ಸಂಘ-ಸಂಸ್ಥೆಗಳ ಧನಸಹಾಯ ಯೋಜನೆ ಮರು ಜೀವಕ್ಕೆ ಸರಕಾರ ಚಿಂತನೆ

Update: 2020-09-30 13:00 GMT

ಬೆಂಗಳೂರು, ಸೆ.30: ಕೋವಿಡ್‍ನಿಂದಾಗಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ ಸಂಘ-ಸಂಸ್ಥೆಗಳಲ್ಲಿ ಕಲಾ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುವ ಸಲುವಾಗಿ ಸರಕಾರ ಧನಸಹಾಯ ಯೋಜನೆಗೆ ಮರು ಜೀವ ನೀಡಲು ಮುಂದಾಗಿದೆ.

ಹಲವಾರು ಸಂಘ-ಸಂಸ್ಥೆಗಳು ಸರಕಾರದ ಅನುದಾನವನ್ನು ನಂಬಿಕೊಂಡೇ ಕೆಲಸ ಮಾಡುತ್ತಿವೆ. ಕಲೆಯನ್ನೇ ನಂಬಿಕೊಂಡವರಿಗೆ ವರ್ಷದ ಬಹುತೇಕ ದಿನ ಉದ್ಯೋಗ ಪಡೆಯಲು ಸಹಕಾರಿಯಾಗಿದೆ. 2018-19ನೇ ಸಾಲಿನಲ್ಲಿ ಧನಸಹಾಯಕ್ಕೆ ತಜ್ಞರು ಅಂತಿಮ ಮಾಡಿದ ಪಟ್ಟಿಯಲ್ಲಿ ಕೆಲ ಸಂಘ–ಸಂಸ್ಥೆಗಳು ನಕಲಿ ಬಿಲ್‍ಗಳನ್ನು ಸಲ್ಲಿಕೆ ಮಾಡಿವೆ ಎಂಬ ಆರೋಪ ಎದುರಾಗಿತ್ತು. ಈ ಕಾರಣಕ್ಕೆ  ಧನಸಹಾಯ ಪ್ರಕ್ರಿಯೆ ತಡೆಹಿಡಿದಿದ್ದ ಹಿಂದಿನ ಮೈತ್ರಿ ಸರಕಾರ, ಈ ಯೋಜನೆ ಸ್ಥಗಿತ ಮಾಡಿ, ಕರ್ನಾಟಕ ವೈಭವ ಯೋಜನೆ ರೂಪಿಸಿತ್ತು.

ಲೋಕಸಭೆ ಚುನಾವಣೆ ನೀತಿ ಸಂಹಿತೆ ಜಾರಿಯಾಗಿದ್ದರಿಂದ ಕರ್ನಾಟಕ ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಅಡಿಯಲ್ಲಿ 2018-19 ನೆ ಸಾಲಿನಲ್ಲಿನ 11.60 ಕೋಟಿ ಅನುದಾನವನ್ನು ಸರಕಾರ ಪ್ರತ್ಯೇಕವಾಗಿರಿಸಿ, ಸಂಘ-ಸಂಸ್ಥೆಗಳಿಗೆ ಹಂಚಿತ್ತು. ಆದರೆ, ಹಿಂದಿನ ಸಾಲಿನಲ್ಲಿ ಈ ಯೋಜನೆಗೆ ಅನುದಾನವನ್ನು ಸರಕಾರ ನಿಗದಿ ಮಾಡಿರಲಿಲ್ಲ. ಇದರಿಂದಾಗಿ ಕೆಲ ಸಂಘ-ಸಂಸ್ಥೆಗಳು ಸಾಂಸ್ಕೃತಿಕ ಚಟುವಟಿಕೆಯಿಂದ ದೂರವಾಗಿದ್ದವು.

17 ಕೋಟಿ ರೂ. ಅನುದಾನ: 2020–21ನೇ ಸಾಲಿನಲ್ಲಿ ಸಾಂಸ್ಕೃತಿಕ ಸಂಘ–ಸಂಸ್ಥೆಗಳಿಗೆ ಅನುದಾನ ನೀಡಲು ಸರಕಾರವು ಒಟ್ಟು 17 ಕೋಟಿ ರೂ. ಅನುದಾನ ಮೀಸಲಿಟ್ಟಿದೆ. ಇದರಲ್ಲಿ 10 ಕೋಟಿ ಸಾಮಾನ್ಯ ವರ್ಗದ ಸಂಘ–ಸಂಸ್ಥೆಗಳಿಗೆ, 7 ಕೋಟಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಸಂಘ–ಸಂಸ್ಥೆಗಳಿಗೆ ಹಂಚಿಕೆ ಮಾಡಲಾಗಿದೆ.

2018–19ನೇ ಸಾಲಿನ ಧನಸಹಾಯ ಪ್ರಕ್ರಿಯೆ ಹಲವು ಗೊಂದಲಕ್ಕೆ ಎಡೆಮಾಡಿಕೊಟ್ಟಿತ್ತು. ಆ ವೇಳೆ ಎರಡು ಲಕ್ಷಕ್ಕಿಂತ ಮೇಲ್ಪಟ್ಟು ಅನುದಾನ ಪಡೆಯುವ ಸಂಘ–ಸಂಸ್ಥೆಗಳ ಕಾರ್ಯಚಟುವಟಿಕೆಯನ್ನು ಪರಿಶೀಲಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿತ್ತು. ಈ ಬಾರಿ ಆಯ್ಕೆ ಪ್ರಕ್ರಿಯೆಯಲ್ಲಿನ ಗೊಂದಲ ನಿವಾರಣೆಗೆ ನಿಯಮದಲ್ಲಿ ಕೆಲ ಮಾರ್ಪಾಡು ಮಾಡಲಾಗುವುದು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಆಯ್ಕೆ ಪ್ರಕ್ರಿಯೆ ಸರಳೀಕರಣಕ್ಕೆ ಚಿಂತನೆ: ಧನಸಹಾಯದ ನಿಯಮದ ಪ್ರಕಾರ ಸಂಘ–ಸಂಸ್ಥೆಗಳು ಅಗತ್ಯ ದಾಖಲೆಗಳೊಂದಿಗೆ ಆನ್‍ಲೈನ್‍ನಲ್ಲಿ ಅರ್ಜಿ ಸಲ್ಲಿಸಬೇಕು. ಆಯಾ ಜಿಲ್ಲೆಯ ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರು ದಾಖಲೆ ಪರಿಶೀಲಿಸಿ, ಸಂಘ–ಸಂಸ್ಥೆಗಳ ಪಟ್ಟಿಯನ್ನು ಸಂಸ್ಕೃತಿ ಇಲಾಖೆಯ ಕೇಂದ್ರ ಕಚೇರಿಗೆ ಕಳುಹಿಸಬೇಕು.

ಸಂಸ್ಕೃತಿ ಇಲಾಖೆಯ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ಅಕಾಡೆಮಿ ಅಧ್ಯಕ್ಷರನ್ನು ಒಳಗೊಂಡ ತಜ್ಞರ ಸಮಿತಿ ಧನಸಹಾಯಕ್ಕೆ ಪಟ್ಟಿಯನ್ನು ಅಂತಿಮಗೊಳಿಸಲಿದೆ. ಇಲಾಖೆ ಕಾರ್ಯದರ್ಶಿ ಹಾಗೂ ನಿರ್ದೇಶಕರು ಮಗದೊಮ್ಮೆ ಪರಿಶೀಲಿಸಿ, ಸಚಿವರಿಗೆ ಕಡತ ರವಾನಿಸಲಿದ್ದಾರೆ. ಆದರೆ, ಪ್ರಸಕ್ತ ಸಾಲಿನಲ್ಲಿ ಜಿಲ್ಲಾಧಿಕಾರಿಗಳ ಹಂತದಲ್ಲಿಯೇ ಸಂಘ–ಸಂಸ್ಥೆಗಳ ಕಾರ್ಯಚಟುವಟಿಕೆಯನ್ನು ಪರಿಶೀಲನೆ ನಡೆಸಿ, ಅವರ ಮೂಲಕವೇ ಅನುದಾನ ವಿತರಿಸಲು ಸರ್ಕಾರ ಚಿಂತನೆ ನಡೆಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News