ಗೂಡ್ಸ್ ಆಟೋ ಢಿಕ್ಕಿ: ಪಾದಚಾರಿ ಯುವತಿ ಮೃತ್ಯು, ಮೂವರಿಗೆ ಗಾಯ

Update: 2020-09-30 12:36 GMT

ಕೊಳ್ಳೇಗಾಲ, ಸೆ.30: ಗೂಡ್ಸ್ ಆಟೋ ಢಿಕ್ಕಿ ಹೊಡೆದು ಪಾದಚಾರಿ ಯುವತಿ ಸಾವನ್ನಪ್ಪಿದ್ದು, ಮೂವರು ಗಾಯಗೊಂಡಿರುವ ಘಟನೆ ಮುಡಿಗುಂಡ ಮುಖ್ಯ ರಸ್ತೆಯಲ್ಲಿ ನಡೆದಿದೆ.

ಮುಡಿಗುಂಡ ಬಡಾವಣೆಯ ನಿವಾಸಿ ಪವಿತ್ರ (21) ಸಾವನ್ನಪ್ಪಿದ್ದ ಯುವತಿ. ಅದೇ ಬಡಾವಣೆಯ ನಿವೇದಿತಾ(38), ಪವಿತ್ರ(36), ರಕ್ಷಿತಾ( 12), ಪವಿತ್ರ (21) ಗಾಯಗೊಂಡಿದ್ದಾರೆ.

ಪಟ್ಟಣದ ಮುಡಿಗುಂಡ ಬಡಾವಣೆಯ ನಿವೇದಿತಾ, ಪವಿತ್ರ, ರಕ್ಷಿತ ಹಾಗೂ ಪವಿತ್ರ ಹೊರವಲಯದಲ್ಲಿರುವ ಮುಳ್ಳಾಚ್ಚಮ್ಮ ದೇವಾಲಯಕ್ಕೆ ಪೂಜೆಗೆಂದು ನಡೆದುಕೊಡು ಹೋಗುತ್ತಿರುವಾಗ ಕೊಳ್ಳೇಗಾಲದ ಕಡೆಯಿಂದ ಮುಡಿಗುಂಡ ಮಾರುಕಟ್ಟೆಗೆ ರೇಷ್ಮೆ ತುಂಬಿಕೊಂಡು ವೇಗವಾಗಿ ಬಂದ ಗೂಡ್ಸ್ ಆಟೋ ಢಿಕ್ಕಿ ಹೊಡೆದಿದ್ದು, ಬಳಿಕ ಆಟೋ ಪಕ್ಕದಲ್ಲಿದ್ದ ವಿದ್ಯುತ್ ಕಂಬಕ್ಕೆ ಗುದ್ದಿದೆ. ಪರಿಣಾಮ ನಾಲ್ವರು ಪಾದಚಾರಿಗಳಿಗೆ ತೀವ್ರ ಗಾಯಗೊಂಡಿದ್ದಾರೆ. ವಿದ್ಯುತ್ ಕಂಬ ಕೂಡ ಜಖಂ ಆಗಿದೆ.

ತಕ್ಷಣ ಗಾಯಾಳುಗಳಿಗೆ ಸ್ಥಳೀಯರು ಪಟ್ಟಣದ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗೆ ಮೈಸೂರಿಗೆ ಕರೆದೊಯ್ಯುವಾಗ ಮಾರ್ಗಮಧ್ಯದಲ್ಲಿ ಪವಿತ್ರ ಸಾವನ್ನಪ್ಪಿದ್ದಾಳೆ. ಉಳಿದ ಮೂವರ‌ ಪರಿಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಈ ಸಂಬಂಧ ಪಟ್ಟಣದ ಪೊಲೀಸ್ ಠಾಣೆಯಲ್ಲಿ‌ ದೂರು ದಾಖಲಾಗಿದೆ. ಪೊಲೀಸರು ಸ್ಥಳಕ್ಕೆ ಆಗಮಿಸಿ ಗೂಡ್ಸ್ ವಾಹನವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News