ್ಯಕರ್ತರಿಗೆ ಸಾಧ್ಯವಾಗಿರುವಾಗ ಅವರು ಮಾಸ್ಕ್ ಧರಿಸದೆ ಕೋವಿಡ್ ವಿರುದ್ಧವೂ ಹೋರಾಡಬಲ್ಲರು. ನನಗೆ ಸೋಂಕು ತಗಲಿದರೆ ಮಮತಾ ಬ್ಯಾನರ್ಜಿಯವರನ್ನು ತಬ್ಬಿಕೊಳ್ಳಲು ನಿರ್ಧರಿಸಿದ್ದೇನೆ ’ಎಂದು ಹಝ್ರಿ ಹೇಳಿದ್ದರು.

ಮಾಜಿ ಟಿಎಂಸಿ ಸಂಸದ ಹಜ್ರಾ ಕಳೆದ ವರ್ಷ ಬಿಜೆಪಿಗೆ ಸೇರ್ಪಡೆಗೊಂಡಿದ್ದರು.

ಹಝ್ರ ಹೇಳಿಕೆಯನ್ನು ಖಂಡಿಸಿದ ಹಿರಿಯ ತೃಣಮೂಲ ನಾಯಕ ಸೌಗತ ರಾಯ್ ಅವರು,ಇದು ಬಿಜೆಪಿಯ ಮನಃಸ್ಥಿತಿಯನ್ನು ಪ್ರತಿಬಿಂಬಿಸುತ್ತದೆಯಷ್ಟೇ ಎಂದು ಹೇಳಿದರು.

 ತೃಣಮೂಲ ಕಾಂಗ್ರೆಸ್‌ನ ಸಿಲಿಗುರಿ ಘಟಕವು  ಹಜ್ರಾ ವಿರುದ್ಧ ಪ್ರತಿಭಟನಾ ರಾಲಿಯನ್ನೂ ನಡೆಸಿದೆ.

 ಪೊಲೀಸ್ ದೂರಿಗೆ ಪ್ರತಿಕ್ರಿಯಿಸಿದ ಹಝ್ರಿ,‘ಈ ಹಿಂದೆ ಬ್ಯಾನರ್ಜಿ ಕೂಡ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಹಲವಾರು ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ್ದಾರೆ. ನನ್ನ ವಿರುದ್ಧ ಒಂದು ಎಫ್‌ಐಆರ್ ದಾಖಲಾದರೆ ಬ್ಯಾನರ್ಜಿ ವಿರುದ್ಧ ಕನಿಷ್ಠ 10 ಎಫ್‌ಐಆರ್‌ಗಳು ದಾಖಲಾಗಬೇಕು ’ಎಂದು ಹೇಳಿದರು.

 ಹಜ್ರಾ ಹೇಳಿಕೆಯಿಂದ ಅಂತರವನ್ನು ಕಾಯ್ದುಕೊಂಡಿರುವ ರಾಜ್ಯ ಬಿಜೆಪಿಯು,ಇಂತಹ ಹೇಳಿಕೆಗಳನ್ನು ತಾನು ಬೆಂಬಲಿಸುವುದಿಲ್ಲ ಎಂದು ಸ್ಪಷ್ಟಪಡಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News