ಬಿಜೆಪಿಯಿಂದ ದೇಶದ ಕೃಷಿ ವ್ಯವಸ್ಥೆಯನ್ನು ಖಾಸಗೀಕರಣಗೊಳಿಸುವ ಹುನ್ನಾರ: ಎ.ಎಸ್.ಪೊನ್ನಣ್ಣ ಆರೋಪ

Update: 2020-09-29 18:28 GMT

ಬೆಂಗಳೂರು, ಸೆ.28: ಬಿಜೆಪಿ ನೇತೃತ್ವದ ಎನ್‍ಡಿಎ ಸರಕಾರ ದೇಶದ ಕೃಷಿ ಮತ್ತು ಮಾರುಕಟ್ಟೆ ವ್ಯವಸ್ಥೆಯನ್ನು ಸಂಪೂರ್ಣವಾಗಿ ಖಾಸಗೀಕರಣ ಮಾಡುವ ಹುನ್ನಾರ ನಡೆಸಿದ್ದು, ಎಪಿಎಂಸಿ, ಬಿಎಸ್‍ಎನ್‍ಎಲ್ ಮತ್ತಿತರ ಸಂಸ್ಥೆಗಳನ್ನು ಖಾಸಗೀಕರಣ ಮಾಡುವ ಷಡ್ಯಂತ್ರ ರೂಪಿಸಲಾಗಿದೆ ಎಂದು ಕೆಪಿಸಿಸಿ ಕಾನೂನು ವಿಭಾಗದ ಅಧ್ಯಕ್ಷ, ಹಿರಿಯ ವಕೀಲ ಎ.ಎಸ್.ಪೊನ್ನಣ್ಣ ಆರೋಪಿಸಿದ್ದಾರೆ. 

ಮಂಗಳವಾರ ನಗರದಲ್ಲಿ ಕರ್ನಾಟಕ ವಕೀಲರ ಪರಿಷತ್ತು ಆಯೋಜಿಸಿದ್ದ ಸಂಸತ್ತಿನಲ್ಲಿ ಇತ್ತೀಚೆಗೆ ಅಂಗೀಕಾರಗೊಂಡಿರುವ ರೈತ ಪರ ಮಸೂದೆಗಳ ಕುರಿತು ಆನ್‍ಲೈನ್ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

ರೈತರು ಎಲೆಕ್ಟ್ರಾನಿಕ್ಸ್ ವ್ಯವಸ್ಥೆಯಲ್ಲಿ ರೈತ ಮಾರಾಟ ಮಾಡಲು ಸಾಧ್ಯವೇ ಇಲ್ಲ. ಇದೊಂದು ದೊಡ್ಡ ಮಾಫಿಯಾವಾಗಿದೆ. ಮುಂದಿನ ಕೆಲ ವರ್ಷಗಳಲ್ಲಿ ರೈತರ ಉತ್ಪನ್ನಗಳನ್ನು ಮಾರಾಟ ಮಾಡಲು ವಿಶೇಷ ಆಪ್‍ಗಳನ್ನು ಸೃಷ್ಟಿಸಿ ಇಡೀ ಮಾರುಕಟ್ಟೆ ವ್ಯವಸ್ಥೆಯನ್ನು ರಿಲಯನ್ಸ್ ನಂತಹ ಸಂಸ್ಥೆಗಳು ತನ್ನ ಕೈವಶ ಮಾಡಿಕೊಳ್ಳಲಿವೆ. ರೈತರ ರಕ್ಷಣೆಗೆ ಈ ಕಾನೂನಿನಲ್ಲಿ ಯಾವುದೇ ಅವಕಾಶವಿಲ್ಲ. ಎಲ್ಲವೂ ಕಾರ್ಪೋರೇಟ್ ವ್ಯವಸ್ಥೆಗೆ ಪೂರಕವಾದ ಕಾನೂನಾಗಿದೆ. ಕಾರ್ಪೋರೇಟ್ ಸಂಸ್ಥೆಗಳು ದಬ್ಬಾಳಿಕೆ ಮಾಡಿ ರೈತರನ್ನು ಶೋಷಿಸುವ ಕಾನೂನಾಗಿದೆ ಎಂದು ದೂರಿದರು.

ಹೊಸ ಕಾಯ್ದೆಯಿಂದ ದೇಶದ ಕೃಷಿ ಜಿಡಿಪಿ ಹೆಚ್ಚಾಗಲಿದೆ ಎಂದು ಹೇಳಿರುವುದು ಹಾಸ್ಯಾಸ್ಪದ, ಇಡೀ ಜಗತ್ತಿನಲ್ಲಿ ಜಿಡಿಪಿ ಅತಿ ಹೆಚ್ಚು ನೆಲ ಕಚ್ಚಿರುವ ರಾಷ್ಟ್ರ ನಮ್ಮದು. ಆರ್ಥಿಕ ವ್ಯವಸ್ಥೆಯ ಬಗ್ಗೆ ಮಾತನಾಡುವುದು ಸರಿಯಲ್ಲ. ಕೇಂದ್ರ ಸರ್ಕಾರದ ಕಾನೂನು ರೈತ ವಿರೋಧಿಯಾಗಿದೆ ಎಂದು ತಿಳಿಸಿದರು.

ಹಿರಿಯ ವಕೀಲ ಮತ್ತು ಬಿಜೆಪಿ ವಕ್ತಾರ ವಿವೇಕ್ ರೆಡ್ಡಿ ಮಾತನಾಡಿ, ದೇಶದ ತಂತ್ರಜ್ಞಾನದಲ್ಲಿ ಅಗಾಧ ಬದಲಾವಣೆಯಾಗಿದ್ದು, 5ಜಿ ಯುಗದಲ್ಲೂ ಪುರಾತನ ಪಳೆಯುಳಿಕೆ ನಿಯಮಗಳಡಿ ಕಾರ್ಯನಿರ್ವಹಿಸುತ್ತಿರುವ ಎಪಿಎಂಸಿ ಕಾನೂನು ವ್ಯಾಪ್ತಿಯಲ್ಲೇ ರೈತರ ಉತ್ಪನ್ನಗಳನ್ನು ಮಾರಾಟ ಮಾಡಬೇಕು ಎನ್ನುವುದು ಅವೈಜ್ಞಾನಿಕ ಎಂದು ಹೇಳಿದರು.

ಇದೀಗ ತಂತ್ರಜ್ಞಾನದಲ್ಲಿ ವ್ಯಾಪಕ ಬದಲಾವಣೆಯಾಗಿದ್ದು, ಅತ್ಯಾಧುನಿಕ ತಂತ್ರಜ್ಞಾನ ಕಾಲದಲ್ಲೂ ಹಳೆಯ ಎಪಿಎಂಸಿ ಕಾನೂನುಗಳು ಅಗತ್ಯವಿದೆಯೇ. ರೈತರ ಆದಾಯ ದ್ವಿಗುಣಗೊಳಿಸಲು ಕಾನೂನಿನಲ್ಲಿ ಬದಲಾವಣೆ ಅಗತ್ಯವಿದ್ದು, ಇದನ್ನು ಕೇಂದ್ರ ಸರಕಾರ ಕಾರ್ಯಗತಗೊಳಿಸುತ್ತಿದೆ. ಇಡೀ ಜಗತ್ತು ಇಂದು ಹಳ್ಳಿಯಾಗಿ ಪರಿವರ್ತನೆಯಾಗಿದ್ದು, ಕೃಷಿ ಮಾರುಕಟ್ಟೆಯಲ್ಲಿ ಆಧುನಿಕ ತಂತ್ರಜ್ಞಾನ ಅಳವಡಿಕೆ ಅತ್ಯಂತ ಅಗತ್ಯವಾಗಿದೆ ಎಂದು ಹೇಳಿದರು. 

ಎಪಿಎಂಸಿ ವ್ಯವಸ್ಥೆಯನ್ನು ತೆರವುಗೊಳಿಸುವುದಾಗಿ ಕಾಂಗ್ರೆಸ್ ಈ ಹಿಂದೆ ತನ್ನ ಚುನಾವಣಾ ಪ್ರಣಾಳಿಕೆಯಲ್ಲೇ ಪ್ರಕಟಿಸಿತ್ತು. 2012 ರಲ್ಲಿ ಕಪಿಲ್ ಸಿಬಲ್ ಸಹ ಎಪಿಎಂಸಿ ವ್ಯವಸ್ಥೆಯನ್ನು ತೆಗೆದುಹಾಕಬೇಕು ಎಂದು ಹೇಳಿದ್ದರು. ಇದೀಗ ಕಾಂಗ್ರೆಸ್ ದ್ವಿಮುಖ ಧೋರಣೆ ಅನುಸರಿಸುತ್ತಿದೆ. ಕಾರ್ಪೋರೇಟ್ ವ್ಯವಸ್ಥೆಯ ಕಪಿಮುಷ್ಠಿಗೆ ಸಿಲುಕಲಿದೆ ಎಂದು ವೃಥಾ ಆರೋಪ ಮಾಡುವುದು ಸರಿಯಲ್ಲ ಎಂದು ಹೇಳಿದರು.

ಹೈಕೋರ್ಟ್ ಹಿರಿಯ ವಕೀಲ ಜಯಕುಮಾರ್ ಎಸ್. ಪಾಟೀಲ್ ಕಾರ್ಯಾಗಾರ ಉದ್ಘಾಟಿಸಿದರು. ಅಖಿಲ ಭಾರತ ವಕೀಲರ ಪರಿಷತ್ತಿನ ಸಹ ಅಧ್ಯಕ್ಷ ವೈ.ಆರ್.ಸದಾಶಿವ ರೆಡ್ಡಿ, ರಾಜ್ಯ ವಕೀಲರ ಪರಿಷತ್ತಿನ ಅಧ್ಯಕ್ಷ ಜೆ.ಎಂ.ಅನಿಲ್ ಕುಮಾರ್, ಕರ್ನಾಟಕ ವಕೀಲರ ಪರಿಷತ್ತಿನ ಕಾನೂನು ಅಕಾಡೆಮಿ ಅಧ್ಯಕ್ಷ ಜೆ.ಎಂ.ಗೌತಮ್ ಚಂದ್, ವಕೀಲರ ಪರಿಷತ್ತಿನ ಉಪಾಧ್ಯಕ್ಷ ಎನ್., ಶಿವಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News