ಡಿಸಿಸಿ ಬ್ಯಾಂಕ್ ಚುನಾವಣೆ ವೇಳೆ ಜಿಲ್ಲಾಡಳಿತ ಸಿ.ಟಿ.ರವಿ ಕೈಗೊಂಬೆಯಂತೆ ವರ್ತಿಸಿದೆ: ಎಚ್.ಎಚ್.ದೇವರಾಜ್ ಆರೋಪ

Update: 2020-09-30 12:27 GMT

ಚಿಕ್ಕಮಗಳೂರು, ಸೆ.30: ಸಚಿವ ಸಿ.ಟಿ.ರವಿ ಅವರು ಜಿಲ್ಲಾಡಳಿತ ಮತ್ತು ಡಿಸಿಸಿ ಬ್ಯಾಂಕ್‍ನ ಆಡಳಿತ ಯಂತ್ರವನ್ನು ದುರುಪಯೋಗಪಡಿಸಿಕೊಂಡು ಚುನಾವಣೆಯಲ್ಲಿ ತಮ್ಮ ಪಕ್ಷದ ಬೆಂಬಲಿತ ಅಭ್ಯರ್ಥಿಗಳು ಗೆಲುವು ಸಾಧಿಸುವಂತೆ ಮಾಡಿದ್ದಾರೆ. ಹಾಸನ ಜಿಲ್ಲೆಯ ಬಿಜೆಪಿ ಶಾಸಕರೊಬ್ಬರ ಕೈವಾಡವು ಇದರಲ್ಲಿದೆ. ಜಿಲ್ಲಾ ಸಹಕಾರಿ ಬ್ಯಾಂಕ್ ನಿರ್ದೇಶಕರ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಬಿಜೆಪಿ ವಾಮಮಾರ್ಗ ಅನುಸರಿಸಿ ಗೆಲವು ಸಾಧಿಸಿದೆ ಎಂದು ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಎಚ್.ಎಚ್.ದೇವರಾಜ್ ಆರೋಪಿಸಿದ್ದಾರೆ.

ಬುಧವಾರ ನಗರದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಚಿಕ್ಕಮಗಳೂರು ತಾಲೂಕಿನ 10 ಕೃಷಿ ಪತ್ತಿನ ಸಹಕಾರಿ ಸಂಘದ ಪ್ರತಿನಿಧಿಗಳು ಮತ್ತು ಕೊಪ್ಪ ತಾಲೂಕಿನ 2 ಕೃಷಿ ಪತ್ತಿನ ಸಹಕಾರಿ ಸಂಘದ ಪ್ರತಿನಿಧಿಗಳ ಹೆಸರು ಚುನಾವಣೆ ಪಟ್ಟಿಯಲ್ಲಿತ್ತು. ಎಆರ್‍ಸಿಎಸ್, ಡಿಆರ್‍ಸಿಎಸ್ ಮತ ಚಲಾಯಿಸಲು ಇವರು ಅರ್ಹರು ಎಂದು ಸರ್ಟಿಪಿಕೆಟ್ ಕೂಡ ನೀಡಿತ್ತು. ಆದರೆ ಚುನಾವಣೆಯ ದಿನ ಬೆಳಗ್ಗೆ ಅವರು ಮತದಾನ ಮಾಡಲು ಅನರ್ಹರು ಎಂದು ಘೋಷಿಸಲಾಗಿದೆ. ಯಾವ ಆಧಾರದ ಮೇಲೆ ಅವರನ್ನು ಅನರ್ಹರು ಎಂದು ಘೋಷಿಸಿದ್ದಾರೆ ಎಂದು ಪ್ರಶ್ನಿಸಿದರು. 

ಚುನಾವಣೆ ಹಿನ್ನೆಲೆಯಲ್ಲಿ ಡಿಸಿಸಿ ಬ್ಯಾಂಕ್ ಸುತ್ತಮುತ್ತಲ 100 ಮೀ. ಪ್ರದೇಶದಲ್ಲಿ ಜಿಲ್ಲಾಡಳಿತ ನಿಷೇಧಾಜ್ಞೆ ಘೋಷಿಸಿತ್ತು. ಆದರೆ ನಿಷೇಧಾಜ್ಞೆ ಪ್ರದೇಶದಲ್ಲಿದ್ದ ಮದ್ಯದಂಗಡಿಗಳು ಬಾಗಿಲು ತೆರದಿದ್ದವು. ಬಿಜೆಪಿಯವರು ಮೂರು ಬಾರೀ ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ. ಆದರೆ ಜಿಲ್ಲಾಡಳಿತ ಜೆಡಿಎಸ್ ಕಾರ್ಯಕರ್ತರಿಗೆ ಮಾತ್ರ ನಿಷೇಧಾಜ್ಞೆ ಘೋಷಣೆ ಮಾಡಿದಂತಿತ್ತು. ಪೊಲೀಸ್ ಸಿಬ್ಬಂದಿ ಏಕಪಕ್ಷೀಯವಾಗಿ ಕೆಲಸ ಮಾಡಿದ್ದಾರೆ ಎಂದು ದೂರಿದರು.

ಚುನಾವಣೆ ವೇಳೆ ಇಡೀ ಆಡಳಿತ ಯಂತ್ರವೇ ಸಿ.ಟಿ.ರವಿ ಅವರ ಕೈಗೊಂಬೆಯಾಗಿ ಕಲಸ ಮಾಡಿದೆ. ರಾಜರೋಷವಾಗಿ ಹೆಂಡದ ಹೊಳೆ ಹರಿಸಿದ್ದು, ಸಚಿವ ಸಿ.ಟಿ.ರವಿ ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಿರುವುದಕ್ಕೆ ಇದೇ ನಿದರ್ಶನ ಎಂದ ಅವರು, ಇಂತಹ ವಾಮಮಾರ್ಗದಲ್ಲಿ ಡಿಸಿಸಿ ಬ್ಯಾಂಕ್ ಚುನಾವಣೆ ಬೇಕಿತ್ತಾ ಎಂದು ಪ್ರಶ್ನಿಸಿದರು. ಸಕಲೇಶಪುರ ಡಿಸಿಸಿ ಬ್ಯಾಂಕ್ ಅಭಿವೃದ್ಧಿ ಅಧಿಕಾರಿ ಪ್ರಭಾರ ಎಆರ್‍ಸಿಎಸ್ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದು, ಅವರು ಬಿಜೆಪಿ ಕೃತ್ಯಕ್ಕೆ ಕುಮ್ಮಕ್ಕು ನೀಡಿದ್ದಾರೆ. ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ನಿಷೇಧಾಜ್ಞೆ ಉಲ್ಲಂಘನೆ, ಕೊರೊನಾ ಮಾರ್ಗಸೂಚಿಯನ್ನು ಉಲ್ಲಂಘನೆ ಮಾಡಿರುವ ಬಿಜೆಪಿ ಕಾರ್ಯಕರ್ತರ ವಿರುದ್ಧ ಕ್ರಮಕೈಗೊಳ್ಳಬೇಕು. ಚುನಾವಣೆ ವಾಮಮಾರ್ಗದಲ್ಲಿ ನಡೆದಿದ್ದು, ಮರು ಚುನಾವಣೆ ನಡೆಸಬೇಕೆಂದು ಇದೇ ವೇಳೆ ಅವರು ಆಗ್ರಹಿಸಿದರು. 

ಸುದ್ದಿಗೋಷ್ಟಿಯಲ್ಲಿ ಜೆಡಿಎಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚಂದ್ರಪ್ಪ, ಮುಖಂಡರಾದ ಭೈರೇಗೌಡ, ಹುಣಸೆಮಕ್ಕಿ ಲಕ್ಷ್ಮಣ್, ರಂಜನ್, ಹೊಲದಗದ್ದೆ ಗಿರೀಶ್ ಉಪಸ್ಥಿತರಿದ್ದರು.

ಸಚಿವ ಸಿ.ಟಿ.ರವಿ ರೈತರ ಬಗ್ಗೆ ರೈತ ಪರ ಹೋರಾಟಗಾರರ ಬಗ್ಗೆ ಹಗುರವಾಗಿ ಮಾತನಾಡುವುದನ್ನು ನಿಲ್ಲಿಸಬೇಕು. ರೈತರ ಮೇಲೆ ದಬ್ಬಾಳಿಕೆ ಮಾಡಿದ ಅನೇಕ ರಾಜಕಾರಣಿಗಳು ಮೂಲೆಗುಂಪಾಗಿದ್ದಾರೆ ಎಂಬುದನ್ನು ಸಚಿವ ಸಿ.ಟಿ.ರವಿ ಮರೆಯಬಾರದು. 
-ಎಚ್.ಎಚ್.ದೇವರಾಜ್.

ಉತ್ತರ ಪ್ರದೇಶ ಮತ್ತು ಗುಜರಾತ್ ರಾಜ್ಯದಲ್ಲಿ ಬಿಜೆಪಿ ಸರಕಾರವಿದ್ದು, ಅಲ್ಲಿ ದಲಿತರ ಮೇಲೆ ನಡೆಯುತ್ತಿರುವ ಅತ್ಯಾಚಾರ, ಕೊಲೆ ಘಟನೆಗಳ ನಿಯಂತ್ರಣಕ್ಕೆ ಸರಕಾರ ವಿಫಲವಾಗಿದೆ. ಅಲ್ಲಿನ ಸರಕಾರಗಳು ದಲಿತರ ವಿರೋಧಿಯಾಗಿದ್ದು, ಮೇಲ್ವರ್ಗದವರ ಪರ ಕೆಲಸ ಮಾಡುತ್ತಿದೆ. ರಾಜ್ಯದಲ್ಲಿ ಬಿಜೆಪಿ ಸರಕಾರ ಭ್ರಷ್ಟಾಚಾರದ ಸರಕಾರವಾಗಿದೆ. ಸಿಎಂ ಪುತ್ರನ ಭ್ರಷ್ಟಚಾರವನ್ನು ಬಯಲಿಗೆಳೆದ ಖಾಸಗಿ ಮಾಧ್ಯಮದ ವಿರುದ್ಧ ಸರಕಾರ ನಡೆದುಕೊಂಡಿರುವ ರೀತಿ ಖಂಡನೀಯ.
-ಹುಣಸೆಮಕ್ಕಿ ಲಕ್ಷ್ಮಣ್, ಜೆಡಿಎಸ್ ಮುಖಂಡ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News