ಕರ್ನಾಟಕ ಬಂದ್ ಗೆ ಮಂಡ್ಯದಲ್ಲಿ ವ್ಯಾಪಕ ಬೆಂಬಲ; ಹೋರಾಟಗಾರರ ಧರಣಿ, ಉರುಳು ಸೇವೆ

Update: 2020-09-28 17:05 GMT

ಮಂಡ್ಯ, ಸೆ.28: ರೈತ ಮತ್ತು ಕಾರ್ಮಿಕ ಕಾಯ್ದೆಗಳ ತಿದ್ದುಪಡಿ ವಿರುದ್ಧ ಸೋಮವಾರ ಕರೆ ನೀಡಿದ್ದ ಕರ್ನಾಟಕ ಬಂದ್ ಗೆ ಜಿಲ್ಲೆಯಲ್ಲಿ ವ್ಯಾಪಕ ಬೆಂಬಲ ವ್ಯಕ್ತವಾಯಿತು. ಜಿಲ್ಲಾ ಕೇಂದ್ರ ಮಂಡ್ಯ ನಗರ, ತಾಲೂಕು ಕೇಂದ್ರಗಳಾದ ಮದ್ದೂರು, ಶ್ರೀರಂಗಪಟ್ಟಣ, ಕೆ.ಆರ್.ಪೇಟೆ, ಪಾಂಡವಪುರ, ಮಳವಳ್ಳಿ, ನಾಗಮಂಗಲ ಸೇರಿದಂತೆ ಹೋಬಳಿ ಮತ್ತು ಪ್ರಮುಖ ವಾಣಿಜ್ಯ ಕೇಂದ್ರಗಳಲ್ಲಿ ಅಂಗಡಿ ಮುಂಗಟ್ಟುಗಳು ಬಂದ್ ಆಗಿದ್ದವು.

ಸಾರಿಗೆ ಸಂಸ್ಥೆ ಒಳಗೊಂಡಂತೆ ಬಸ್ ಗಳ ಸಂಚಾರ ಸ್ಥಗಿತಗೊಂಡಿತ್ತು. ಕೆಲವು ಆಟೋ ರಿಕ್ಷಾ ಚಾಲಕರೂ ಬಂದ್ ಗೆ ಬೆಂಬಲ ನೀಡಿದ್ದರಿಂದ ರಿಕ್ಷಾಗಳ ಸಂಚಾರವೂ ವಿರಳವಾಗಿತ್ತು. ಸರಕಾರಿ ಕಚೇರಿಗಳು ತೆರೆದಿದ್ದರೂ ಸಾರ್ವಜನಿಕರ ಸಂದಣಿ ಕಡಿಮೆಯಿತ್ತು.

ರೈತ, ದಲಿತ, ಕಾರ್ಮಿಕ ಹಾಗೂ ಕನ್ನಡಪರ ಸಂಘಟನೆಗಳ ನೂರಾರು ಕಾರ್ಯಕರ್ತರು ಬೈಕ್ ರ‍್ಯಾಲಿ ಮತ್ತು ಧರಣಿ ನಡೆಸಿ ಕೇಂದ್ರ ಹಾಗೂ ರಾಜ್ಯ ಸರಕಾರಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಕೂಡಲೇ ತಿದ್ದುಪಡಿಗಳನ್ನು ಹಿಂದಕ್ಕೆ ಪಡೆಯಬೇಕು ಎಂದು ಆಗ್ರಹಿಸಿದರು.

ಕನ್ನಡ ಸೇನೆ ಜಿಲ್ಲಾಧ್ಯಕ್ಷ ಎಚ್. ಸಿ.ಮಂಜುನಾಥ, ರೈತ ಸಂಘದ ಹೆಮ್ಮಿಗೆ ಚಂದ್ರಶೇಖರ ಸೇರಿ ಇನ್ನೂ ಕೆಲವರು ಉರುಳು ಸೇವೆ ಮಾಡುವ ಮೂಲಕ ಗಮನ ಸೆಳೆದರು.

ಧರಣಿ ವೇಳೆ ಪೊಲೀಸರು ಮತ್ತು ಧರಣಿ ನಿರತರ ನಡುವೆ ಮಾತಿನ ಚಕಮಕಿ ನಡೆಯಿತು. ಮುನ್ನೆಚ್ಚರಿಕೆ ಕ್ರಮವಾಗಿ ಸೂಕ್ತ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News