ಒಂದೇ ದಿನ ಎರಡು ಪರೀಕ್ಷೆ: ಅಭ್ಯರ್ಥಿಗಳಲ್ಲಿ ಗೊಂದಲ

Update: 2020-09-30 11:40 GMT

ಬೆಂಗಳೂರು, ಸೆ.30: ಎರಡು ಬಾರಿ ದಿನಾಂಕ ಬದಲಾವಣೆಯಾಗಿದ್ದ ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ(ಟಿಇಟಿ)ಗೆ ಅ.4 ರಂದು ದಿನಾಂಕ ನಿಗದಿಯಾಗಿದ್ದು, ಅದೇ ದಿನ ಕೇಂದ್ರ ಲೋಕಸೇವಾ ಆಯೋಗದ ಪ್ರಿಲಿಮ್ಸ್ ಪರೀಕ್ಷೆಯೂ ನಡೆಯುವುದರಿಂದ ಅಭ್ಯರ್ಥಿಗಳು ಗೊಂದಲಕ್ಕೀಡಾಗಿದ್ದಾರೆ.

ಕರ್ನಾಟಕ ರಾಜ್ಯ ಶಿಕ್ಷಣ ಇಲಾಖೆಯು ಎಪ್ರಿಲ್ 12ರಂದು ಟಿಇಟಿ ಪರೀಕ್ಷೆ ನಡೆಸಲು ನಿರ್ಧರಿಸಿತ್ತು. ಆದರೆ ಅದೇ ದಿನ ರಾಜ್ಯದ ಉಪನ್ಯಾಸಕರ ಅರ್ಹತಾ ಪರೀಕ್ಷೆ (ಕೆಸೆಟ್) ನಿಗದಿಯಾಗಿದ್ದರಿಂದ, ದಿನಾಂಕ ಬದಲಿಸಿ ಎಪ್ರಿಲ್ 11ರಂದು ಟಿಇಟಿ ಪರೀಕ್ಷೆ ನಡೆಸಲು ನಿರ್ಧರಿಸಲಾಯಿತು. ಆದರೆ ಕೋವಿಡ್ ನಿಯಂತ್ರಿಸಲು ಜಾರಿಗೆ ಬಂದ ಲಾಕ್‍ಡೌನ್‍ನಿಂದಾಗಿ ಪರೀಕ್ಷೆಯನ್ನು ಅನಿರ್ದಿಷ್ಟಾವಧಿ ಮುಂದೂಡಲು ಇಲಾಖೆ ನಿರ್ಣಯ ತೆಗೆದುಕೊಂಡಿತು.

ನಂತರ ಜೂನ್ 5ರಂದು ಪರೀಕ್ಷೆ ನಡೆಸುವ ಕುರಿತು ಶಿಕ್ಷಣ ಸಚಿವರು ಹೇಳಿದ್ದರು. ಕಾರಣಾಂತರಗಳಿಂದ ಆಗಲೂ ಪರೀಕ್ಷೆ ನಡೆಯಲಿಲ್ಲ. ಇದೀಗ ಅ. 4ಕ್ಕೆ ನಿಗದಿಯಾಗಿದೆ. ಬೆಳಗ್ಗೆ ಡಿ.ಇಡಿ. ಹಾಗೂ ಮಧ್ಯಾಹ್ನ ಬಿ.ಇಡಿ. ಪದವೀಧರರಿಗೆ ಪರೀಕ್ಷೆ ನಡೆಯಲಿದೆ. ಇದಕ್ಕೆ ಪ್ರವೇಶ ಪತ್ರಗಳನ್ನು ಸೆ. 25ರಂದು ಅಂತರ್ಜಾಲದಲ್ಲಿ ಪ್ರಕಟಿಸಿದೆ.

'ಯುಪಿಎಸ್‍ಸಿ ಪ್ರಿಲಿಮ್ಸ್ ಪರೀಕ್ಷೆಯು ಮೂರು ತಿಂಗಳ ಮೊದಲೇ ನಿರ್ಧಾರವಾಗಿದೆ. ಆದರೆ ಟಿಇಟಿ ಪರೀಕ್ಷೆಯನ್ನು ಯುಪಿಎಸ್‍ಸಿ ಪರೀಕ್ಷೆ ದಿನಾಂಕ ಗಮನಿಸದೆ ನಿಗದಿಪಡಿಸಿದಂತಿದೆ. ಆದರೆ ಈಗ ಎರಡೂ ಪರೀಕ್ಷೆಗಳು ಒಂದೇ ದಿನ ನಿಗದಿಯಾಗಿದ್ದರಿಂದ ಹಲವು ತಿಂಗಳ ಪರಿಶ್ರಮ ವ್ಯರ್ಥವಾಗಲಿದೆ. ಶಿಕ್ಷಣ ಇಲಾಖೆಯು ಇನ್ನೊಂದು ಸಲ ಪರೀಕ್ಷೆ ದಿನಾಂಕವನ್ನು ಮುಂದೂಡಿದರೆ ಬಹಳಷ್ಟು ಅಭ್ಯರ್ಥಿಗಳಿಗೆ ನೆರವಾಗಲಿದೆ' ಎಂದು ಅಭ್ಯರ್ಥಿಯೊಬ್ಬರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News