ಗೌರಿ ಹತ್ಯೆ ಪ್ರಕರಣದ ಆರೋಪಿ ಅಮೋಲ್ ಕಾಳೆ ಆರೋಗ್ಯವಾಗಿದ್ದಾನೆ: ಹೈಕೋರ್ಟ್ ಗೆ ಸರಕಾರದ ಹೇಳಿಕೆ

Update: 2020-09-30 15:16 GMT

ಬೆಂಗಳೂರು, ಸೆ.30: ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಅಮೋಲ್ ಕಾಳೆ ಆರೋಗ್ಯವಾಗಿದ್ದಾನೆ ಎಂದು ರಾಜ್ಯ ಸರಕಾರ ಹೈಕೋರ್ಟ್‍ಗೆ ಮಾಹಿತಿ ನೀಡಿದೆ.

ಕಾರಾಗೃಹಗಳಲ್ಲಿ ಕೊರೋನ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಸೂಕ್ತ ಚಿಕಿತ್ಸೆ ನೀಡುತ್ತಿಲ್ಲ ಎಂದು ಆರೋಪಿಸಿ ಮೈಸೂರಿನ ಕಾರಾಗೃಹದಲ್ಲಿರುವ ಗೌರಿ ಹತ್ಯೆ ಪ್ರಕರಣದ ಆರೋಪಿ ಅಮೋಲ್ ಕಾಳೆ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್ ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

ಈ ವೇಳೆ ಸರಕಾರದ ಪರ ವಕೀಲರು ಪೀಠಕ್ಕೆ ಮಾಹಿತಿ ನೀಡಿ, ವಿಚಾರಣಾಧೀನ ಕೈದಿ ಅಮೋಲ್ ಕಾಳೆ ಆರೋಗ್ಯವಾಗಿ ಮತ್ತು ಸದೃಢವಾಗಿದ್ದಾನೆ. ಈವರೆಗೆ ಆತನಿಗೆ ಯಾವುದೇ ಅನಾರೋಗ್ಯವಿಲ್ಲ ಎಂದು ಮಾಹಿತಿ ನೀಡಿದರು. ಜತೆಗೆ ಈ ಹಿಂದೆ ನಡೆಸಿದ್ದ ಆರೋಗ್ಯ ತಪಾಸಣೆಯ ವರದಿ ಸಲ್ಲಿಸಿದರು.

ಇದಕ್ಕೆ ಅರ್ಜಿದಾರರ ಪರ ವಕೀಲರಾದ ಅಮೃತೇಶ್ ಆಕ್ಷೇಪಿಸಿ, ಆರೋಗ್ಯ ತಪಾಸಣೆ ನಡೆಸಿರುವ ವರದಿ ಹಿಂದಿನ ವರ್ಷದ್ದು. ಜತೆಗೆ ಜೈಲಿನ ಅಧಿಕಾರಿಗಳು ಸರಿಯಾದ ಮಾಹಿತಿ ನೀಡಿಲ್ಲ. ಕೇಂದ್ರ ಸರಕಾರದ ಮಾರ್ಗಸೂಚಿಗಳನ್ನು ಸರಿಯಾಗಿ ಪಾಲನೆ ಮಾಡುತ್ತಿಲ್ಲ. ಹೀಗಾಗಿಯೇ ಅರ್ಜಿದಾರ ಅಮೋಲ್ ಕಾಳೆಗೆ ಪಿಐಎಲ್ ಅರ್ಜಿ ಹಿಂಪಡೆಯುವಂತೆ ಅಧಿಕಾರಿಗಳು ಒತ್ತಾಯಿಸುತ್ತಿದ್ದಾರೆ ಎಂದು ಆರೋಪಿಸಿದರು.

ವಾದ ಆಲಿಸಿದ ಪೀಠ, ಅಮೋಲ್ ಕಾಳೆಗೆ ಹೊಸದಾಗಿ ವೈದ್ಯಕೀಯ ಪರೀಕ್ಷೆ ನಡೆಸಿ ವರದಿ ಸಲ್ಲಿಸುವಂತೆ ಜೈಲು ಪ್ರಾಧಿಕಾರಕ್ಕೆ ಸೂಚಿಸಿತಲ್ಲದೇ, ಜೈಲಿನಲ್ಲಿ ಕೋವಿಡ್ ಮಾರ್ಗಸೂಚಿಗಳನ್ನು ಪಾಲನೆ ಮಾಡುತ್ತಿರುವ ಕುರಿತು ಪ್ರಮಾಣ ಪತ್ರ ಸಲ್ಲಿಸುವಂತೆ ನಿರ್ದೇಶಿಸಿ, ವಿಚಾರಣೆಯನ್ನು ಅಕ್ಟೋಬರ್ 12ಕ್ಕೆ ಮುಂದೂಡಿತು.

ಹಿಂದಿನ ವಿಚಾರಣೆ ವೇಳೆ ಹೈಕೋರ್ಟ್ ಗೆ ಮಾಹಿತಿ ನೀಡಿದ್ದ ರಾಜ್ಯ ಸರಕಾರ, ರಾಜ್ಯದ 47 ಜೈಲುಗಳಲ್ಲಿ 668 ಮಂದಿ ಕೈದಿಗಳಿಗೆ ಕೊರೋನ ಸೋಂಕು ತಗಲಿದ್ದು, 585 ಮಂದಿ ಸಂಪೂರ್ಣ ಗುಣಮುಖರಾಗಿದ್ದಾರೆ. ಪ್ರಸಕ್ತ 83 ಕೈದಿಗಳಿಗೆ ಕೊರೋನ ಸೋಂಕು ಇದ್ದು. ಎಲ್ಲರಿಗೂ ಕೋವಿಡ್ ಆಸ್ಪತ್ರೆಗಳಲ್ಲಿ ಹಾಗೂ ಆರೈಕೆ ಕೇಂದ್ರಗಳಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಹಾಗೆಯೇ ಜೈಲುಗಳಲ್ಲಿ ಕೈದಿಗಳ ದಟ್ಟಣೆಯನ್ನು ಕಡಿಮೆ ಮಾಡಲು ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News