ಒಳಚರಂಡಿಯಲ್ಲಿ ಸಮಸ್ಯೆ: ಬಾಂಬ್ ನಿಷ್ಕ್ರಿಯ ದಳಕ್ಕೆ ಕರೆ ಮಾಡಿದ ಜನರು!

Update: 2020-09-29 18:29 GMT

ಬಿಜಾಪುರ: ನಗರದ ಜಿಲ್ಲಾ ಸಶಸ್ತ್ರ ಮೀಸಲು ಪೊಲೀಸ್ ಪಡೆಯ ಬಾಂಬ್ ನಿಷ್ಕ್ರಿಯ ದಳಕ್ಕೆ ಇಲ್ಲಿನ ನಿವಾಸಿಗಳಿಂದ ಇತ್ತೀಚೆಗೆ ವಿಚಿತ್ರ ಮನವಿಯೊಂದು ಬಂದಿತ್ತು. ಸಾಮಾನ್ಯವಾಗಿ ಬಾಂಬ್ ಅಥವಾ ಸ್ಫೋಟಕ ವಸ್ತುಗಳ ಪತ್ತೆ ಹಾಗು ಗಣ್ಯರ ಸುರಕ್ಷತೆಯ ಮುನ್ನೆಚ್ಚರಿಕೆ ವಹಿಸುವ ಕೆಲಸ ಮಾಡುವ ಈ ಬಾಂಬ್ ನಿಷ್ಕ್ರಿಯ ದಳಕ್ಕೆ ಇಲ್ಲಿನ ನಿವಾಸಿಗಳು ಕರೆ ಮಾಡಿದ್ದು, ಯಾವುದೇ ಸ್ಫೋಟಕವನ್ನು ಪತ್ತೆ ಹಚ್ಚುವುದಕ್ಕಲ್ಲ, ಬದಲಾಗಿ, ನಗರದ ಒಳಚರಂಡಿಯ ಮ್ಯಾನ್ ಹೋಲ್ ಗಳನ್ನು ಪತ್ತೆಹಚ್ಚುವುದಕ್ಕಾಗಿ.

ಸಾಮಾಜಿಕ ಕಾರ್ಯಕರ್ತ ಅಝೀಮ್ ಇನಾಂದಾರ್ ಅವರ ಸಹಾಯದಿಂದ ನಗರದ ಮೂರು ಪ್ರದೇಶಗಳ ನಿವಾಸಿಗಳು ಸಶಸ್ತ್ರ ಮೀಸಲು ಪೊಲೀಸ್ ಪಡೆಗೆ ಈ ವಿಚಿತ್ರ ಮನವಿ ಸಲ್ಲಿಸಿದ್ದರು.

ನಾಲ್ಕು ಪ್ರದೇಶಗಳನ್ನು ಸಂಪರ್ಕಿಸುವ ಒಳಚರಂಡಿ ವ್ಯವಸ್ಥೆಯ ಮ್ಯಾನ್ ಹೋಲ್ ಸಮಸ್ಯೆಯೇ ಬಾಂಬ್ ನಿಷ್ಕ್ರಿಯ ದಳಕ್ಕೆ ಈ ಮನವಿ ಹೋಗಲು ಕಾರಣ.

ಪೈಪ್ ಲೈನ್ ನಲ್ಲಿ ಬ್ಲಾಕ್ ಸಮಸ್ಯೆಯಿಂದಾಗಿ ನಗರದ ಹಳ್ಳಿ ಕಾಲನಿ, ಟಿಪ್ಪು ನಗರ, ಅಲಿಕ ರೋಝ, ಬಾಲ್ಸಿಂಗ್ ಕಾಲನಿ ಮತ್ತು ನೌಭಾಗ್ ನ ಸುಮಾರು 2000 ಮನೆಗಳಿಗೆ ನೀರು ನುಗ್ಗುತ್ತಿದ್ದು, ಇದರಿಂದ ನಿವಾಸಿಗಳಿಗೆ ಭಾರೀ ಸಮಸ್ಯೆಯಾಗಿತ್ತು ಎಂದು ಅಝೀಮ್ ಇನಾಂದಾರ್ ಹೇಳುತ್ತಾರೆ.

ಒಳಚರಂಡಿಗೆ ಪೈಪ್ ಲೈನ್ ಅಳವಡಿಸಿದ ನಂತರ ಗುತ್ತಿಗೆದಾರ ಮ್ಯಾನ್ ಹೋಲ್ ಎತ್ತರವನ್ನು ರಸ್ತೆಯ ಎತ್ತರಕ್ಕೆ ಸಮನಾಗಿ ಮಾಡದೆ ಅದನ್ನು ಮುಚ್ಚಿದ್ದಾರೆ. ಮ್ಯಾನ್ ಹೋಲ್ ಗಳನ್ನು ಗುರುತಿಸಲು ಅವುಗಳನ್ನು ರಸ್ತೆಗಳಷ್ಟೇ ಎತ್ತರಕ್ಕೆ ಏರಿಸಲಾಗಿದೆಯೇ ಎಂದು ಪರೀಕ್ಷಿಸುವುದು ಮಹಾನಗರಪಾಲಿಕೆ ಕೆಲಸವಾಗಿತ್ತು. ಆದರೆ ಪಾಲಿಕೆ ಅದನ್ನು ಮಾಡದ ಕಾರಣ ಗುತ್ತಿಗೆದಾರ ಮ್ಯಾನ್ ಹೋಲ್ ಗಳು ಕಾಣಿಸದ ಹಾಗೆ ಮುಚ್ಚಿದ್ದಾರೆ ಎಂದವರು ಆರೋಪಿಸಿದ್ದಾರೆ.

ಇದರಿಂದಾಗಿ ಮ್ಯಾನ್ ಹೋಲ್ ಗಳನ್ನು ಗುರುತಿಸುವುದು ಕಷ್ಟಸಾಧ್ಯವಾದಾಗ ಮೆಟಲ್ ಡಿಟೆಕ್ಟರ್ ಗಾಗಿ ಬಾಂಬ್ ಪತ್ತೆ ದಳಕ್ಕೆ ಕರೆ ಮಾಡಲಾಗಿದೆ. ಕೊನೆಗೆ ಮೆಟಲ್ ಡಿಟೆಕ್ಟರ್ ನ ಸಹಾಯದಿಂದ 2 ಮ್ಯಾನ್ ಹೋಲ್ ಗಳನ್ನು ಗುರುತಿಸಲಾಗಿದ್ದರೆ, ಒಂದು ಮ್ಯಾನ್ ಹೋಲನ್ನು ಗುರುತಿಸಲು ಸಾಧ್ಯವಾಗಿಲ್ಲ.

ಈ ಬಗ್ಗೆ ಪ್ರತಿಕ್ರಿಯಿಸಿದ ಸಿಟಿ ಕಾರ್ಪೊರೇಶನ್ ಕಮಿಷನರ್ ಹರ್ಷ ಶೆಟ್ಟಿ, “ಈಗಾಗಲೇ ಮ್ಯಾನ್ ಹೋಲ್ ಗಳನ್ನು ಗುರುತಿಸಲಾಗಿದೆ. ಹಿಂದಿನ ಅಧಿಕಾರಿಗಳು ಮ್ಯಾನ್ ಹೋಲ್ ಗಳು ಕಾಣಿಸುತ್ತಿದೆಯೇ ಎಂದು ಪರೀಕ್ಷಿಸಬೇಕಾಗಿತ್ತು. ಈಗ ನಾವು ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುತ್ತೇವೆ” ಎಂದಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News