ಕೊರೋನ ಸೋಂಕಿತರ ಸಂಖ್ಯೆ, ಸಾವಿನ ಮಾಹಿತಿ ಬಚ್ಚಿಡುತ್ತಿರುವ ಸರಕಾರ: ಸಿದ್ದರಾಮಯ್ಯ ಆರೋಪ

Update: 2020-09-30 11:42 GMT

ಬೆಂಗಳೂರು, ಸೆ. 30: `ಕೊರೋನ ವೈರಸ್ ಸೋಂಕು ನಿಯಂತ್ರಣದಲ್ಲಿ ತನ್ನ ವೈಫಲ್ಯವನ್ನು ಮುಚ್ಚಿಡಲು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಸರಕಾರ ಕೋವಿಡ್-19 ಸೋಂಕಿತರ ಸಾವು ಮತ್ತು ಸೋಂಕಿನ ಮಾಹಿತಿಯನ್ನು ಬಚ್ಚಿಡುತ್ತಿದ್ದಾರೆ ಎಂಬ ಸಾರ್ವಜನಿಕರಲ್ಲಿನ ಅನುಮಾನಕ್ಕೆ ಕೋಲಾರ ಜಿಲ್ಲೆಯ ಸಾವುಗಳ ಬಗ್ಗೆ ಆರೋಗ್ಯ ಇಲಾಖೆಯ ಸುಳ್ಳುಗಳೇ ಪುರಾವೆ' ಎಂದು ವಿಧಾನಸಭೆಯ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಆಕ್ರೋಶ ಹೊರಹಾಕಿದ್ದಾರೆ.

ಬುಧವಾರ ಈ ಸಂಬಂಧ ಸರಣಿ ಟ್ವೀಟ್ ಮಾಡಿರುವ ಅವರು, `ಕೋಲಾರದಲ್ಲಿ ಕೊರೋನದಿಂದ ಸೆ.19ರಂದು 4 ಮತ್ತು ಸೆ.20ರಂದು 1 ಸಾವು ಸಂಭವಿಸಿದೆ ಎಂದು ಅಲ್ಲಿನ ಜಾಲಪ್ಪ ಆಸ್ಪತ್ರೆ ವರದಿ ಮಾಡಿದೆ. ಆದರೆ, ಆರೋಗ್ಯ ಇಲಾಖೆ ಆ ದಿನಗಳಲ್ಲಿ ಕೊರೋನ ಸೋಂಕಿನಿಂದ ಸಾವು ಸಂಭವಿಸಿಲ್ಲ ಎಂದು ಪ್ರಕಟಣೆ ಹೊರಡಿಸಿದೆ. ಇದು ಯಡಿಯೂರಪ್ಪ ನೇತೃತ್ವದ ಸರಕಾರದ ಕೊರೋನ ಸೋಂಕು ನಿಯಂತ್ರಣದ ಪರಿ!' ಎಂದು ದಾಖಲೆ ಸಮೇತ ಆರೋಪಿಸಿದ್ದಾರೆ.

'ಭ್ರಷ್ಟಾಚಾರದಿಂದಾಗಿ ಹದಗೆಟ್ಟಿರುವ ಹಣಕಾಸು ಸ್ಥಿತಿಯನ್ನು ನಿಯಂತ್ರಿಸಲಾಗದೆ ಅನಿರ್ಬಂಧಿತವಾಗಿ ಎಲ್ಲ ವ್ಯಾಪಾರ-ವಹಿವಾಟನ್ನು ತೆರೆದು ಕೂತಿದ್ದೀರಿ. ಈಗಲೂ ಎಚ್ಚೆತ್ತುಕೊಂಡು ಕೊರೋನ ವೈರಸ್ ಸೋಂಕು ನಿಯಂತ್ರಣಕ್ಕೆ ಕ್ರಮ ಕೈಗೊಳ್ಳದೆ ಇದ್ದರೆ ಜನರ ಶಾಪದಿಂದ ಯಾವ ಹೈಕಮಾಂಡ್ ಕೂಡಾ ನಿಮ್ಮನ್ನು ರಕ್ಷಿಸಲಾರದು' ಎಂದು ಸಿದ್ದರಾಮಯ್ಯ ಸರಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

'ಕೊರೋನ ಸೋಂಕಿನ ಮಾಹಿತಿ ಕೇಳಿ ಪತ್ರದ ಮೇಲೆ ಪತ್ರ ಬರೆದರೂ ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ಸರಕಾರ ಮತ್ತು ಸಚಿವರು ಯಾಕೆ ಉತ್ತರಿಸುತ್ತಿಲ್ಲ ಎನ್ನುವುದನ್ನು ಕೋಲಾರ ಜಿಲ್ಲೆಯ ಸಾವಿನ ವರದಿಯಲ್ಲಿನ ಸುಳ್ಳುಗಳಿಂದ ಅರ್ಥ ಮಾಡಿಕೊಳ್ಳಬಹುದು. ಕೊರೋನ ಸೋಂಕು ಮತ್ತು ಸಾವಿನ ಸಂಖ್ಯೆಯನ್ನು ಬಚ್ಚಿಟ್ಟರೂ, ನೊಂದ ಕುಟುಂಬಗಳ ಶಾಪದಿಂದ ನೀವು ಪಾರಾಗಲಾರಿರಿ' ಎಂದು ಸಿದ್ದರಾಮಯ್ಯ ಎಚ್ಚರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News